ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಯೋಗಕ್ಕೆ ಪುರಾತನವಾದ ಪರಂಪರೆ ಇದೆ. ಯೋಗ ಎನ್ನುವುದು ಭೌತಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾದ ಒಂದು ಪ್ರಕ್ರಿಯೆ. ಒತ್ತಡ ಮುಕ್ತವಾಗಿ ಬದುಕಬೇಕೆಂದಾರೆ ಪ್ರತಿಯೊಬ್ಬರಿಗೂ ಯೋಗ ಅತ್ಯವಶ್ಯಕ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮನುಷ್ಯನ ದೈನಂದಿನ ಚಟುವಟಿಕೆಯಂತೆ ದೇಹವನ್ನು ದಂಡಿಸಿ. ಆರೋಗ್ಯಕರ ಜೀವನ ಹಾಗೂ ಒತ್ತಡ ಬದುಕಿಗೆ ಮುಕ್ತಿ ನೀಡಲು ಯೋಗಾಭ್ಯಾಸ ಸಹಕಾರಿ ಎಂದು ಹಿರಿಯ ಯೋಗಪಟು ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ಕಾಂತಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪತಂಜಲಿ ಯೋಗ ಮತ್ತು ಧ್ಯಾನ ಮೌಲ್ಯ ಶಿಕ್ಷಣ ಸಂಘದಿಂದ ಭಾನುವಾರ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಲವು ಬಂಗಿಗಳ ಯೋಗಾಸನ ಪ್ರದರ್ಶಿಸಿ ಮಾತನಾಡಿದರು.

ಸದೃಢವಾದ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಇದಕ್ಕೆ ಪ್ರಾಣಾಯಾಮ, ಧ್ಯಾನ, ಮೌನ ಹಾಗೂ ಯೋಗ ಅತ್ಯವಶ್ಯಕ. ಹಾಗಾಗಿ ಬಾಲ್ಯದಿಂದಲೇ ದೇಹ ಹಾಗೂ ಮನಸ್ಸನ್ನ ಸದೃಢವಾಗಿಟ್ಟುಕೊಳ್ಳಲು ಪ್ರತಿದಿನ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಯೋಗಕ್ಕೆ ಪುರಾತನವಾದ ಪರಂಪರೆ ಇದೆ. ಯೋಗ ಎನ್ನುವುದು ಭೌತಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾದ ಒಂದು ಪ್ರಕ್ರಿಯೆ. ಒತ್ತಡ ಮುಕ್ತವಾಗಿ ಬದುಕಬೇಕೆಂದಾರೆ ಪ್ರತಿಯೊಬ್ಬರಿಗೂ ಯೋಗ ಅತ್ಯವಶ್ಯಕ ಎಂದರು.

ಯೋಗ ಮಾಡುವುದರಿಂದ ಯಾವುದೇ ರೋಗ ರುಜಿನವಿಲ್ಲದೆ ಆರೋಗ್ಯವಂತ ಜೀವನ ನಡೆಸಬಹುದು. ವಯಸ್ಸಾದ ಸಂದರ್ಭದಲ್ಲಿ ನಮ್ಮ ದೇಹ ಮತ್ತು ಆರೋಗ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗ ಸಹಕಾರಿಯಾಗಲಿದೆ. ಯೋಗಾಭ್ಯಾಸವನ್ನು ಮಕ್ಕಳ ದೈನಂದಿನ ಪ್ರಕ್ರಿಯೆಯಲ್ಲಿ ಒಂದು ಭಾಗವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಪೋಷಕರು ಜವಾಬ್ದಾರಿ ವಹಿಸಬೇಕು ಎಂದರು.

ಯೋಗಾಭ್ಯಾಸ, ಧ್ಯಾನ ಹಾಗೂ ಮೌನದ ಮಹತ್ವ ಕುರಿತು ಶಾಲೆಯ ಮುಖ್ಯ ಶಿಕ್ಷಕ ಎಂ.ಎನ್.ಮಂಜುನಾಥ್ ಮಕ್ಕಳಿಗೆ ಮಾಹಿತಿ ನೀಡಿದರು.

ಇದೇ ವೇಳೆ ನಾಗಮಂಗಲದ ನರಸಿಂಹಮೂರ್ತಿ ಅವರು ಶಾಲಾ ವಿದ್ಯಾರ್ಥಿಗಳ ಅಕ್ಷರ ದಾಸೋಹಕ್ಕೆ ಬಳಕೆಯಾಗುವ ಜಮಖಾನಗಳನ್ನು ಕೊಡುಗೆಯಾಗಿ ನೀಡಿದರು. ಶಾಲೆ ಆವರಣದಲ್ಲಿ ಹಲವು ಬಗೆಯ ಗಿಡಗಳನ್ನು ನೆಡುವುದರ ಮೂಲಕ ಆಮ್ಲಜನಕದ ಕೊರತೆ ನೀಗಿಸಲು ಸಸ್ಯಗಳ ಪಾತ್ರದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ನರಸಿಂಹಾಚಾರಿ, ಸೋಮಶೇಖರ್, ಮುರಳಿಧರ, ಶಿವಮ್ಮ, ನೂರ್‌ಫಾತಿಮಾ, ಫಾಜಿಲಾಬಾನು, ದಾನಿಗಳಾದ ನರಸಿಂಹ, ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.