ಹೈನುಗಾರಿಕೆಯನ್ನು ಉದ್ಯಮವಾಗಿ ಬೆಳೆಸಬೇಕು: ಸಿ.ಶಿವಕುಮಾರ್

| Published : Mar 25 2025, 12:49 AM IST

ಸಾರಾಂಶ

ಹೈನುಗಾರಿಕೆಯಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಉದ್ಯಮವನ್ನಾಗಿ ಬೆಳೆಸಬೇಕು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹೈನುಗಾರಿಕೆಯಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಉದ್ಯಮವನ್ನಾಗಿ ಬೆಳೆಸಬೇಕು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ತಾಲೂಕಿನ ದೇವರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಂತ -4 ಕ್ಷೀರ ಸಂಜೀವಿನಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿ, ಹೈನುಗಾರಿಕೆ ಕ್ಷೇತ್ರವು ಉದ್ಯಮವಾಗಿ ಬೆಳೆಯಲು ಮಹಿಳೆಯ ಪಾತ್ರ ಮಹತ್ವದಾಗಿದೆ ಎಂದರು.

ಹೈನುಗಾರಿಕೆಯಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕುಟುಂಬಗಳು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬ ನಿರ್ವಹಣೆಗೂ ಸಹಕಾರಿಯಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಮತ್ತಷ್ಟು ಬೆಳೆಸಬೇಕು ಎಂದು ತಿಳಿಸಿದರು.

ರೈತ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಹಸುಗಳನ್ನು ಖರೀದಿ ಮಾಡಲು ಕೇಂದ್ರ ಸರಕಾರ ಹಾಲು ಒಕ್ಕೂಟಗಳ ಮೂಲಕ ಕ್ಷೀರ ಸಂಜೀವಿನ ಹಂತ- 4 ಯೋಜನೆಯಡಿ ಆಯ್ಕೆಯಾದ ಮಹಿಳಾ ಸಹಕಾರ ಸಂಘಕ್ಕೆ ಬಡ್ಡಿ ರಹಿತವಾಗಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು.

ಸಾಲ ಪಡೆದ ರೈತರು ಹಸು ಖರೀದಿಸಿ ಡೇರಿಗಳಿಗೆ ಗುಣಮಟ್ಟದ ಹಾಲು ಪೂರೈಸಬೇಕು. ದೇವರಹಳ್ಳಿ ಡೇರಿ ಕಟ್ಟಡ ನಿರ್ಮಾಣವು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸಹಕಾರ ಸಂಘದಲ್ಲಿ ರಾಜಕೀಯ ಮಾಡಬೇಡಿ, ಚುನಾವಣೆಗಳು ಬಂದಾಗ ರಾಜಕೀಯ ಮಾಡಿ. ಆದರೆ ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡುತ್ತಾ ಕುಳಿತುಕೊಂಡರೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಹಿನ್ನಡೆಯಾಗುತ್ತದೆ. ಹಾಗಾಗಿ ರಾಜಕೀಯ ಬದಿಗೊತ್ತಿ ಎಲ್ಲರೂ ಜೊತೆಗೂಡಿ ಸಹಕಾರ ಸಂಘದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಗ್ರಾಮಸ್ಥರು ಭಿನ್ನಾಭಿಪ್ರಾಯ ಬದಿಗೊತ್ತಿ ಎಲ್ಲರ ಜೊತೆಗೂಡಿ ಸಂಘದ ಏಳಿಗೆಗೆ ಶ್ರಮಿಸಬೇಕು. ನೂತನ ನಿರ್ದೇಶಕರಾದ ಸಿ.ಶಿವಕುಮಾರ್ ಅವರು ಸಂಘದ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದರು.

ಮನ್ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಹಾಲು ಉತ್ಪಾದನೆ ಹೆಚ್ಚಿಸುವ ಜತೆಗೆ ಮಹಿಳೆಯರಿಗೆ ಉದ್ಯಮ ದೊರಕಿಸಿಕೊಡುವ ಉದ್ದೇಶದಿಂದ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯೂ ಮಹಿಳೆಯರಿಗೆ ತರಬೇತಿ ನೀಡಿ ಹಸು ಖರೀದಿಸಲು ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಶೇ.55ರಷ್ಟು ಮಹಿಳಾ ಸಹಕಾರ ಸಂಘಗಳಿವೆ. ಜಿಲ್ಲೆಯಲ್ಲಿ 1300 ಡೇರಿಗಳಿದ್ದು, ಇದರಲ್ಲಿ 580 ಮಹಿಳಾ ಸಹಕಾರ ಸಂಘಗಳಿವೆ. ಹಂತಹಂತವಾಗಿ ಪ್ರತಿವರ್ಷವೂ ಹಲವು ಡೇರಿಗಳನ್ನು ಆಯ್ಕೆ ಮಾಡಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು.

ಇದೇ ವೇಳೆ ಕ್ಷೀರ ಸಂಜೀವಿನಿ ಹಂತ -4ರ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಿದರು.

ಸಮಾರಂಭದಲ್ಲಿ ಜಿಪಂ ಮಾಜಿ ಸದಸ್ಯ ಎಸ್.ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇಶ್, ವಿ.ಎಸ್.ಎಸ್.ಎನ್.ಬಿ.ಅಧ್ಯಕ್ಷ ಶಿವಶಂಕರ್, ವಿಸ್ತರಣಾಧಿಕಾರಿ ಹನುಮಂತು, ಮದುಶಂಕರ್, ಡೇರಿ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಜಯಮ್ಮ, ನಿರ್ದೇಶಕಿಯರಾದ ಮಂಜುಳ, ಬೋರಮ್ಮ, ಜಯಮ್ಮ, ಜ್ಯೋತಿ, ಜಯಲಕ್ಷ್ಮೀ, ಶೃತಿ, ಶೋಭ, ಕಾರ್ಯದರ್ಶಿ ಲಲಿತಾ, ಸ್ಟೆಪ್‌ ಯೋಜನೆಯ ಮಹಿಳಾ ಕಾರ್ಯದರ್ಶಿ ಸುಕನ್ಯ, ಗ್ರಾಪಂ ಅಧ್ಯಕ್ಷೆ ಮಂಜುಳ, ಯಜಮಾನ್ ಕೆಂಪೆಗೌಡ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.