ಡೇರಿ ಕಾರ್ಯದರ್ಶಿ ಬದಲಾವಣೆಗಾಗಿ ಆಗ್ರಹ

| Published : Jan 29 2024, 01:31 AM IST

ಸಾರಾಂಶ

ಸಂಘದ ಕಾರ್ಯದರ್ಶಿಯಾಗಿ ಲತಾರವರು ನೇಮಕವಾಗಿ ಆರು ವರ್ಷ ಕಳೆದರೂ ಒಂದು ದಿನವೂ ಕರ್ತವ್ಯ ನಿರ್ವಹಿಸಿಲ್ಲ. ಕೇವಲ ವಾರ್ಷಿಕವಾಗಿ ನಡೆಯುವ ಸಾಮಾನ್ಯ ಸಭೆಗೆ ಬಂದು ಹೋಗುತ್ತಾರೆ. ಈ ಸಭೆಗಳಿಗೆ ಯಾವ ಅಧಿಕಾರಿಯೂ ಬಾರದಂತೆ ನೋಡಿಕೊಳ್ಳುತ್ತಾರೆ ಎಂದು ಪ್ರತಿಭಟನಾನಿರತರು ದೂರಿದರು.

ಕನ್ನಡಪ್ರಭ ವಾರ್ತೆ ರಾಮನಗರ

ತಾಲೂಕಿನ ಕೈಲಾಂಚ ಹೋಬಳಿ ಲಕ್ಕೋಜನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಹೊಸ ಕಾರ್ಯದರ್ಶಿಯನ್ನು ನೇಮಕ ಮಾಡುವಂತೆ ಒತ್ತಾಯಿಸಿ ಹೈನುಗಾರರು ಭಾನುವಾರ ಬೆಳ್ಳಂಬೆಳಗ್ಗೆ ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದ ಹೈನುಗಾರರು ಹಾಲು ನೀಡಲು ಸಂಘದ ಕಚೇರಿಗೆ ತೆರಳಿದಾಗ ಕಾರ್ಯದರ್ಶಿ ಲತಾ ಕರ್ತವ್ಯಕ್ಕೆ ಗೈರಾಗಿರುವುದನ್ನು ಗಮನಿಸಿದ್ದಾರೆ. ಆಗ ಕಚೇರಿ ಬಳಿಯೇ ಪ್ರತಿಭಟಿಸಿದ ತರುವಾಯ ಹಾಲಿನ ಕ್ಯಾನ್ ಗಳನ್ನು ಕೊಂಡೊಯ್ಯಲು ಬಂದ ಕ್ಯಾಂಟರ್ ಅನ್ನು ತಡೆದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿಯಾಗಿ ಲತಾರವರು ನೇಮಕವಾಗಿ ಆರು ವರ್ಷ ಕಳೆದರೂ ಒಂದು ದಿನವೂ ಕರ್ತವ್ಯ ನಿರ್ವಹಿಸಿಲ್ಲ. ಕೇವಲ ವಾರ್ಷಿಕವಾಗಿ ನಡೆಯುವ ಸಾಮಾನ್ಯ ಸಭೆಗೆ ಬಂದು ಹೋಗುತ್ತಾರೆ. ಈ ಸಭೆಗಳಿಗೆ ಯಾವ ಅಧಿಕಾರಿಯೂ ಬಾರದಂತೆ ನೋಡಿಕೊಳ್ಳುತ್ತಾರೆ ಎಂದು ದೂರಿದರು.

ಉಳಿದ ದಿನಗಳಲ್ಲಿ ಕಾರ್ಯದರ್ಶಿ ಲತಾರವರ ಪತಿ ದೊರೆಸ್ವಾಮಿ ಸಂಘಕ್ಕೆ ಬಂದು ದಬ್ಬಾಳಿಕೆ, ದೌರ್ಜನ್ಯ, ಅಕ್ರಮ ಮತ್ತು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಎಷ್ಟೋ ಬಾರಿ ಕಾರ್ಯದರ್ಶಿ ಎಲ್ಲಿ ಎಂದು ಪ್ರಶ್ನಿಸಿದರೆ ಅನಾರೋಗ್ಯದ ಕಾರಣ ನೀಡುತ್ತಾರೆ. ಅಲ್ಲದೆ, ಬೆದರಿಕೆ ಕೂಡ ಹಾಕುತ್ತಾರೆ ಎಂದು ಆರೋಪಿಸಿದರು.

ಕಳೆದ 22 ವರ್ಷಗಳಲ್ಲಿ 2 ರಿಂದ 3 ವರ್ಷ ಮಾತ್ರ ಹೈನುಗಾರರಿಗೆ ಬೋನಸ್ ನೀಡಲಾಗಿದೆ. ಈ ಕೂಡಲೇ ಕಾರ್ಯದರ್ಶಿ ಹುದ್ದೆಯಿಂದ ಲತಾ ಅವರನ್ನು ಬಿಡುಗಡೆಗೊಳಿಸಿ ಬೇರೆಯವರನ್ನು ನಿಯೋಜನೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಗ್ರಾಮದಲ್ಲಿ 120 ಜನ ಹಾಲು ಉತ್ಪಾದಕರಿದ್ದು, ಅದರಲ್ಲಿ 53 ಷೇರುಗಳನ್ನು ತಮ್ಮ ಹಿಂಬಾಲಕರಿಗೆ ನೀಡಿದ್ದಾರೆ. ಮೂರು ವರ್ಷಗಳಿಂದ ಸಂಘಕ್ಕೆ ಹಾಲು ಪೂರೈಸದ ವ್ಯಕ್ತಿಗಳನ್ನು ಮತದಾರರ ಪಟ್ಟಿಗೆ ಸೇರಿಸಿ ಚುನಾವಣೆ ನಡೆಸಲು ಹುನ್ನಾರ ಮಾಡುತ್ತಿದ್ದಾರೆ. ಆದರೂ ಚುನಾವಣೆ ನಡೆಸಲು 2023ರ ಡಿ.11ರಂದು ಆಕ್ಷೇಪಣಾ ಪತ್ರ ಕಳುಹಿಸಿದ್ದಾರೆ. ಈ ಪತ್ರದಲ್ಲಿ ಸದಸ್ಯತ್ವದ ಸಂಖ್ಯೆ ನಮೂದಿಸಿಲ್ಲ. ಒಂದೇ ಕುಟುಂಬಕ್ಕೆ ಎರಡು ಷೇರುಗಳನ್ನು ಕೊಟ್ಟಿದ್ದಾರೆ.

ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಸಂಘದ ದಾಖಲಾತಿಗಳನ್ನು ಪರಿಶೀಲಿಸಿ ಚುನಾವಣಾ ಪ್ರಕ್ರಿಯೆಗಳನ್ನು ರದ್ದುಪಡಿಸಿ ಆರು ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆಗಳನ್ನು ಮುಂದುವರೆಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗ್ಯಮ್ಮ, ಸಾವಿತ್ರಮ್ಮ, ರತ್ನಮ್ಮ, ಭಾನುಮತಿ, ಸುರೇಶ್, ಶಿವಕುಮಾರ್, ಪ್ರೇಮ ಸಾಗರ್, ಕುಮಾರ್, ಹೊನ್ನಪ್ಪ, ಚಂದ್ರಕಲಾ, ಈಶ್ವರ್ ಮತ್ತಿತರರು ಭಾಗವಹಿಸಿದ್ದರು.