ಕನ್ನಡಪ್ರಭವಾರ್ತೆ ಬಂಗಾರಪೇಟೆ
ಆಧುನಿಕ ಸರ್ವಜ್ಞ, ಪದ್ಮಭೂಷಣ ಪುರಸ್ಕೃತ ಡಾ.ಡಿ.ವಿ.ಗುಂಡಪ್ಪನವರು ಕೇವಲ ಸಾಹಿತಿಯಲ್ಲ; ಅವರು ಶ್ರೇಷ್ಠ ಪತ್ರಿಕೋದ್ಯಮಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಅಮರರಾಗಿರುವ ಮಹಾನ್ ಚೇತನ. ಅವರು ಕೋಲಾರ ಜಿಲ್ಲೆಯವರು ಎಂಬುದು ಹೆಮ್ಮೆ ಎಂದು ಉಪನ್ಯಾಸಕ ಡಾ. ಶ್ರೀನಿವಾಸಪ್ರಸಾದ್ ಬಣ್ಣಿಸಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬಂಗಾರಪೇಟೆ ತಾಲೂಕು ಅನಿಕೇತನ ಕನ್ನಡ ಬಳಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಿವಿಜಿಯವರ 139ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಮಗೆ ಬಂದ ಒಂದು ಲಕ್ಷ ರು. ಗೌರವ ಧನವನ್ನು ಸ್ವಂತಕ್ಕೆ ಬಳಸದೆ ಗೋಖಲೆ ಸಾರ್ವಜನಿಕ ಸಂಸ್ಥೆಗೆ ನೀಡಿದ ಅವರ ದಾನಗುಣ ಅನನ್ಯ. ನಾನು ಸಾಹಿತಿಯಲ್ಲ, ಪತ್ರಕರ್ತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಅವರ ವೃತ್ತಿ ನಿಷ್ಠೆ ಇಂದಿನವರಿಗೆ ಮಾದರಿ ಎಂದು ತಿಳಿಸಿದರು.
ನೂತನ ಸಿವಿಲ್ ನ್ಯಾಯಾಧೀಶೆ ಅಶ್ವಿನಿ ಶ್ಯಾಮ್ ಕುಮಾರ್ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದಿ, ಸತತ ಎಂಟು ಪ್ರಯತ್ನಗಳ ನಂತರ ಈ ಸ್ಥಾನಕ್ಕೇರಿದ್ದೇನೆ. ಶ್ರದ್ಧೆ ಮತ್ತು ಹಿರಿಯರ ಬೆಂಬಲವಿದ್ದರೆ ಗ್ರಾಮೀಣ ವಿದ್ಯಾರ್ಥಿಗಳೂ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ತಮ್ಮ ಯಶಸ್ಸಿನ ಹಾದಿಯನ್ನು ಹಂಚಿಕೊಂಡರು.ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ಎಂ.ಎಸ್. ರಾಮಪ್ರಸಾದ್ ಮಾತನಾಡಿ ಕನ್ನಡದ ಕಾರ್ಯಕ್ರಮಗಳು ಕೇವಲ ನಗರಗಳಿಗೆ ಸೀಮಿತವಾಗಬಾರದು. ಜಿಲ್ಲೆಯ ಪ್ರತಿ ಹಳ್ಳಿಗೂ ಡಿವಿಜಿಯವರ ಜೀವನ ದರ್ಶನ ಮತ್ತು ಸಾಹಿತ್ಯದ ಸಾರ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರತಿಪಾದಿಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಶಕುಂತಲಾ, ನಾಗಾನಂದ ಕೆಂಪರಾಜ್, ವಾಣಿ ಪ್ರಹ್ಲಾದ ರಾವ್, ಕಸಾಪ ತಾಲೂಕು ಅಧ್ಯಕ್ಷ ಅಶ್ವತ್, ಗುರುದತ್, ರಮೇಶ್ ಬಾಬು, ಲಾಯರ್ ಜಯಪ್ರಕಾಶ್, ಕೇಶವಮೂರ್ತಿ, ಪ್ರಹ್ಲಾದ ರಾವ್, ಪ್ರಾಧ್ಯಾಪಕ ವೇಣುಗೋಪಾಲ್ ಹಾಗೂ ನಾಗರಾಜ್ ಶಂಕರ್ ಮಠ , ಪ್ರಾಧ್ಯಾಪಕ ಗಂಗರಾಜು ಉಪಸ್ಥಿತರಿದ್ದರು.