ಸಾರಾಂಶ
ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್‌ಗೆ ೨೦೨೪ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಲ್ಲಿನ ಎಕ್ಸಲೆಂಟ್ ವಿದ್ಯಾಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್‌ಗೆ ೨೦೨೪ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ನ.1ರಂದು ರಾಜ್ಯೋತ್ಸವದ ದಿನ ಮಂಗಳೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪುರಸ್ಕಾರ ಪ್ರದಾನ ಮಾಡಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ಮತ್ತಿತರರಿದ್ದರು.ರಶ್ಮಿತಾ ಜೈನ್ ಮೂಡುಬಿದಿರೆಯ ಕಲ್ಲಬೆಟ್ಟಿನಲ್ಲಿ ಪತಿ ಯುವರಾಜ್ ಜೈನ್ ಜೊತೆಗೂಡಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಸಂಸ್ಥೆಯಲ್ಲಿ ಇಂದು ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗೆ ಒಟ್ಟು ೩೦೦೦ ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.
ಸಂಸ್ಥೆಯ ಮೂಲಕ ಮೂಡುಬಿದಿರೆ ಪರಿಸರದ ಜೇಸಿ, ರೋಟರಿ, ಜೈನ್ ಮಿಲನ್ ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಅನೇಕ ಪರಿಸರ ಸಂಬಂಧಿ ಹಾಗೂ ಸಾಮಾಜಿಕ ಸೇವಾ ಕಾರ್ಯ ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಅತ್ಯಂತ ಪ್ರಿಯವಾದ ‘ಸಸ್ಯಶ್ಯಾಮಲ’ ಕಾರ್ಯಕ್ರಮ ಜನಮನ್ನಣೆ ಗಳಿಸಿದೆ. ಈ ಮೂಲಕ ಒಂದು ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ. ಮೂಡುಬಿದಿರೆ ಪರಿಸರದಲ್ಲಿ ನಡೆಸಲಾದ ಬೃಹತ್ ಸ್ವಚ್ಛತಾ ಆಂದೋಲನ, ಕೊರೋನಾ ಸಂದರ್ಭದ ಅಶಕ್ತರಿಗೆ ದವಸಧಾನ್ಯಗಳ ಕಿಟ್ ವಿತರಣೆ ಹಾಗೂ ಉಚಿತ ಲಸಿಕೆ ಕಾರ್ಯಕ್ರಮಗಳು ಜನಮನ ತಲುಪಿವೆ. ಮನೆಯಿಲ್ಲದವರಿಗೆ ಮನೆಕ ಟ್ಟಿಕೊಟ್ಟಿದ್ದಾರೆ. ಹಲವು ಸಂಘ-ಸಂಸ್ಥೆಗಳಿಗೆ, ಸರ್ಕಾರಿ ಶಾಲೆಗಳಿಗೆ, ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಉಚಿತವಾಗಿ ಒದಗಿಸಿಕೊಟ್ಟಿದ್ದಾರೆ.ರಶ್ಮಿತಾ ಅವರು ನೂರಾರು ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ವ್ಯಕ್ತಿತ್ವ ವಿಕಸನ, ಪರೀಕ್ಷಾ ತಯಾರಿ ಮೊದಲಾದ ವಿಷಯಗಳ ಕುರಿತು ೨೦೦ ಕ್ಕೂ ಹೆಚ್ಚಿನ ತರಬೇತಿಗಳನ್ನು ನೀಡಿದ್ದಾರೆ. ರಾಜ್ಯಮಟ್ಟದ ಯುವಸಮ್ಮೇಳನಗಳನ್ನು ನಡೆಸಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಹಲವು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಥೆಯ ಮೂಲಕ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.