ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ದಡದಕಲ್ಲಹಳ್ಳಿ, ಯಾಚೇಗೌಡಹಳ್ಳಿ ಮತ್ತು ಹೊಸಕೋಟೆ ಗ್ರಾಮಗಳ ಅಭಿವೃದ್ಧಿಗೆ 4.83 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಜಿ.ಟಿ. ದೇವೇಗೌಡ ಮಂಗಳವಾರ ಚಾಲನೆ ನೀಡಿದರು.ದಡದಕಲ್ಲಹಳ್ಳಿ ಗ್ರಾಮದಲ್ಲಿ 80 ಲಕ್ಷ ವೆಚ್ಚದಲ್ಲಿ ಗ್ರಾಮದ ಪರಿಮಿತಿಯ ರಸ್ತೆಗಳ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು. ಈ ವೇಳೆ ಕೆಲವು ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆಯಾಗುತ್ತಿದ್ದು, ನಿರಂತರ ವಿದ್ಯುತ್ ಸಂಪರ್ಕವನ್ನು ಒದಗಿಸಲು ಗ್ರಾಮಸ್ಥರು ಕೋರಿದರು. ಸೆಸ್ಕ್ ಅಧೀಕ್ಷಕ ಎಂಜಿನಿಯರ್ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಕೂಡಲೇ ಸದರಿ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕವನ್ನು ಒದಗಿಸಲು ಸೂಚಿಸಿದರು.
ಹೊಸಕೋಟೆಯಿಂದ ಯಾಚೇಗೌಡನಹಳ್ಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯಾಚೇಗೌಡನಹಳ್ಳಿ ಗ್ರಾಮದ ಪರಿಮಿತಿಯಲ್ಲಿ 23 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಿದರು.ಯಾಚೇಗೌಡನಹಳ್ಳಿ ಗ್ರಾಮದಿಂದ ಕಾವೇರಿ ಹಿನ್ನೀರಿಗೆ ಹೋಗುವ ರಸ್ತೆ ಹಾಳಾಗಿದ್ದು, ಸದರಿ ರಸ್ತೆಯನ್ನು ಅಭಿವೃದ್ಧಿಪಡಿಸಿಕೊಡುವಂತೆ ಅಲ್ಲಿನ ರೈತರು ಕೋರಿದರು. ಶಾಸಕರು ಮುಂದಿನ ಅನುದಾನದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದರು.
ಬಸ್ ಸೌಲಭ್ಯ ಕುರಿತು ಅಲ್ಲಿನ ಶಾಲಾ ಮಕ್ಕಳು ತಿಳಿಸಿದಾಗ ಕೂಡಲೇ ವಿಭಾಗೀಯ ನಿಯಂತ್ರಣಾಧಿಕಾರಿಳಾದ ವೀರೇಶ್ ಅವರಿಗೆ ದೂರವಾಣಿ ಮೂಲಕ ತಿಳಿಸಿ, ಕೂಡಲೇ ಬಸ್ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.
80 ಲಕ್ಷ ರೂ. ವೆಚ್ಚದಲ್ಲಿ ಹೊಸಕೋಟೆ ಗ್ರಾಮದ ಪರಿಮಿತಿಯಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವಂತೆ ಕೋರಿದರು. ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಎಚ್.ಎಸ್. ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷ ಯೋಗಮೂರ್ತಿ, ಮಾಜಿ ಸದಸ್ಯ ಲೋಕೇಶ್, ಮುಖಂಡರಾದ ವೀರಭದ್ರಸ್ವಾಮಿ, ಸಿದ್ದಲಿಂಗಪ್ಪ, ಮಂಜು, ಮುಕುಂದ, ವೆಂಕಟೇಶ್, ಸೋಮಶೇಖರ್, ನಾಗೇಂದ್ರ, ನಂಜುಂಡೇಗೌಡ, ಮಲ್ಲೇಶ್, ಶಿವಣ್ಣ, ತಿಲಕ್, ಶರತ್, ಪರಶುರಾಮ್, ತಿಮ್ಮೇಗೌಡ, ಕೆಂಪೇಗೌಡ, ಬಸವರಾಜು, ರಾಮಕೃಷ್ಣೇಗೌಡ, ವೆಂಕಟೇಶ್, ಮಹದೇವು, ಪುನೀತ್ ಗೌಡ, ಶಿವರಾಮು, ಲೋಕೇಶ್, ರಘು, ಲೋಕೇಶ್, ಯೋಗೇಶ್ ಮೊದಲಾದವರು ಇದ್ದರು.