ಇಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯ

| Published : Apr 24 2024, 02:20 AM IST

ಇಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನದ ದಿನ ಸರ್ಕಾರಿ/ ಖಾಸಗಿ ವಲಯದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಏ.24ರ ಸಂಜೆ 6ರಿಂದ 144 ಸೆಕ್ಷನ್‌ ಜಾರಿಗೊಳಿಸಲಾಗಿದ್ದು, ಇದು ಚುನಾವಣೆ ಮುಗಿಯುವ ತನಕ ಇರಲಿದೆ ಎಂದು ದ.ಕ. ಜಿಲ್ಲಾಧಿಕಾರಿ ತ ಇಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ದ.ಕ. ಜಿಲ್ಲಾಡಳಿತ ಸರ್ವ ಸನ್ನದ್ಧಗೊಂಡಿದ್ದು, ಏ.26ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಏ.24ರ ಸಂಜೆ 6ರಿಂದ ಬಹಿರಂಗ ಪ್ರಚಾರ ಅಂತ್ಯವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಸಂಜೆ 6ರ ಬಳಿಕ ಯಾವುದೇ ಸಾರ್ವಜನಿಕ ಸಭೆ ಇತ್ಯಾದಿ ಬಹಿರಂಗ ಪ್ರಚಾರ ಮುಕ್ತಾಯಗೊಳಿಸಬೇಕು. ಈ ಗಡುವಿನ ನಂತರ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಆ ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಜತೆಗೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದವರು ಮತದಾರರನ್ನು ಮತಗಟ್ಟೆಗಳಿಗೆ ಕರೆದುಕೊಂಡು ಬರಲು ಮತ್ತು ಹೋಗಲು ವಾಹನದ ವ್ಯವಸ್ಥೆ ಮಾಡುವಂತಿಲ್ಲ. ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.18,18,127 ಮತದಾರರು: ದ.ಕ. ಲೋಕಸಭಾ ಕ್ಷೇತ್ರದಲ್ಲಿ 18,18,127 ಮತದಾರರು ಇದ್ದಾರೆ. ಅವರಲ್ಲಿ 9,30,928 ಮಹಿಳಾ ಹಾಗೂ 8,87,122 ಮಂದಿ ಪುರುಷ ಮತದಾರರು. 11,255 ಮಂದಿ ಮತಗಟ್ಟೆ ಅಧಿಕಾರಿ/ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 2,251 ಮಂದಿ ಪಿಆರ್‌ಒ, 2,251 ಎಪಿಆರ್‌ಒ, 4,502 ಮಂದಿ ಪಿಒ ಹಾಗೂ 2,251 ಮಂದಿ ಗ್ರೂಪ್‌ ಡಿ ಸಿಬ್ಬಂದಿಗಳನ್ನು ಚುನಾವಣೆಗೆ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

72 ಮಾದರಿ ಮತಗಟ್ಟೆಗಳು: ಈ ಬಾರಿ ಚುನಾವಣೆಗೆ 72 ಮಾದರಿ ಮತಗಟ್ಟೆಗಳನ್ನು ಮಾಡಲಾಗಿದೆ. ಇದರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಸಖಿ ಬೂತ್‌ಗಳಂತೆ ಒಟ್ಟು 40 ಸಖಿ ಬೂತ್‌ಗಳು, 8 ಪಿಡಬ್ಲ್ಯೂಡಿ, 8 ಯುವ ಬೂತ್‌, 8 ಧ್ಯೇಯ ಬೂತ್‌ ಹಾಗೂ 8 ಸಾಂಪ್ರದಾಯಿಕ ಬೂತ್‌ಗಳನ್ನು ಮಾಡಲಾಗಿದೆ ಎಂದರು.ಮತಗಟ್ಟೆಗಳಿಗೆ ಭದ್ರತೆ: 938 ಕಡೆಯಲ್ಲಿ ವೆಬ್‌ಕಾಸ್ಟಿಂಗ್‌ ಹಾಗೂ 200 ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಕ ಮಾಡಲಾಗಿದೆ. ಮಾದರಿ ನೀತಿ ಸಂಹಿತೆಯ ಪಾಲನೆಗಾಗಿ ಅಧಿಕಾರಿಗಳ ನೇಮಕ ಮಾಡಲಾಗಿದೆ. ಜತೆಗೆ ಮತಗಟ್ಟೆ ಸಿಬ್ಬಂದಿಗೆ ಅಗತ್ಯವಿರುವ ವಾಹನಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಶಾಲೆಗಳ ವಾಹನಗಳನ್ನು ಕೂಡ ಬಳಸಲಾಗುತ್ತಿದೆ. 280 ಸರ್ಕಾರಿ ಬಸ್‌, 13 ಖಾಸಗಿ ಹಾಗೂ 140 ಮ್ಯಾಕ್ಸಿ ಕ್ಯಾಬ್‌, 62 ಮಿನಿ ಬಸ್‌ ಸೇರಿದಂತೆ ಒಟ್ಟು 627 ವಾಹನಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ಮತಯಂತ್ರ ಹಾಳಾದರೆ ಹಾಗೂ ಇತರ ಸಮಸ್ಯೆಗಳು ಎದುರಾದರೆ ಹೆಚ್ಚುವರಿ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಕೂಡ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ವೇತನ ಸಹಿತ ರಜೆ: ಮತದಾನದ ದಿನ ಸರ್ಕಾರಿ/ ಖಾಸಗಿ ವಲಯದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಏ.24ರ ಸಂಜೆ 6ರಿಂದ 144 ಸೆಕ್ಷನ್‌ ಜಾರಿಗೊಳಿಸಲಾಗಿದ್ದು, ಇದು ಚುನಾವಣೆ ಮುಗಿಯುವ ತನಕ ಇರಲಿದೆ ಎಂದರು.

ಶೇ.70ರಷ್ಟು ಚುನಾವಣಾ ಸಿಬ್ಬಂದಿ ಮಹಿಳೆಯರಾಗಿದ್ದು, ಅದಕ್ಕಾಗಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿರುವ ತಾಲೂಕುಗಳಲ್ಲಿಯೇ ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ. ಪುರುಷರಿಗೆ ಮಾತ್ರ ಇತರ ಕಡೆಗಳಿಗೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್‌, ಪೊಲೀಸ್‌ ಕಮೀಷನರ್‌ ಅನುಪಮ್‌ ಅಗರ್‌ವಾಲ್‌, ದಕ ಎಸ್ಪಿ ಸಿ.ಬಿ. ರಿಷ್ಯಂತ್‌ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್‌ ಕುಮಾರ್‌ ಇದ್ದರು.

ಚುನಾವಣೆಗೆ ಬಿಗಿ ಭದ್ರತೆ

ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಮಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ 1200 ರೌಡಿಗಳ ಮೇಲೆ ಕ್ರಮ ಜರುಗಿಸಲಾಗಿದೆ. ಇದರಲ್ಲಿ 800 ಮಂದಿ ಗಡಿಪಾರು, 75 ಮಂದಿಯನ್ನು ಬೇರೆ ಜಿಲ್ಲೆಗೆ ಹಾಗೂ 8 ಮಂದಿಗೆ ಗೂಂಡಾ ಕಾಯಿದೆ ಮೂಲಕ ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದರು.ಚುನಾವಣೆಗೆ 1500 ಅಧಿಕಾರಿ, ಸಿಬ್ಬಂದಿ ಜತೆಗೆ 3 ಕಂಪೆನಿಗಳನ್ನು ಕರೆಸಿಕೊಳ್ಳಲಾಗಿದೆ. ಇದರಲ್ಲಿ ಸಿಎಪಿಎಫ್‌ 2 ಹಾಗೂ 1 ಕೆಎಸ್‌ಆರ್‌ಪಿ ತುಕಡಿ ಇರಲಿದೆ ಎಂದರು.ದಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಮಾತನಾಡಿ, ಇದುವರೆಗೆ 1200 ರೌಡಿಗಳ ಮೇಲೆ ಕ್ರಮ ಜರುಗಿಸಲಾಗಿದೆ. 900 ಮಂದಿಯ ಬೌಂಡ್‌ ಓವರ್‌ ಕ್ರಮ ಜರುಗಿಸಿದರೆ, 28 ಮಂದಿಯನ್ನು ಬೇರೆ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. 1600 ಮಂದಿ ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಜತೆಗೆ 3 ಕಂಪೆನಿ ಸಿಎಪಿಎಫ್‌, 2 ಕೆಎಸ್‌ಆರ್‌ಪಿ ಕಂಪೆನಿಗಳನ್ನು ಕರೆಸಿಕೊಳ್ಳಲಾಗಿದೆ ಎಂದರು.