ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ

| N/A | Published : Sep 26 2025, 10:54 AM IST

Kasaragodu kannada name plate

ಸಾರಾಂಶ

ರಾಜ್ಯದ ಗಡಿಜಿಲ್ಲೆ ಕಾಸರಗೋಡಿನಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಕೇಂದ್ರ ಅಲ್ಪಸಂಖ್ಯಾತರ ಇಲಾಖೆಯು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಸಕಾರತ್ಮಕವಾಗಿ ಸ್ಪಂದಿಸಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದ್ದಾರೆ

 ಮಂಗಳೂರು :  ರಾಜ್ಯದ ಗಡಿಜಿಲ್ಲೆ ಕಾಸರಗೋಡಿನಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಕೇಂದ್ರ ಅಲ್ಪಸಂಖ್ಯಾತರ ಇಲಾಖೆಯು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಸಕಾರತ್ಮಕವಾಗಿ ಸ್ಪಂದಿಸಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಡಿಜಿಲ್ಲೆ ಕಾಸರಗೋಡಿನಲ್ಲಿ ಕನ್ನಡ ನಾಮಫಲಕ ಕ್ಷೀಣಿಸುತ್ತಿರುವ ಬಗ್ಗೆ ಬಂದ ದೂರುಗಳ ಆಧಾರದಲ್ಲಿ ಕೇಂದ್ರ ಅಲ್ಪಸಂಖ್ಯಾತರ ಇಲಾಖೆಗೆ ಪ್ರಾಧಿಕಾರದಿಂದ ಪತ್ರ ಬರೆಯಲಾಗಿತ್ತು. ಕೇಂದ್ರ ಇಲಾಖೆಯು ಕೇರಳ ಸರ್ಕಾರಕ್ಕೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇರಳ ಸರ್ಕಾರ, ಗಡಿನಾಡಿನ ಬಸ್‌ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ರೈಲು ನಿಲ್ದಾಣ ಸೇರಿದಂತೆ ಈ ಹಿಂದೆ ಇದ್ದ ಕಡೆಗಳಲ್ಲೆಲ್ಲ ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮ ವಹಿಸುವಂತೆ ಎನ್‌ಎಚ್‌ಎಐ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದರು.

ಗಡಿ ಶಾಲೆಗಳಿಗೆ ಕನ್ನಡ ಪತ್ರಿಕೆ:

ಪ್ರಾಧಿಕಾರದ ವ್ಯಾಪ್ತಿಗೆ ಬರುವ 6 ರಾಜ್ಯಗಳ, 19 ಜಿಲ್ಲೆಗಳ 658 ಕನ್ನಡ ಶಾಲೆಗಳಲ್ಲಿ 1.09 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗಳಿಗೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲು ಪ್ರಾಧಿಕಾರ ನೆರವು ನೀಡುತ್ತಿದೆ. ಈ ಶಾಲೆಗಳಿಗೆ ಕನ್ನಡ ದಿನಪತ್ರಿಕೆಗಳನ್ನು ಪೂರೈಸುವ ಪ್ರಸ್ತಾಪ ಇದೆ ಎಂದು ತಿಳಿಸಿದರು.

 ಕಯ್ಯಾರ ಸ್ಮರಣಾರ್ಥ ಸಾಂಸ್ಕೃತಿಕ ಭವನ:

ಗಡಿನಾಡಿನ ಕನ್ನಡಪರ ಹೋರಾಟಗಾರ, ಸಾಹಿತಿ ಕಯ್ಯಾರ ಕಿಂಞಣ್ಣ ರೈ ಸ್ಮರಣಾರ್ಥ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪೆರಡಾಲದಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸಾಂಸ್ಕೃತಿಕ ಭವನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅ.27ರಂದು ಲೋಕಾರ್ಪಣೆಯಾಗಲಿದೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದೇವೆ. ಇದಕ್ಕಾಗಿ ಕಯ್ಯಾರರ ಕುಟುಂಬಸ್ಥರು 1 ಎಕರೆಗೂ ಅಧಿಕ ಜಾಗವನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ ಎಂದು ಬೇವಿನಮರದ ತಿಳಿಸಿದ್ದಾರೆ.

Read more Articles on