ಸಾರಾಂಶ
- ಶೃಂಗೇರಿ ಕ್ಷೇತ್ರದಲ್ಲಿ ಸರ್ಕಾರದ ಕ್ರಮಕ್ಕೆ ವಿರೋಧ । ಬಿಜೆಪಿ ಪಕ್ಷ ಹಾಗೂ ಜೆಡಿಎಸ್ ಪಕ್ಷದ ಜಂಟಿ ಸುದ್ದಿ ಗೋಷ್ಠಿಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಶೃಂಗೇರಿ ಕ್ಷೇತ್ರದಲ್ಲಿ ಸರ್ಕಾರ ಯಾವುದೇ ರೈತರ ಜಮೀನು ತೆರವುಗೊಳಿಸಲು ಹೊರಟರೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ತಡೆಯಲಿದ್ದಾರೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಎಚ್ಚರಿಕೆ ನೀಡಿದರು.ಭಾನುವಾರ ಪತ್ರಿಕಾ ಭವನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ರೈತರ ಒತ್ತುವರಿ ಜಮೀನು ತೆರವುಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಕೇರಳದ ವೈನಾಡು, ಉತ್ತರ ಕನ್ನಡ ಜಿಲ್ಲೆ ಗುಡ್ಡ ಕುಸಿತದ ಕಾರಣ ಇಟ್ಟುಕೊಂಡು ಮಲೆನಾಡು ಭಾಗದ ರೈತರ ಒತ್ತುವರಿ ಜಮೀನು ತೆರವು ಮಾಡಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇಡೀ ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ಸರ್ಕಾರ ಗದಾ ಪ್ರಹಾರ ಮಾಡಿದೆ ಎಂದು ಟೀಕಿಸಿದರು.
ರೈತರ ಒತ್ತುವರಿಯಿಂದ ಗುಡ್ಡ ಕುಸಿತ ಕಂಡಿಲ್ಲ. ನಮ್ಮ ರೈತರು ಅರಣ್ಯ ಕಾಪಾಡಿಕೊಂಡು ಬಂದಿದ್ದಾರೆ. ಇದರಿಂದ ಮರಗಳ ಬೇರು ಮಣ್ಣು ಜರಿಯದಂತೆ ತಡೆಯುತ್ತಿದೆ. ಸರ್ಕಾರದ ಅವೈಜ್ಞಾನಿಕ ಕಾರಣದಿಂದಲೇ ಗುಡ್ಡ ಕುಸಿದಿವೆ. ಗುಡ್ಡಗಳಲ್ಲಿ ಇಂಗು ಗುಂಡಿ ಮಾಡುವುದು, ಗುಡ್ಡ ಸುತ್ತ ಟ್ರಂಚ್ ಹೊಡೆಯುವುದರಿಂದಲೂ ಸಹಜವಾಗಿ ಒಂದು ಮಾರ್ಗದಲ್ಲಿ ಹೋಗುತ್ತಿದ್ದ ಗುಡ್ಡದ ನೀರು ಬೇರೆ ಮಾರ್ಗದಲ್ಲಿ ಹೋಗುವ ಕಾರಣದಿಂದಲೂ ಗುಡ್ಡ ಕುಸಿಯುತ್ತಿದೆ. ಕೊಪ್ಪ ತಾಲೂಕಿನ ಕುಂಚೂರು ರಸ್ತೆ ಪಕ್ಕದಲ್ಲಿ ಗುಡ್ಡ ಕುಸಿದಿದೆ. ಇದಕ್ಕೆ ಕಾರಣ ರಸ್ತೆ ಬದಿ ಓಎಫ್ ಸಿ ಗಾಗಿ ಕಾಲುವೆ ತೆಗೆಯಲಾಗಿದೆ. ಇದನ್ನೂ ಸರಿಯಾಗಿ ಮುಚ್ಚಿಲ್ಲ. ಇದರ ಜೊತೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕಾಲುವೆ ತೆಗೆದಿದ್ದಾರೆ. ಅದನ್ನು ಮುಚ್ಚಿಲ್ಲ.ಈ ಕಾರಣಕ್ಕೆ ಅಲ್ಲಿ ಗುಡ್ಡ ಕುಸಿದಿದೆ ಎಂದರು.ಹೊಸ ಒತ್ತುವರಿ ಬೆಂಬಲಿಸಲ್ಲ :
ರೈತರು ನೂರಾರು ವರ್ಷದಿಂದ ಒತ್ತುವರಿ ಮಾಡಿ ಜೀವನ ನಡೆಸುತ್ತಿದ್ದಾರೆ. ಅಂತವರ ಜಮೀನು ತೆರವು ಮಾಡುವುದನ್ನು ವಿರೋಧಿಸುತ್ತೇವೆ. ಆದರೆ, ಹೊಸದಾಗಿ ಒತ್ತುವರಿ ಮಾಡಿದವರ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಿಲ್ಲುವುದಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದ ರೈತರ ಒತ್ತುವರಿ ತೆರವು ಮಾಡಲು ಹೊರಟರೆ ಒಟ್ಟಾಗಿ ವಿರೋಧಿಸುತ್ತೇವೆ. ಎಲ್ಲರೂ ರೈತರೇ ಆಗಿದ್ದಾರೆ. ರೈತರು ಒಗ್ಗಟ್ಟು ಕಾಪಾಡಬೇಕು ಎಂದರು.ಶೃಂಗೇರಿ ಕ್ಷೇತ್ರದ ಶಾಸಕರು ಸರ್ವೆ ಮಾಡಿಸಿ ಒತ್ತುವರಿ ತೆರವು ಮಾಡಿಸುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ. ಮೊದಲು ಅವೈಜ್ಞಾನಿಕವಾಗಿ ಮಾಡಿರುವ ಕೈಗಾರಿಕೆ, ಗುಡ್ಡದ ರೆಸಾರ್ಟ್ ತೆಗೆಯಿರಿ. ರೈತರ ಒತ್ತುವರಿ ಜಮೀನು ತೆರವು ಗೊಳಿಸು ತ್ತೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದಾಗ ಚಿಕ್ಕಮಗಳೂರು ಜಿಲ್ಲೆಯ 5 ಶಾಸಕರೂ ವಿರೋಧ ಮಾಡಬೇಕಿತ್ತು ಎಂದರು. ಅರಣ್ಯ ಸಚಿವರಿಗೆ ಅರಣ್ಯದ ಬಗ್ಗೆ ಮಾಹಿತಿ ಇರಬೇಕು. ಈ ಹಿಂದೆ ಅರಣ್ಯ ಸಚಿವರಾಗಿದ್ದ ಜೀವಿಜಯ ಒಬ್ಬರಿಗೆ ಮಾತ್ರ ಅರಣ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ನಂತರ ಬಂದ ಎಲ್ಲಾ ಅರಣ್ಯ ಸಚಿವರಿಗೆ ಅರಣ್ಯದ ಬಗ್ಗೆ ಸರಿಯಾದ ಅರಿವು ಇಲ್ಲ ಎಂದರು.
ಕಾಪಿ ತೋಟಗಳ ಒತ್ತುವರಿ ಜಮೀನನ್ನು ಆ ರೈತರಿಗೆ 30 ವರ್ಷಗಳ ಕಾಲ ಲೀಸ್ ಮೇಲೆ ನೀಡುವ ಕಾಯ್ದೆ ತಂದಿದ್ದು ಬಿಜೆಪಿ ಸರ್ಕಾರ. ಆದರೆ, ಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತರಲು ವಿಳಂಬ ನೀತಿ ಅನುಸರಿಸಿದೆ ಎಂದರು.ಶೃಂಗೇರಿ ಕ್ಷೇತ್ರದಲ್ಲಿ ಶಾಸಕರೂ ಇದ್ದಾರೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಈ ಮಳೆಗಾಲದಲ್ಲಿ ಕ್ಷೇತ್ರದಲ್ಲಿ 15 ದಿನ ವಿದ್ಯುತ್ ಇಲ್ಲದೆ ಕಗ್ಗತ್ತಲು ಆವರಿಸಿತ್ತು. ರಸ್ತೆಗಳೆಲ್ಲಾ ಕಿತ್ತು ಹೋಗುತ್ತಿದೆ. ಎಲೆಕಲ್ಲು ಹತ್ತಿರ ಕಳೆದ ವರ್ಷ ಹಾಕಿದ ಟಾರು ಈ ವರ್ಷವೇ ಕಿತ್ತು ಹೋಗಿದೆ. ನಾನು ಶಾಸಕನಾಗಿದ್ದಾಗ ಕೊಪ್ಪ- ಶಿವಮೊಗ್ಗ ರಸ್ತೆ ಮಾಡಿಸಿದ್ದೆ. 14 ವರ್ಷ ಆಗಿದ್ದರೂ ಇನ್ನೂ ಕಿತ್ತು ಹೋಗಿಲ್ಲ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಯಾವುದೇ ಗಿಡ ಕಡಿಯಬಾರದು ಎಂದು ಹೈಕೋರ್ಟೇ ನಿರ್ದೇಶನ ನೀಡಿದೆ. ಆದರೂ ಅರಣ್ಯ ಇಲಾಖೆಯವರು ಒತ್ತುವರಿ ತೆರವು ಸಂದರ್ಭದಲ್ಲಿ ಗಿಡ ಕಡಿಯುತ್ತಾರೆ. ಹಿಂದಿನ ಜನಸಂಖ್ಯೆಗೆ ಹೋಲಿಸಿದರೆ ಈಗ ಜನಸಂಖ್ಯೆ ಏರಿಕೆಯಾಗಿದೆ. ರೈತರು 1-2 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆ ನಡೆದರೆ ಜೆಡಿಎಸ್ ಪಕ್ಷ ವಿರೋಧಿಸಲಿದೆ ಎಂದರು.ಸುದ್ದಿ ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ ಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್,ಜೆಡಿಎಸ್ ಕಾರ್ಯಾಧ್ಯಕ್ಷ ಶಿವದಾಸ್, ಬಿಜೆಪಿ ಕೊಪ್ಪ ತಾಲೂಕು ಅಧ್ಯಕ್ಷ ಹೊಸೂರು ದಿನೇಶ್,ಶೃಂಗೇರಿ ತಾಲೂಕು ಬಿಜೆಪಿ ಅಧ್ಯಕ್ಷ ಉಮೇಶ್, ಬಿಜೆಪಿ ಪಕ್ಷದ ಎನ್.ಆರ್. ಪುರ ಮುಖಂಡರಾದ ಕೆಸವಿ ಮಂಜುನಾಥ್, ಎಚ್.ಡಿ.ಲೋಕೇಶ್, ಎನ್.ಎಂ.ಕಾಂತರಾಜ್,ಪರ್ವೀಜ್,ಶೃಂಗೇರಿ ಮುಖಂಡರಾದ ಅಂಗುರುಡಿ ದಿನೇಶ್,ನೂತನ್ ಕುಮಾರ್ ಇದ್ದರು.
--- ಬಾಕ್ಸ್ ---ರೈತ ಹಿತ ರಕ್ಷಣಾ ಸಮಿತಿಗೂ ಬೆಂಬಲ
ರೈತರ ಜಮೀನು ತೆರವು ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಜಂಟಿಯಾಗಿ ಗ್ರಾಮ ಮಟ್ಟದಲ್ಲಿ ರೈತರೊಂದಿಗೆ ಚರ್ಚೆ, ಸಂವಾದ, ಸಭೆ ನಡೆಸಲಿದೆ. ನಂತರ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತಾಲೂಕು ಕೇಂದ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಪ್ರತಿಭಟನೆ ಸಭೆ ನಡೆಸಲಿದೆ. ಪ್ರತಿಭಟನೆ ನಂತರವೂ ಸರ್ಕಾರ ರೈತರ ಒತ್ತುವರಿ ತೆರವು ಮಂದುವರಿಸಿದರೆ ಮುಂದಿನ ಹೋರಾಟ ಹೇಗಿರಬೇಕು ಎದು ಚರ್ಚೆ ನಡೆಸುತ್ತೇವೆ. ರೈತ ಹಿತ ರಕ್ಷಣಾ ಸಮಿತಿಯವರೂ ಸಹ ಹೋರಾಟ ಎತ್ತಿಕೊಂಡಿದ್ದಾರೆ. ಆ ಹೋರಾಟಕ್ಕೂ ಬಿಜೆಪಿ ಬೆಂಬಲಿಸಲಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.