ಸಾರಾಂಶ
- ಕೋಡಿ ಕ್ಯಾಂಪ್ ಗುರುಕೊಟ್ಟೂರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ । ಪತ್ರಕರ್ತ ಚನ್ನಬಸವ ಶೀಲವಂತ್‌ಗೆ ಸನ್ಮಾನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ನಡಿಗೆ, ಯೋಗ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ನಿತ್ಯ ನಡಿಗೆ, ಪಾದಯಾತ್ರೆ ಕೂಡ ಯೋಗದ ಒಂದು ಭಾಗವಾಗಿದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.
ನಗರದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್, ಸರ್ವಯೋಗ ಕೇಂದ್ರಗಳು, ಲಯನ್ಸ್ ಕ್ಲಬ್, ಜಿಲ್ಲಾ ಯೋಗ ಒಕ್ಕೂಟ ಆಶ್ರಯದಲ್ಲಿ ಹಮ್ಮಿಕೊಂಡ ಮಾಗಾನಹಳ್ಳಿ ಸಮೀಪದ ಕೋಡಿ ಕ್ಯಾಂಪ್‌ನ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.ಪಾದ ಎಂದರೆ ಜ್ಞಾನ, ಕ್ರಿಯೆಗಳ ಸಂಗಮ. ಜ್ಞಾನ, ಕ್ರಿಯೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಯಾತ್ರೆ ಯಶಸ್ವಿಗೊಳಿಸುವುದೇ ನಿಜವಾದ ಪಾದಯಾತ್ರೆಯಾಗಿದೆ. ಬದುಕಿಗೆ ಜ್ಞಾನದ ಜೊತೆಗೆ ಕ್ರಿಯೆಯೂ ಬೇಕು. ಇವೆರಡೂ ಇದ್ದರೆ ಜೀವನ ಪರಿಪೂರ್ಣವಾಗುತ್ತದೆ. ಆಗ ಆ ವ್ಯಕ್ತಿ ನಿಜವಾದ ಶರಣ, ಜ್ಞಾನಿ, ಸಂತನಾಗುತ್ತಾನೆ. ಪಾದಯಾತ್ರೆ ಮೂಲಕ ನಾವುಗಳು ಅಂತರಂಗದ ಯಾತ್ರೆ ಮಾಡಬೇಕು. ಅಂತರಂಗವನ್ನು ಶುದ್ಧಿ ಮಾಡುವುದೇ ನಿಜವಾದ ಪಾದಯಾತ್ರೆ ಎಂದು ತಿಳಿಸಿದರು.
ಶ್ರೀ ಗುರು ಕೊಟ್ಟೂರೇಶ್ವರರು 12ನೇ ಶತಮಾನದ ಬಸವಣ್ಣನವರ ತತ್ವಪಾಲಕರಾಗಿದ್ದರು. ಬಸವ ತತ್ವಗಳನ್ನು 15- 16ನೇ ಶತಮಾನದಲ್ಲಿ ಮನೆ ಮನೆಗೆ ಪ್ರಚಾರ ಮಾಡಿದ ಮಹಾತ್ಮರು. ಪಂಚಗಣಾಧೀಶ್ವರರಲ್ಲಿ ನಾಯಕತ್ವ ತೆಗೆದುಕೊಂಡವರು ಕೊಟ್ಟೂರು ಬಸವೇಶ್ವರರು. ನಂಬಿದ ಭಕ್ತರಿಗೆ ಒಳಿತನ್ನು ಮಾಡುವ ಸಂತರು ಅಂದರೆ ಕೊಟ್ಟೂರು ಬಸವೇಶ್ವರರು ಎಂದರು.ಜಿಲ್ಲಾ ಯೋಗ ಒಕ್ಕೂಟ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಕೋಡಿಕ್ರಾಸ್‌ನಲ್ಲಿರುವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದ ಒಂದು ಭಾನುವಾರ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಆಚರಣೆ ಪ್ರತಿ ವರ್ಷ ನಡೆಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚನ್ನಬಸವ ಶೀಲವಂತ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಕಣಕುಪ್ಪಿ ಕರಿಬಸಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ.ಉಳುವಯ್ಯ, ಉತ್ತಂಗಿ ಪ್ರಕಾಶ, ತೀರ್ಥರಾಜ ಹೋಲೂರು, ರಾಜು ಎಲ್.ಬದ್ದಿ, ಪರಶುರಾಮ, ನಾಗರಾಜ, ಮಾದೇಗೌಡರು, ಬಾದಾಮಿ ಜಯಣ್ಣ, ನಿರಂಜನ ಅಣಬೂರು ಮಠ, ಚಂದ್ರು ಸೇರಿದಂತೆ ಯೋಗ ಒಕ್ಕೂಟದ ಸದಸ್ಯರು, ಕೊಟ್ಟೂರೇಶ್ವರ ಸ್ವಾಮಿ ಭಕ್ತರು ಪಾಲ್ಗೊಂಡಿದ್ದರು.- - -
ಬಾಕ್ಸ್ * ಪ್ರತಿ ವರ್ಷ ಪಾದಯಾತ್ರೆ ನಡೆಯಲಿ ಕೊಟ್ಟೂರು ಬಸವೇಶ್ವರರ ರಥೋತ್ಸವಕ್ಕೆ ಪ್ರತಿವರ್ಷ ದಾವಣಗೆರೆ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಿನ್ನೆಲೆ ಶ್ರಾವಣ ಮಾಸದ ಒಂದು ಭಾಗವಾಗಿ ಇಲ್ಲಿನ ಸಮೀಪದ ಮಾಗಾನಹಳ್ಳಿ ಬಳಿ ಇರುವ ಕೋಡಿ ಕ್ಯಾಂಪ್‌ನಲ್ಲಿರುವ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನಕ್ಕೆ ಟ್ರಸ್ಟ್, ಯೋಗ ಕೇಂದ್ರದ ಸದ್ಭಕ್ತರು ಶ್ರಾವಣದ ಒಂದು ಭಾನುವಾರ ಪಾದಯಾತ್ರೆ ಹೋಗಬೇಕು ಎಂಬ ಸಂಕಲ್ಪ ಮಾಡಿದ್ದಾರೆ. ಇಂತಹ ಕಾರ್ಯ ಪ್ರತಿ ವರ್ಷ ನಿರಂತರ ನಡೆಯಲಿ ಎಂದು ಸಲಹೆ ಬಸವಪ್ರಭು ಶ್ರೀಗಳು ತಿಳಿಸಿದರು.- - -
-1ಕೆಡಿವಿಜಿ31ಃ:ದಾವಣಗೆರೆಯಲ್ಲಿ ಭಾನುವಾರ ಮಾಗಾನಹಳ್ಳಿ ಸಮೀಪದ ಕೋಡಿ ಕ್ಯಾಂಪ್‌ನ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಶ್ರೀ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು. -1ಕೆಡಿವಿಜಿ32ಃ:
ದಾವಣಗೆರೆಯಲ್ಲಿ ಭಾನುವಾರ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ನಡೆದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚನ್ನಬಸವ ಶೀಲವಂತ್ ಅವರನ್ನು ಶ್ರೀಗಳು ಸನ್ಮಾನಿಸಿದರು.