ಹರಪನಹಳ್ಳಿ: ಹೈಸ್ಕೂಲ್‌ ಕಲಿಕೆಗೆ ನಿತ್ಯ 4 ಕಿಮೀ ನಡಿಗೆ!

| Published : Jan 13 2024, 01:32 AM IST

ಸಾರಾಂಶ

ಬಾಗಳಿಯಿಂದ ಕೋಡಿಹಳ್ಳಿ 4 ಕಿಮೀ ದೂರವಾದರೆ, ಶೃಂಗರತೋಟದಿಂದ ಬಾಗಳಿ 3 ಕಿಮೀ ದೂರದಲ್ಲಿದೆ. ಈ ಗ್ರಾಮದ ವಿದ್ಯಾರ್ಥಿಗಳು ತಮ್ಮ ಮನೆಯಿಂದ ಶಾಲಾ ಸಮಯಕ್ಕಿಂತ 1 ಗಂಟೆಗೂ ಮುನ್ನವೇ ಶಾಲೆಗೆ ತೆರಳುತ್ತಾರೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಸಾರಿಗೆ ಸೌಲಭ್ಯ ಇಲ್ಲದೆ ಪ್ರತಿದಿನ ಕಾಲ್ನಡಿಗೆಯಲ್ಲಿಯೇ ಬಾಗಳಿ ಗ್ರಾಮದ ಪ್ರೌಢಶಾಲೆಗೆ ಹೋಗಿಬರಬೇಕಾದ ದುಸ್ಥಿತಿ ತಾಲೂಕಿನ ಕೋಡಿಹಳ್ಳಿ ಹಾಗೂ ಶೃಂಗಾರತೋಟ ಗ್ರಾಮದ ವಿದ್ಯಾರ್ಥಿಗಳಿಗೆ ಬಂದೋದಗಿದೆ.

ಬಾಗಳಿ ಗ್ರಾಮದ ಅನುದಾನಿತ ಪ್ರೌಢಶಾಲೆಗೆ ನಿತ್ಯವೂ ಕೋಡಿಹಳ್ಳಿ ಹಾಗೂ ಶೃಂಗಾರತೋಟ ಗ್ರಾಮದಿಂದ ಸುಮಾರು 80 ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಬಾಗಳಿಯಿಂದ ಕೋಡಿಹಳ್ಳಿ 4 ಕಿಮೀ ದೂರವಾದರೆ, ಶೃಂಗರತೋಟದಿಂದ ಬಾಗಳಿ 3 ಕಿಮೀ ದೂರದಲ್ಲಿದೆ. ಈ ಗ್ರಾಮದ ವಿದ್ಯಾರ್ಥಿಗಳು ತಮ್ಮ ಮನೆಯಿಂದ ಶಾಲಾ ಸಮಯಕ್ಕಿಂತ 1 ಗಂಟೆಗೂ ಮುನ್ನವೇ ಶಾಲೆಗೆ ತೆರಳುತ್ತಾರೆ.

ಇತ್ತೀಚೆಗೆ ಬಾಗಳಿ ಪ್ರೌಢಶಾಲೆಯಿಂದ ಕೋಡಿಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸಂಜೆ ಎ. ಕಾವ್ಯ ಹಾಗೂ ಕಲ್ಪನಾ ಎಂಬ ವಿದ್ಯಾರ್ಥಿನಿಯರಿಗೆ ಹಾವು ಕಚ್ಚಿದ್ದು, ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಶಾಲೆಗೆ ಮರಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ತರಗತಿಯನ್ನು ತೆಗೆದುಕೊಳ್ಳುವುದರಿಂದ ಸಂಜೆ 5.30ರಿಂದ 6ರ ನಂತರ ಊರುಗಳಿಗೆ ನಡೆದುಕೊಂಡು ಹೋಗಬೇಕಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದು, ಕೆಲವೊಮ್ಮೆ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗಲು ಬರುತ್ತಾರೆ.

ವಿಷಜಂತುಗಳ ಕಾಟ: ಗ್ರಾಮದ ಮಧ್ಯದಲ್ಲಿ ವಿಶಾಲವಾದ ಕೆರೆ ಹೊಂದಿದ್ದು, ಅದರ ಅಂಗಳದಲ್ಲಿ ಜಾಲಿಗಿಡಗಳು ಬೆಳೆದಿವೆ. ಅಲ್ಲದೇ ಕೆರೆಯಲ್ಲಿನ ನೀರಿನ ಪ್ರಮಾಣ ಕುಸಿತವಾಗುತ್ತಿದೆ. ಇದರಿಂದ ಕೆರೆಯಲ್ಲಿದ್ದ ಚೇಳು, ಹಾವು ಸೇರಿದಂತೆ ವಿಷಜಂತುಗಳು ರಸ್ತೆ ಹಾಗೂ ಎಲ್ಲೆಂದರಲ್ಲಿ ಹೊರಗೆ ಓಡಾಡುತ್ತಿವೆ. ರಸ್ತೆಯಲ್ಲಿ ಓಡಾಡುವವರಿಗೆ ವಿಷಜಂತುಗಳು ಕಾಣಿಸಿಕೊಳ್ಳುವುದರಿಂದ ಭಯದಲ್ಲಿ ಸಾಗಬೇಕಿದೆ.

ಸೈಕಲ್ ಕೊಡಿ: ಪ್ರತಿನಿತ್ಯ ನಮ್ಮ ಊರಿನಿಂದ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ರಸ್ತೆಯಲ್ಲಿ ವಿಷಜಂತುಗಳ ಕಾಟ ಇದ್ದು, ನಮಗೆ ಸೈಕಲ್ ಕೊಡಿ. ಇಲ್ಲದಿದ್ದರೆ ಶಾಲಾ ಸಮಯಕ್ಕೆ ಬಸ್‌ ಓಡಿಸಬೇಕು. ಇದರಿಂದ ಶಿಕ್ಷಣ ಮುಂದುವರಿಸಲು ನೆರವಾಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು ಹಾಗೂ ಪೋಷಕರು.ಬಸ್‌ ಬಿಡಿ: ನಿತ್ಯವು ನಮಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಲು ಬಸ್ ಇರುವುದಿಲ್ಲ. ನಡೆದು ಹೋಗುವಾಗ ವಿಷಜಂತುಗಳ ಕಾಟವಿದೆ. ಆದ್ದರಿಂದ ನಮಗೆ ಸರ್ಕಾರದಿಂದ ಸೈಕಲಾದ್ರೂ ಕೊಡಬೇಕು. ಇಲ್ಲದಿದ್ದರೆ ಸಮಯಕ್ಕೆ ಸರಿಯಾಗಿ ಬಸ್‌ ಬಿಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.ವ್ಯವಸ್ಥಾಪಕರಿಗೆ ಮನವಿ: ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಸೌಲಭ್ಯವನ್ನು ಒದಗಿಸುವಂತೆ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದೇವೆ ಎಂದು ಬಿಇಒ ಯು. ಬಸವರಾಜಪ್ಪ ತಿಳಿಸಿದರು.ವಿದ್ಯಾರ್ಥಿಗಳಿಗೆ ತೊಂದರೆ: ಕೋಡಿಹಳ್ಳಿ ಹಾಗೂ ಶೃಂಗಾರತೋಟ ಗ್ರಾಮದ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಇಲ್ಲದೇ ಸಾಕಷ್ಟು ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟವರು ಸಾರಿಗೆ ಸೌಕರ್ಯವನ್ನು ಕಲ್ಪಿಸಬೇಕು ಎಂದು ಪೋಷಕರಾದ ಅಣಜಿ ಗುರುಬಸವರಾಜ ಒತ್ತಾಯಿಸಿದರು.