ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅರಣ್ಯ ಇಲಾಖೆಯ ದಿನಗೂಲಿ ನೌಕರರು ನಗರದ ಅರಣ್ಯ ಇಲಾಖೆ ಕಚೇರಿ ಬಳಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.ಅರಣ್ಯ ಇಲಾಖೆ ಕಚೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ದಿನವಿಡೀ ಧರಣಿ ನಡೆಸಿದರು.
ವನ್ಯಜೀವಿ ಘಟಕ ಪ್ರಾದೇಶಿಕ ವಿಭಾಗಗಳ ೨ ಸಾವಿರಕ್ಕೂ ಹೆಚ್ಚು ನೌಕರರನ್ನು ಇಲಾಖೆ ೨೦೧೭- ೧೮ನೇ ಸಾಲಿನಿಂದ ಹೊರ ಗುತ್ತಿಗೆ ಎಂಬ ಪದನಾಮ ಕೊಟ್ಟು ಏಜೆನ್ಸಿಗಳಿಗೆ ವಹಿಸಲಾಗಿದ್ದು, ಈ ಬಗ್ಗೆ ನೌಕರರ ಸಂಘ ಪ್ರಶ್ನೆ ಮಾಡಿದಾಗ ಸಾಮಾಜಿಕ ಭದ್ರತೆ ಅಡಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ ಎಂದು ಕಿಡಿಕಾರಿದರು.ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಇಲಾಖೆಯೇ ಸ್ವಯಂ ತೀರ್ಮಾನದಿಂದ ಮೂಲಹುದ್ದೆಯನ್ನು ವ್ಯತ್ಯಾಸಗೊಳಿಸಿ ೨೦೧೭-೧೮ರ ಏಜೆನ್ಸಿಗಳಿಗೆ ವಹಿಸಿರುವ ಆದೇಶ ಹಿಂದಕ್ಕೆ ಪಡೆದು ಇಲಾಖೆಯೇ ಸಂಬಳ ಪಾವತಿಸಬೇಕು. ಹೊರಗುತ್ತಿಗೆ ೨೦೧೭- ೧೮ರಿಂದ ಜಾರಿಯಾದಲ್ಲಿ ನೌಕರರಿಗೆ ದಿನಗೂಲಿ ಆಧಾರದಲ್ಲಿ ಸೇವೆ ಸಲ್ಲಿಸಲು ೧೫- ೨೦ ವರ್ಷಗಳಿಂದ ಸಿಗುವ ಸೌಲಭ್ಯ ಬೇಕು ಎಂದು ಒತ್ತಾಯಿಸಿದರು.
ಪ್ರಾದೇಶಕ ವಲಯಗಳ ಯಾವುದೇ ವೀಕ್ಷಕ, ಕಾವಲುಗಾರ ನೆಡುತೋಪು ಕಾವಲುಗಾರರಿಗೆ ಇಎಸ್‌ಐ ಮತ್ತು ಪಿಎಫ್ ಪಾವತಿಸಿರುವುದಿಲ್ಲ. ಇದು ಯಾವ ಸೀಮೆಯ ಗುತ್ತಿಗೆ ಪದ್ಧತಿ ಜಾರಿ, ನೌಕರರ ವಿಮೆ ಹಣ ಎಲ್ಲಿಗೆ ಹೋಗುತ್ತಿದೆ ಎಂಬ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.ಸರ್ಕಾರದ ಆದೇಶದಂತೆ ಹತ್ತು ವರ್ಷ ದಿನಗೂಲಿ ಪಿಸಿಪಿ ಕೆಲಸ ನಿರ್ವಹಿಸಿದ ನೌಕರರಿಗೆ ಮಾಸಿಕ ೧೦೦೦ ರು. ಹಾಗೂ ೨ ಸಾವಿರ ರು. ನೀಡಲಾಗುತ್ತಿತ್ತು. ಆದರೆ, ೨೦೧೭ರ ನಂತರ ಈ ಸೌಲಭ್ಯವನ್ನು ಹಂತ ಹಂತವಾಗಿ ನಿಲ್ಲಿಸಿ ಸೌಲಭ್ಯ ಕಿತ್ತುಕೊಳ್ಳಲಾಗಿದೆ. ಸರ್ಕಾರ ಜಾರಿಗೊಳಿಸಿದ ಸೌಲಭ್ಯ ಹಿಂದಕ್ಕೆ ಪಡೆಯಲು ಇಲಾಖೆಗೆ ಅವಕಾಶವಿಲ್ಲ. ಕಾನೂನು ಬಾಹಿರವಾಗಿ ಸುತ್ತೋಲೆ ಹೊರಡಿಸಿ, ಸೌಲಭ್ಯ ವಂಚನೆ ಮಾಡಿದ್ದು ಎಷ್ಟು ಸರಿ, ಮುಂದುವರಿಸಿದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಏಕ ಪ್ರಕಾರ ದರಪಟ್ಟಿ ಮಜೂರಿ ಜಾರಿಗಾಗಿ ಒತ್ತಾಯಿಸಿದರು. ಕನಿಷ್ಟ ೩ ರಿಂದ ೮ ತಿಂಗಳ ಸಂಬಳ ಬಾಕಿ ಇದ್ದು, ಪ್ರತಿ ತಿಂಗಳು ೫ನೇ ತಾರೀಖಿನ ಒಳಗೆ ಮಜೂರಿ ಪಾವತಿಸಬೇಂಬ ಆದೇಶವಿದ್ದರೂ ಮನಸ್ಸಿಗೆ ಬಂದ ಹಾಗೆ ಸಂಬಳ ನೀಡುವ ಕ್ರಮ ನಿಲ್ಲಬೇಕು ಎಂದು ಒತ್ತಾಯಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))