ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಹಳ ವರ್ಷಗಳ ಬಳಿಕ ಖಾತೆ ತೆರೆಯುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದ್ದರೆ, ಕ್ಷೇತ್ರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಬಹಳ ಜಿದ್ದಾಜಿದ್ದಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಿಗೂ ಗೆಲುವಿನ ಭರವಸೆಯಲ್ಲಿವೆ.ಎರಡು ಪಕ್ಷಗಳೂ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ. ಬಿಜೆಪಿ ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ಮಣೆ ಹಾಕಿದರೆ, ಕಾಂಗ್ರೆಸ್ ಪದ್ಮರಾಜ್ ಆರ್.ಪೂಜಾರಿ ಅವರನ್ನು ಕಣಕ್ಕೆ ಇಳಿಸಿತ್ತು. ಈ ಬಾರಿ ಬಿಜೆಪಿ ಜತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ. ಆದರೆ ಎಸ್‌ಡಿಪಿಐ ಕಣಕ್ಕೆ ಇಳಿಯದೆ ಮುಸ್ಲಿಂ ಮತಗಳ ವಿಭಜನೆ ತಡೆಗೆ ಕಾಂಗ್ರೆಸ್‌ನ್ನು ಬೆಂಬಲಿಸಿತ್ತು. ಹೀಗಾಗಿ ಈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ.
ಹಿಂದಿನ ಗೆಲುವಿನ ಅಂತರ:ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ 2,74,621 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಎಸ್‌ಡಿಪಿಐ ಅಭ್ಯರ್ಥಿ ಮಹಮ್ಮದ್ ಎಲಿಯಾಸ್ 46,839 ಮತಗಳನ್ನು ಪಡೆದಿದ್ದರು. ಈ ಎಲ್ಲ ಅಂಕಿ ಅಂಶಗಳನ್ನು ಮುಂದಿರಿಸಿ ಎರಡೂ ಪಕ್ಷಗಳು ಈ ಬಾರಿಯ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ.
ಬಿಜೆಪಿ, ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರ:ದ.ಕ. ಕ್ಷೇತ್ರದಲ್ಲಿ ಒಟ್ಟು 14,09,653 ಮತ ಚಲಾವಣೆಯಾಗಿದೆ. ಎರಡೂ ಪಕ್ಷಗಳು ಬೂತ್‌ವಾರು ಮತದಾನವನ್ನು ಆಧರಿಸಿ ಗೆಲುವಿನ ಲೆಕ್ಕಾಚಾರ ಹಾಕಿವೆ. ಬಿಜೆಪಿ, ಸಂಘಪರಿವಾರದ ಲೆಕ್ಕಾಚಾರ ಪ್ರಕಾರ 1.65 ಲಕ್ಷ ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ. ಇದು ಗರಿಷ್ಠ 2 ಲಕ್ಷ ಮತಗಳ ಅಂತರವರೆಗೂ ಇರಬಹುದು ಎನ್ನುತ್ತಾರೆ. ಕಾಂಗ್ರೆಸ್‌ನವರ ಪ್ರಕಾರ 1.20 ಲಕ್ಷ ಅಂತರದಿಂದ ಗೆಲ್ಲುವ ಲೆಕ್ಕಾಚಾರ ಹೇಳುತ್ತಾರೆ. ಇದೆಲ್ಲವನ್ನೂ ಹೊರತುಪಡಿಸಿ ಎರಡೂ ಪಕ್ಷಗಳ ಮುಖಂಡರನ್ನು ಮಾತನಾಡಿಸಿದಾಗ ಅವರು ಹೇಳುವ ಲೆಕ್ಕಾಚಾರ ಬೇರೆಯೇ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಹೇಳುವಂತೆ ಗೆಲುವಿನ ಅಂತರ ಸೀಮಿತ ಮತಗಳಲ್ಲಿ ಇರುತ್ತದೆ. ಕಾಂಗ್ರೆಸ್ ಗೆಲುವು 20ರಿಂದ 30 ಸಾವಿರ ಅಂತರ, ಬಿಜೆಪಿ ಗೆಲುವು 60 ರಿಂದ 1 ಲಕ್ಷ ಮತಗಳು ಎನ್ನುತ್ತಾರೆ.
ರಾಜಕೀಯ ಪಕ್ಷಗಳಲ್ಲಿ ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದರೆ, ಇನ್ನೊಂದೆಡೆ ಬೆಟ್ಟಿಂಗ್ ಕೂಡ ನಡೆಯುತ್ತಿದೆ. ಆದರೆ ಹಿಂದಿನಷ್ಟು ದೊಡ್ಡ ಮೊತ್ತದಲ್ಲಿ ನಡೆಯುತ್ತಿಲ್ಲ ಎಂದು ಹೇಳಲಾಗಿದೆ.ಕಣದಲ್ಲಿ 9 ಮಂದಿ:
ಈ ಬಾರಿ ದ.ಕ. ಲೋಕಸಭಾ ಕ್ಷೇತ್ರದ ಕಣದಲ್ಲಿ 9 ಮಂದಿ ಇದ್ದಾರೆ.ಕಾಂತಪ್ಪ ಆಲಂಗಾರು(ಬಿಎಸ್‌ಪಿ), ಪದ್ಮರಾಜ್ ಆರ್.ಪೂಜಾರಿ(ಕಾಂಗ್ರೆಸ್), ಕ್ಯಾ.ಬ್ರಿಜೇಶ್ ಚೌಟ(ಬಿಜೆಪಿ), ದುರ್ಗಾ ಪ್ರಸಾದ್(ಕರುನಾಡ ಸೇವಕರ ಪಕ್ಷ), ಮನೋಹರ(ಉತ್ತಮ ಪ್ರಜಾಕೀಯ ಪಕ್ಷ), ರಂಜಿನಿ ಎಂ.(ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ದೀಪಕ್ ರಾಜೇಶ್ ಕುವೆಲ್ಲೊ(ಪಕ್ಷೇತರ), ಮ್ಯಾಕ್ಸಿಂ ಪಿಂಟೋ(ಪಕ್ಷೇತರ), ಸುಪ್ರೀತ್ ಕುಮಾರ್ ಪೂಜಾರಿ(ಪಕ್ಷೇತರ).
ಇಂದು ಮಧ್ಯಾಹ್ನ ಫಲಿತಾಂಶ:ದ.ಕ. ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಮತ ಎಣಿಕೆ ಜೂ.4ರಂದು ಸುರತ್ಕಲ್ ಎನ್‌ಐಟಿಕೆ ಕೇಂದ್ರದಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಅಂಚೆ ಮತ ಎಣಿಕೆ ಹಾಗೂ 8.30 ರಿಂದ ಇವಿಎಂ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಗರಿಷ್ಠ 19 ಸುತ್ತು ಮತ ಎಣಿಕೆ:ದ.ಕ. ಲೋಕಸಭಾ ಕ್ಷೇತ್ರದಲ್ಲಿ 14,09,653 ಮತ ಚಲಾವಣೆಯಾಗಿದ್ದು, 8,537 ಅಂಚೆ ಮತಗಳಿವೆ. 514 ಸರ್ವಿಸ್ ಮತಗಳಿದೆ. ದ.ಕ. ಲೋಕಸಭೆಯ ಪ್ರತಿ ಕ್ಷೇತ್ರಗಳಿಗೆ ತಲಾ 14 ಟೇಬಲ್‌ಗಳನ್ನು ಮತ ಎಣಿಕೆಗೆ ಸಿದ್ಧಪಡಿಸಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗರಿಷ್ಠ 19 ಸುತ್ತು ಹಾಗೂ ಕನಿಷ್ಠ ಮಂಗಳೂರು ಕ್ಷೇತ್ರದಲ್ಲಿ 15 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಅಂಚೆ ಮತಗಳನ್ನು 20 ಟೇಬಲ್‌ಗಳಲ್ಲಿ ಎಣಿಕೆ ಮಾಡಲಾಗುವುದು. ಮತ ಎಣಿಕೆಗೆ ಒಟ್ಟು 554 ಸಿಬ್ಬಂದಿ ಇರಲಿದ್ದು, 50 ಮಂದಿ ಟ್ಯಾಬುಲೇಷನ್‌ಗೆ ಸೇರಿ ಒಟ್ಟು 650 ಮಂದಿ ಎಣಿಕಾ ಕಾರ್ಯ ನಡೆಸಲಿದ್ದಾರೆ.ಮತ ಎಣಿಕೆ ಕೇಂದ್ರದ 100 ಮೀಟರ್ ಸುತ್ತಮುತ್ತ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಅಭ್ಯರ್ಥಿಗಳಿಗೆ, ಎಣಿಕೆ ಸಿಬ್ಬಂದಿಗಳಿಗೆ ಮತ ಎಣಿಕೆ ಕೇಂದ್ರದ ಒಳಗೆ ಪ್ರತ್ಯೇಕ ವಾಹನ ನಿಲುಗಡೆ ಕಲ್ಪಿಸಲಾಗಿದೆ ಎಂದರು.ನಿಷೇಧಾಜ್ಞೆ, ಮೆರವಣಿಗೆ ಇಲ್ಲ:ಮತ ಎಣಿಕೆ ಹಿನ್ನೆಲೆಯಲ್ಲಿ ಜೂನ್ 4ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರ ಸೇರಿದಂತೆ ಎಲ್ಲಿಯೂ ಮೆರವಣಿಗೆ, ವಿಜಯೋತ್ಸವಕ್ಕೆ ಅವಕಾಶ ಇಲ್ಲ.ದೂರುಗಳಿದ್ದರೆ ಕರೆ ಮಾಡಿ:ಅಂತಿಮ ಫಲಿತಾಂಶವನ್ನು ಚುನಾವಣಾ ವೀಕ್ಷಕರ ಹಾಗೂ ಆಯೋಗದ ಅನುಮೋದನೆ ಬಳಿಕವೇ ಪ್ರಕಟಿಸಲಾಗುತ್ತದೆ. ಮತ ಎಣಿಕೆಗೆ ಸಂಬಂಧಿಸಿ ಯಾವುದೇ ದೂರುಗಳಿದ್ದರೆ ನಿಯಂತ್ರಣ ಕೊಠಡಿ ಸಂಖ್ಯೆ 1950ಕ್ಕೆ ಕರೆ ಮಾಡಬಹುದು ಎಂದರು.ಎಲ್ಲೆಡೆ ಬಿಗು ಭದ್ರತೆ: ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಮಾತನಾಡಿ, ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತಗಳಲ್ಲಿ ಭದ್ರತೆ ಒದಗಿಸಲಾಗುತ್ತದೆ. ಸ್ಥಳೀಯ ಪೊಲೀಸರಲ್ಲದೆ, ಪ್ಯಾರಾ ಮಿಲಿಟರಿ ಹಾಗೂ ಕೆಎಸ್‌ಆರ್‌ಪಿ ತುಕಡಿ ಭದ್ರತೆ ನೀಡಲಾಗಿದೆ. ಮಾಧ್ಯಮ ಹೊರತುಪಡಿಸಿ ಯಾರಿಗೂ ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಇಲ್ಲ. ಚುನಾವಣಾ ಆಯೋಗದ ಎಲ್ಲ ಸೂಚನೆಗಳನ್ನು ಪಾಲಿಸಬೇಕು ಎಂದರು.ಮೂರು ಡಿಸಿಪಿ, ಆರು ಎಸಿಪಿ, 26 ಇನ್‌ಸ್ಪೆಕ್ಟರ್, 850 ಸಿಬ್ಬಂದಿ, ಕೆಎಸ್‌ಆರ್‌ಪಿ, ಪ್ಯಾರಾ ಮಿಲಿಟರಿ ತುಕಡಿ ಕಾರ್ಯನಿರ್ವಹಿಸಲಿದೆ.