ಸಾರಾಂಶ
ಗಜೇಂದ್ರಗಡ: ಪಟ್ಟಣದ ದಿ. ಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಹಿಂದಿನ ಆಡಳಿತ ಮಂಡಳಿ ಮಂಡಳಿಯ ಸದಸ್ಯರನ್ನೇ ಮತದಾರರು ಪುನರಾಯ್ಕೆ ಮಾಡಿದ್ದಾರೆ.
ಸ್ಥಳೀಯ ಜಗದ್ಗುರು ತೋಂಟದಾರ್ಯ ಪ್ರೌಢಶಾಲೆಯಲ್ಲಿ ಬ್ಯಾಂಕಿನ ಸಾಮಾನ್ಯ ಕ್ಷೇತ್ರದ ೭ಸ್ಥಾನಗಳಿಗೆ ಚುನಾವಣೆಯ ಕಣದಲ್ಲಿ ೮ ಸ್ಪರ್ಧಿಗಳಿದ್ದರು. ಬೆಳಗ್ಗೆ ೯ ರಿಂದ ಸಂಜೆ ೪ರವರೆಗೆ ನಡೆದ ಮತದಾನದಲ್ಲಿ ಒಟ್ಟು ೭೧೮ ಮತದಾರರ ಪೈಕಿ ೬೬೮ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಪವಾಡೆಪ್ಪ ಬಸಪ್ಪ ಮ್ಯಾಗೇರಿ ಹಾಗೂ ಶಿದ್ದಪ್ಪ ಗುರುಶಾಂತಪ್ಪ ಬಂಡಿ ತಲಾ (೬೧೫) ಮತಗಳನ್ನು ಪಡೆದರೆ, ಕಲ್ಲಪ್ಪ ಸಂಗಪ್ಪ ಸಜ್ಜನರ (೫೫೦) ಬಸವರಾಜ ವೀರಭದ್ರಪ್ಪ ಕಂಬಳ್ಯಾಳ (೫೯೯) ವೀರೇಶ ಸಂಗನಬಸಪ್ಪ ನಂದಿಹಾಳ (೬೦೨) ಶಿದ್ದಲಿಂಗಪ್ಪ ಕಳಕಪ್ಪ ಕನಕೇರಿ (೫೯೨) ಹಾಗೂ ಸುರೇಶ ಕಾಳಕಪ್ಪ ಚನ್ನಿ (೫೧೫) ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಬಸವರಾಜ ಅಮರಪ್ಪ ಕೊಟಗಿ (೨೭೨) ಮತಗಳನ್ನು ಪಡೆದಿದ್ದರಿಂದ ಚುನಾವಣೆಯಲ್ಲಿ ಪರಾಭವಗೊಂಡರು.ಪಟ್ಟಣದ ದಿ. ಲಕ್ಷ್ಮೀ ಅರ್ಬನ್ ಕೋ-ಆಪ್ ಬ್ಯಾಂಕಿನ ಆಡಳಿತ ಮಂಡಳಿಗೆ ಒಟ್ಟು ೧೩ ಜನ ನಿರ್ದೇಶಕರಿದ್ದು, ೬ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಹೀಗಾಗಿ ಇನ್ನುಳಿದ ೭ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೮ ಜನರು ಆಕಾಂಕ್ಷಿಗಳಾಗಿದ್ದರಿಂದ ನಡೆದ ಚುನಾವಣೆ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಅಂತಿಮವಾಗಿ ಮತದಾರರು ಹಿಂದಿನ ನಿರ್ದೇಶಕರನ್ನೇ ಮತ್ತೆ ಬೆಂಬಲಿಸಿದ್ದರಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆಕಾಂಕ್ಷಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸುಹಾಸಕುಮಾರ ಮ್ಯಾಗೇರಿ, ಪಿ.ಎಸ್. ಕಡ್ಡಿ, ಪುರಸಭೆ ಸದಸ್ಯ ರಾಜು ಸಾಂಗ್ಲೀಕರ, ಶರಣಪ್ಪ ರೇವಡಿ, ಬಸವರಾಜ ವಾಲಿ, ಬಸವರಾಜ ಚನ್ನಿ, ನಾಗರಾಜ ಹಿರೇಕೊಪ್ಪ ಸೇರಿದಂತೆ ಇತರರು ಸಂಭ್ರಮಾಚರಣೆಯಲ್ಲಿದ್ದರು.ರೋಣ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ, ಜಿಲ್ಲಾ ಸಹಕಾರ ಸಂಘಗಳ ಸಹಾಯಕ ಉಪ ನಿಭಂದಕಿ ಪುಷ್ಪಾ ಕಡಿವಾಳ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಆರ್.ಕೆ.ಕವಡಿಮಟ್ಟಿ, ಕೆ.ವಿ.ಯರಗೇರಿ, ಎಸ್.ಎಸ್.ಡೊಳ್ಳಿನ, ಎಸ್.ಆರ್.ನಿಲೂರ ಸೇರಿ ಇತರರು ಇದ್ದರು.