ಇನ್ಮೇಲೆ ಒಂದೇ ಪಕ್ಷದಲ್ಲಿ ಡಿ.ಸುಧಾಕರ್‌, ಪೂರ್ಣಿಮಾ

| Published : Oct 21 2023, 12:31 AM IST

ಇನ್ಮೇಲೆ ಒಂದೇ ಪಕ್ಷದಲ್ಲಿ ಡಿ.ಸುಧಾಕರ್‌, ಪೂರ್ಣಿಮಾ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮೆಲ್ಲರ ನಾಯಕರೂ, ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅಣ್ಣನವರೇ...,ಹಿರಿಯೂರು ತಾಲೂಕಿನಲ್ಲಿ ಇನ್ಮೇಲೆ ಎಲ್ಲಿಯೇ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ನಡೆಯಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಭಾಷಣ ಹೀಗೆ ಆರಂಭವಾಗುತ್ತದೆ. ಕಳೆದೆರೆಡು ಚುನಾವಣೆಗಳಲ್ಲಿ ಸಾಂಪ್ರದಾಯಿಕ ಎದುರಾಳಿಯೆಂದೇ ಸುಧಾಕರ್ ಅವರನ್ನು ಪೂರ್ಣಿಮಾ ಶ್ರೀನಿವಾಸ್ ಪರಿಗಣಿಸಿದ್ದರು. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್ ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದು ಮಾತಿನ ಧಾಟಿ ಬದಲಾಗಲು ಕಾರಣವಾಗಿದೆ.

ನಮ್ಮೆಲ್ಲರ ನಾಯಕರೂ, ಸಚಿವರಾದ ಡಿ.ಸುಧಾಕರ್ ಅಣ್ಣನವರೇ..। ಇನ್ಮೇಲೆ ಹೀಗೆ ಆರಂಭವಾಗುತ್ತೆ ಪೂರ್ಣಿಮಾ ಶ್ರೀನಿವಾಸ್ ಭಾಷಣ.

ಸಿದ್ದರಾಮಯ್ಯ, ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ । ನಿಗೂಡವಾಗೇ ಉಳಿದ ಮಾಜಿ ಶಾಸಕಿ ಪೂರ್ಣಿಮಾ ರಾಜಕೀಯ ನಡೆ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಮ್ಮೆಲ್ಲರ ನಾಯಕರೂ, ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅಣ್ಣನವರೇ...,

ಹಿರಿಯೂರು ತಾಲೂಕಿನಲ್ಲಿ ಇನ್ಮೇಲೆ ಎಲ್ಲಿಯೇ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ನಡೆಯಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಭಾಷಣ ಹೀಗೆ ಆರಂಭವಾಗುತ್ತದೆ. ಕಳೆದೆರೆಡು ಚುನಾವಣೆಗಳಲ್ಲಿ ಸಾಂಪ್ರದಾಯಿಕ ಎದುರಾಳಿಯೆಂದೇ ಸುಧಾಕರ್ ಅವರನ್ನು ಪೂರ್ಣಿಮಾ ಶ್ರೀನಿವಾಸ್ ಪರಿಗಣಿಸಿದ್ದರು. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್ ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದು ಮಾತಿನ ಧಾಟಿ ಬದಲಾಗಲು ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರನ್ನು ನಮ್ಮೆಲ್ಲರ ನೆಚ್ಚಿನ ನಾಯಕ ಎಂದೇ ಸಂಭೋಧಿಸಿ ಮಾತು ಆರಂಭಿಸಬೇಕಾದ ಅನಿವಾರ್ಯತೆ ಪೂರ್ಣಿಮಾ ಶ್ರೀನಿವಾಸ್ ಗೆ ಸೃಷ್ಟಿಯಾಗಿದೆ. ಡಿ.ಸುಧಾಕರ್ ಆಗಮನದ ನಿರೀಕ್ಷೆಗೆ ತಾಸುಗಟ್ಟಲೆ ಹಿರಿಯೂರು ಐಬಿಯಲ್ಲಿ ಪೂರ್ಣಿಮಾ ಹಾಗೂ ಶ್ರೀನಿವಾಸ್ ಗತ್ಯಂತರವಿಲ್ಲದೇ ಕಾಯಬೇಕಾಗಿದೆ.

ಯಾದವ ಸಮುದಾಯದ ಮತಗಳು ಹೆಚ್ಚು ಇವೆ ಎಂಬ ಕಾರಣಕ್ಕೆ ಕಾಂಗ್ರೆಸ್ ತೊರೆದು ದೂರದ ಬೆಂಗಳೂರಿನಿಂದ ಹಿರಿಯೂರಿಗೆ ಬಂದು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಪೂರ್ಣಿಮಾ, ತಂದೆ ಕೃಷ್ಣಪ್ಪ ಹಾಕಿ ಕೊಟ್ಟ ಯಾದವ ಮತಗಳ ಅಡಿಪಾಯದ ಮೇಲೆ ರಾಜಕೀಯದ ಭದ್ರ ನೆಲೆ ಕಂಡುಕೊಂಡಿದ್ದರು. ಕಾಂಗ್ರೆಸ್ ಗಿಂತ ಮಿಗಿಲಾಗಿ ಡಿ.ಸುಧಾಕರ್ ಅವರನ್ನು ಟೀಕಿಸುತ್ತಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶ ಇಬ್ಬರನ್ನು ಕಾಂಗ್ರೆಸ್ ಮನೆಯ ಪ್ರತಿನಿಧಿಗಳನ್ನಾಗಿ ಮಾಡಿದೆ.

ವಿವಿ ಸಾಗರ ಜಲಾಶಯದಿಂದ ಚಳ್ಳಕೆರೆ ತಾಲೂಕಿಗೆ ನೀರು ಬಿಡುವ ವಿಚಾರದಲ್ಲಿ ಚಳ್ಳಕೆರೆ ಕಾಂಗ್ರೆಸ್ ನಾಯಕರು ಹಾಗೂ ರೈತಾಪಿ ಸಮುದಾಯವ ಪೂರ್ಣಿಮಾ ಎದುರು ಹಾಕಿಕೊಂಡಿದ್ದರು. ತಮ್ಮ ಪತಿ ಶ್ರೀನಿವಾಸ್ ಜೊತೆಗೂಡಿ ವಿವಿ ಸಾಗರ ಜಲಾಶಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಚಳ್ಳಕೆರೆ ಗೆ ಬಿಟ್ಟಿದ್ದ ನೀರನ್ನು ಬಂದ್ ಮಾಡಿದ್ದರು. ಪೂರ್ಣಿಮಾ ಹಾಗೂ ಶ್ರೀನಿವಾಸ್ ಅವರ ಈ ನಡೆ ಅಚ್ಚರಿ ಮೂಡಿಸಿತ್ತು. ಚಳ್ಳಕೆರೆಗೆ ಬಿಟ್ಟ ನೀರನ್ನು ಬಂದ್ ಮಾಡಿದ ಆ ದೃಶ್ಯಾವಳಿಗಳು ಜನರ ಮನದಿಂದ ಇನ್ನೂ ಮರೆಯಾಗಿಲ್ಲ.

ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿದ್ದರು:

ಪೂರ್ಣಿಮಾ ಮತ್ತು ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೂರ್ಣಿಮಾ ಮತ್ತು ಶ್ರೀನಿವಾಸ್ ಸಾಮಾಜಿಕ ನ್ಯಾಯದ ಪರವಾಗಿರುವವರು. ಒಲ್ಲದ ಮನಸ್ಸಿನಿಂದ ಬಿಜೆಪಿ ಯಲ್ಲಿದ್ದರು. ಪೂರ್ಣಿಮಾ ಅವರಿಗೆ ರಾಜಕೀಯವಾಗಿ ಅನ್ಯಾಯ ಆಗಲು ಬಿಡುವುದಿಲ್ಲ ಎಂದಿದ್ದಾರೆ.

ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಪರವಾಗಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಿ ಎ.ಕೃಷ್ಣಪ್ಪ, ಪೂರ್ಣಿಮಾ ಮತ್ತು ಶ್ರೀನಿವಾಸ್ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಜಾತಿಯ ಬಡವರು ಮತ್ತು ಶೂದ್ರ ಸಮುದಾಯದವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ರಾಜಕೀಯ ನಿಲುವು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

ಪೂರ್ಣಿಮಾ, ಶ್ರೀನಿವಾಸ್ ಮತ್ತು ಇವರ ಬೆಂಬಲಿಗರಿಗೆ ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಇಲ್ಲ ಎನ್ನುವುದು ಸ್ಪಷ್ಟವಾಗಿ ಮನದಟ್ಟಾಗಿದೆ. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ನಿಲುವು ಇಟ್ಟುಕೊಂಡಿರುವವರಿಗೆ ಬಹಳ ಕಷ್ಟ ಎನ್ನುವುದು ಇವರನ್ನು ನೋಡಿದಾಗ ಸ್ಪಷ್ಟವಾಗಿದೆ ಎಂದರು. ಅದಕ್ಕೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಿಂದುಳಿದ ಸಮುದಾಯಗಳು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.

ಪೂರ್ಣಿಮಾ ಶ್ರೀನಿವಾಸ್ ಮುಂದೇನು?

ಪೂರ್ಣಿಮಾ ಮತ್ತು ಪತಿ ಶ್ರೀನಿವಾಸ್ ರಾಜಕೀಯ ಭವಿಷ್ಯ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ವೇಳೆ ಪೂರ್ಣಿಮಾ ತುಮಕೂರು ಕ್ಷೇತ್ರದಿಂದ ಟಿಕೆಟ್ ಕೇಳಬಹುದು, ಶ್ರೀನಿವಾಸ್ ವಿಧಾನ ಪರಿಷತ್ತಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ವಿಧಾನ ಪರಿಷತ್ತಿಗೆ ಪಧವೀದರರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಶ್ರೀನಿವಾಸ್ ಸೋಲುಂಡಿದ್ದರು. ಹಾಗಾಗಿ ಅದೇ ಅಂಶವ ಪ್ರಧಾನವಾಗಿರಿಸಿ ಕೊಂಡು ಟಿಕೆಟ್ ಕೇಳುವ ಸಾಧ್ಯತೆಗಳಿವೆ.

ತುಮಕೂರು ಜಿಲ್ಲೆಯಲ್ಲಿ ಯಾದವ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಸಹಜವಾಗಿಯೇ ಪೂರ್ಣಿಮಾ ಟಿಕೆಟ್ ಕೇಳಬಹುದು. ಹಿಂದುಳಿದ ಸಮುದಾಯದ ಮಹಿಳೆ ಎಂಬ ಫ್ಲಸ್ ಪಾಯಿಂಟ್ ಕೂಡ ಅವರದ್ದಾಗಬಹುದು.