ಭಯದ ನೆರಳಲ್ಲಿಯೇ ಮಕ್ಕಳಿಗೆ ನಿತ್ಯ ಪಾಠ..!

| Published : Jun 09 2024, 01:32 AM IST

ಸಾರಾಂಶ

ಔರಾದ್‌ ತಾಲೂಕಿನ ಜೀರ್ಗಾ (ಬಿ) ಸರ್ಕಾರಿ ಶಾಲಾ ಕಟ್ಟಡ ಶಿಥಿಲ, ಆವರಣದಲ್ಲೇ ಪಾಠ. 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯಿದ್ದು, ಕೊಠಡಿಗಳ ಕೊರತೆಯಿಂದಾಗಿ ಮಕ್ಕಳನ್ನು ಶಾಲೆ ಅಂಗಳದಲ್ಲಿ ಕೂರಿಸಿಕೊಂಡು ಬೋಧಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಔರಾದ್‌

ತಾಲೂಕಿನ ಜಿರ್ಗಾ (ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು ಭಯದ ವಾತಾವರಣದಲ್ಲೇ ಪಾಠ ಕೇಳುವಂತಾಗಿದೆ.

ಶಾಲೆಯಲ್ಲಿ 1ರಿಂದ 7ನೇ ತರಗತಿಯ ವರೆಗೆ 37 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇರುವ 4 ಕೊಠಡಿಗಳಲ್ಲಿ ಒಂದು ಕೊಠಡಿಯನ್ನು ಮುಖ್ಯ ಶಿಕ್ಷಕರು ತಮ್ಮ ಕಚೇರಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಕೊಠಡಿಯನ್ನು ನಲಿಕಲಿ ಯೋಜನೆಯಡಿ 1ರಿಂದ 3 ನೇ ತರಗತಿ ಮಕ್ಕಳಿಗೆ ಪಾಠ ಬೋಧಿಸಲು ಬಳಸಿಕೊಳ್ಳಲಾಗುತ್ತಿದೆ. ಇನ್ನೊಂದು ಕೊಠಡಿಯನ್ನು ಬಿಸಿಯೂಟಕ್ಕೆ ಉಪಯೋಗಿಸಲಾಗುತ್ತಿದೆ.

4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯಿದ್ದು, ಕೊಠಡಿಗಳ ಕೊರತೆಯಿಂದಾಗಿ ಮಕ್ಕಳನ್ನು ಶಾಲೆ ಅಂಗಳದಲ್ಲಿ ಕೂರಿಸಿಕೊಂಡು ಬೋಧಿಸಲಾಗುತ್ತಿದೆ. ನಾಲ್ಕು ಕೊಠಡಿಗಳಲ್ಲಿ ಚಾವಣಿ ಶಿಥಿಲಗೊಂಡಿದ್ದು, ಮಳೆ ಬಂದರೆ ನೀರು ಸೋರಿಕೆಯಾಗುತ್ತಿದೆ.

ಕುಡಿಯುವ ನೀರಿಲ್ಲ:

ಶಾಲೆಯು ಶಿಥಿಲಾವಸ್ಥೆ ತಲುಪಿರುವುದು ಒಂದು ಕಡೆಯಾದರೆ ಅಡುಗೆ ಮಾಡಲು ಹಾಗೂ ಕುಡಿಯಲು ಶುದ್ಧ ನೀರಿನ ಸಮಸ್ಯೆ ಕಾಡುತ್ತಿದೆ. ವಿದ್ಯಾರ್ಥಿಗಳು ಮನೆಯಿಂದಲೇ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.

50 ವರ್ಷದ ಹಿಂದೆ ನಿರ್ಮಿಸಲಾದ ಶಾಲಾ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಶಾಲೆಯಲ್ಲಿ ಸರಿಯಾದ ವಿದ್ಯುತ್‌ ಸಂಪರ್ಕ ಹಾಗೂ ಸುತ್ತು ಗೋಡೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ಶಾಲೆಗಳ ಅಭಿವೃದ್ಧಿ ಕಡೆ ಗಮನಹರಿಸದ ಅಧಿಕಾರಿ, ಜನಪ್ರತಿನಿಧಿಗಳು: ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳು ಶಿಥಿಲ ವ್ಯವಸ್ಥೆಯಿಂದ ಕೂಡಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಯಾವುದೇ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಶಾಲೆಯು ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳು ಭಯದ ವಾತಾವರಣದಲ್ಲೇ ಓದನ್ನು ಮುಂದುವರಿಸುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಇದೆ. ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಲೆಯನ್ನು ದುರಸ್ತಿ ಮಾಡಿಸಿ, ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು.

- ತುಕಾರಾಮ ಹಸನ್ಮುಖಿ, ಸಾಮಾಜಿಕ ಕಾರ್ಯಕರ್ತ

ಶಾಲಾ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವುದು ಗಮನಕ್ಕೆ ಬಂದಿದೆ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಕಟ್ಟಡವನ್ನು ದುರಸ್ತಿ ಮಾಡುವ ಕಾರ್ಯ ಕೈಗೊಳ್ಳುತ್ತೇನೆ.

- ತುಳಸಿರಾಮ ದೊಡ್ಡಿ, ಬಿಇಒ ಔರಾದ್‌