ಹೈನುಗಾರಿಕೆ ಗ್ರಾಮೀಣ ಜನರ ಕುಟುಂಬ ನಿರ್ವಹಣೆಗೆ ಸಹಕಾರಿ: ರಾಮಚಂದ್ರು

| Published : Jun 25 2024, 12:37 AM IST

ಹೈನುಗಾರಿಕೆ ಗ್ರಾಮೀಣ ಜನರ ಕುಟುಂಬ ನಿರ್ವಹಣೆಗೆ ಸಹಕಾರಿ: ರಾಮಚಂದ್ರು
Share this Article
  • FB
  • TW
  • Linkdin
  • Email

ಸಾರಾಂಶ

ಮನ್ಮುಲ್ ಒಕ್ಕೂಟವು ರೈತರು ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿ ಕೆಲಸ ಮಾಡುತ್ತಿದೆ. ಹೈನುಗಾರಿಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ರಾಜ್ಯದ 14 ಒಕ್ಕೂಟಗಳ ಪೈಕಿ ಮನ್ಮುಲ್ ಒಕ್ಕೂಟಕ್ಕೆ ಅಧಿಕ ಹಾಲು ಪೂರೈಕೆಯಾಗುತ್ತಿದೆ. ಒಕ್ಕೂಟವು ರೈತರಿಗೆ ಹಲವಾರು ಸಲವತ್ತು ನೀಡುವ ಮೂಲಕ ರೈತರಿಗೆ ನೆರವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹೈನುಗಾರಿಕೆ ಗ್ರಾಮೀಣ ಪ್ರದೇಶದ ಜನರ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ಸಹಕಾರಿಯಾಗಿದೆ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ಪಟ್ಟಣದ ಕಸಾಪ ಭವನದಲ್ಲಿ ಮನ್ಮುಲ್, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕರ್ನಾಟಕ ಹಾಲು ಮಹಾ ಮಂಡಳಿ, ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಕ್ಷೀರ-ಸಂಜೀವಿನಿ ಹಂತ-02 ಮತ್ತು 03ರ ಯೋಜನೆಯಡಿ ನಡೆದ ಹೈನುರಾಸು ನಿರ್ವಹಣಾ ತರಬೇತಿ ಕಾರ್‍ಯಕ್ರಮದಲ್ಲಿ ಮಾತನಾಡಿದರು.

ಮನ್ಮುಲ್ ಒಕ್ಕೂಟವು ರೈತರು ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿ ಕೆಲಸ ಮಾಡುತ್ತಿದೆ. ಹೈನುಗಾರಿಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ರಾಜ್ಯದ 14 ಒಕ್ಕೂಟಗಳ ಪೈಕಿ ಮನ್ಮುಲ್ ಒಕ್ಕೂಟಕ್ಕೆ ಅಧಿಕ ಹಾಲು ಪೂರೈಕೆಯಾಗುತ್ತಿದೆ. ಒಕ್ಕೂಟವು ರೈತರಿಗೆ ಹಲವಾರು ಸಲವತ್ತು ನೀಡುವ ಮೂಲಕ ರೈತರಿಗೆ ನೆರವಾಗುತ್ತಿದೆ ಎಂದರು.

ಹೈನುಗಾರಿಕೆ ಮಾಡಿಕೊಂಡು ಲಕ್ಷಾಂತರ ಕುಟುಂಬಗಳ ಬದುಕು ಸಾಕಾಣಿಕೆ ಮಾಡುತ್ತಿದ್ದಾರೆ. ರೈತರು ಬೆಳೆಯುವ ತರಕಾರಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲವಾಗಿದೆ. ಅದೇ ಹೈನುಗಾರಿಕೆ ಮಾಡುವ ರೈತರಿಗೆ ಒಕ್ಕೂಟಗಳು ಸೂಕ್ತ ಬೆಲೆ ನೀಡಿ ಹಾಲು ಖರೀದಿ ಮಾಡುತ್ತಿವೆ. ರೈತರಿಗೆ ಮತ್ತಷ್ಟು ಹಾಲಿನ ಧರ ಏರಿಕೆ ಮಾಡಿ ಅನುಕೂಲ ಮಾಡಿಕೊಡಬೇಕೆನ್ನುವುದು ನಮ್ಮ ಆಶಯವಾಗಿದೆ ಎಂದರು.

ರೈತರು ರಾಸುಗಳನ್ನು ಮಕ್ಕಳಂತೆ ನಿರ್ವಹಣೆ ಮಾಡಬೇಕು. ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವ ಜತೆಗೆ ಒಕ್ಕೂಟವು ಷೇರುದಾರರಿಗೆ ಗುಂಪು ವಿಮಾ ಯೋಜನೆ ಜಾರಿಗೆ ತಂದಿದೆ. ಉತ್ಪಾದಕ ರೈತರು 200 ಹಾಗೂ ಷೇರುದಾರರು 400 ರು. ನೀಡಿ ವಿಮೆ ಮಾಡಿಸಿದರೆ ಆ ಕುಟುಂಬದಲ್ಲಿ ಯಾರಾದರು ವ್ಯಕ್ತಿಗಳು ಸಾವನ್ನಪ್ಪಿದರೆ ಕುಟುಂಬಕ್ಕೆ 50 ಸಾವಿರ ಬರುತ್ತಿದೆ. ಜುಲೈ 20 ರವರೆಗೆ ಗುಂಪು ವಿಮೆ ಮಾಡಿಸಲು ಕೊನೆ ದಿನ. ಕಾರ್‍ಯದರ್ಶಿಗಳು ರೈತರಿಗೆ ಅರಿವು ಮೂಡಿಸಿ ಗುಂಪು ವಿಮೆ ಮಾಡಿಸಬೇಕು ಎಂದು ಮನವಿ ಮಾಡಿದರು.

ಕ್ಷೀರ ಸಂಜೀವಿನ ಯೋಜನೆಯಡಿ ಆಯ್ದ ಮಹಿಳಾ ಸಹಕಾರ ಸಂಘಗಳಿಗೆ 2.50 ಲಕ್ಷದವರೆಗೆ ಹಸು ಖರೀದಿಗೆ ಸಾಲ ನೀಡುತ್ತಿವೆ. ಸಾಲಪಡೆದ ರೈತರು ರಾಸುಗಳನ್ನು ಪಡೆದು ಹೈನುಗಾರಿಕೆ ನಡೆಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ತಾಲೂಕಿನಲ್ಲಿ 72 ಮಹಿಳಾ ಸಹಕಾರ ಸಂಘಗಳಿದ್ದು ಇವುಗಳ ಪೈಕಿ ಹಲವು ಸಂಘಗಳಿಗೆ ಸಾಲಸೌಲಭ್ಯ ಒದಗಿಸಿಕೊಡಲಾಗಿದೆ. ಉಳಿದ ಸಂಘಗಳಿಗೆ ಹಂತಹಂತವಾಗಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ತರಬೇತುದಾರು ಅರವಿಂದ್ ಮಾತನಾಡಿ, ತರಬೇತಿ ಕೇಂದ್ರಗಳಲ್ಲಿ ರೈತರಿಗೆ ನೀಡುವ ತರಬೇತಿಗಳಲ್ಲಿ ರೈತರು ಕಡ್ಡಾಯವಾಗಿ ಭಾಗವಹಿಸುವ ಮೂಲಕ ರಾಸುಗಳ ನಿರ್ವಹಣೆ, ಆಹಾರ ಬಳಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ರೈತರು ಅರಿವು ಮೂಡಿಸಿಕೊಳ್ಳಬೇಕು ಎಂದರು.

ತರಬೇತಿ ಶಿಬಿರದಲ್ಲಿ ಪಾಂಡವಪುರ ಹಾಗೂ ಕೆ.ಆರ್.ಪೇಟೆ ತಾಲೂಕಿನ ಹಲವು ಡೇರಿಗಳ ಕಾರ್‍ಯದರ್ಶಿಗಳು ಭಾಗವಹಿಸಿದ್ದರು.

ಒಕ್ಕೂಟದ ಉಪವ್ಯವಸ್ಥಾಪರಾದ ಆರ್.ಪ್ರಸಾದ್, ಭರತ್‌ರಾಜ್, ಶ್ವೇತಾ, ಮಾರ್ಗವಿಸ್ತರ್ಣಾಧಿಕಾರಿಗಳಾದ ಉಷಾ, ಜಗದೀಶ್, ನಿತಿನ್, ಪ್ರಜ್ವಲ್, ರಾಘವೇಂದ್ರ, ಅಭಿಲಾಷ್, ಶಿವಶಂಕರ್, ಸುಕುನ್ಯ ಸೇರಿದಂತೆ ಹಲವರು ಇದ್ದರು.