ಕೊಡಗು ಮತ್ತು ದ.ಕ ಜಿಲ್ಲೆಯ ಅರೆಭಾಷಿಕ ಗೌಡರಿಗೆ ಪೂಜಾರಿ ಮೊಣ್ಣಪ್ಪ ನವರು ಮಾದರಿಯಾಗಿದ್ದು, ಅಪರೂಪದ ವ್ಯಕ್ತಿತ್ವದ ಅವರು ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ದುಡಿದ ಭೀಷ್ಮನೆಂದು ಖ್ಯಾತರಾಗಿದ್ದಾರೆ ಎಂದು ಅರೆಭಾಷಿಕ ಜನಾಂಗದ ಹಿರಿಯ ವ್ಯಕ್ತಿ ಡಾ.ಕಾವೇರಿಮನೆ ಬೋಜಪ್ಪ ಅವರು ಅಭಿಪ್ರಾಯಪಟ್ಟರು.

ಮಡಿಕೇರಿ: ಕೊಡಗು ಮತ್ತು ದ.ಕ ಜಿಲ್ಲೆಯ ಅರೆಭಾಷಿಕ ಗೌಡರಿಗೆ ಪೂಜಾರಿ ಮೊಣ್ಣಪ್ಪ ನವರು ಮಾದರಿಯಾಗಿದ್ದು, ಅಪರೂಪದ ವ್ಯಕ್ತಿತ್ವದ ಅವರು ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ದುಡಿದ ಭೀಷ್ಮನೆಂದು ಖ್ಯಾತರಾಗಿದ್ದಾರೆ ಎಂದು ಅರೆಭಾಷಿಕ ಜನಾಂಗದ ಹಿರಿಯ ವ್ಯಕ್ತಿ ಡಾ.ಕಾವೇರಿಮನೆ ಬೋಜಪ್ಪ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಚೌಡೇಶ್ವರಿ ನಗರದಲ್ಲಿರುವ ಪೂಜಾರಿರ ಮೊಣ್ಣಪ್ಪ ಲಾಯರ್ ಲೇಔಟ್‍ನ ಕೊಡಗು ಮತ್ತು ದ.ಕ ಗೌಡ ಸಮಾಜದ ‘ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಆಯೋಜಿಸಲಾದ ಸಭೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಕೊಡಗು ಗೌಡ ಸಮಾಜ ಹಾಗೂ ಯಲಹಂಕ ಗೌಡ ಸಮಾಜದವರು ಸೇರಿ ಆಯೋಜಿಸಲಾದ ಸ್ಮರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ನಂಗಾರು ನಾಣಯ್ಯ ಮಾತನಾಡಿ, ಬೆಂಗಳೂರಿನ ಲಗ್ಗೇರೆ, ಜಕ್ಕೂರು ಮತ್ತು ಶ್ರೀ ಗಂಧ ಕಾವಲು ಭಾಗಗಳಲ್ಲಿ ಪೂಜಾರಿ ಮೊಣ್ಣಪ್ಪನವರು ಕಾಯರ್‍ಮಾರ್ ವೀರಪ್ಪ ಗೌಡ, ಪೂಜಾರಿ ಪೂವಯ್ಯ, ಹೊದ್ದೆಟ್ಟಿ ಭವಾನಿಶಂಕರ್ ಸೇರಿ ಸುಮಾರು 18 ಏಕ್ರೆ ಜಾಗವನ್ನು ಸರ್ಕಾರದಿಂದ ಮಂಜೂರಾತಿಗೊಳಿಸಿ ಅರೆಭಾಷಿಕ ಗೌಡರಿಗೆ ನಿವೇಶನ ಕೊಡಿಸುವಲ್ಲಿ ಶ್ರಮಿಸಿರುವುದನ್ನು ಈ ಸಂದರ್ಭ ನೆನೆಸಿಕೊಂಡರು.

‘ಹಿರಿಯ ಅರೆಭಾಷೆಯ ಸಾಹಿತಿ ಹೊದ್ದೆಟಿ ಭವಾನಿಶಂಕರ್ ಅವರು ಮಾತನಾಡಿ ಸರಳ ಸಜ್ಜನಿಕೆಯ ವಕೀಲರಾದ ಪೂಜಾರಿ ಮೊಣ್ಣಪ್ಪನವರು ತಮ್ಮ ಜೀವನವನ್ನು ಸಾಹಿತ್ಯ, ಸಂಸ್ಕೃತಿ ಮತ್ತು ಅರೆಭಾಷಿಕ ಜನಾಂಗದ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿರುವುದು ನೆನಪಿಸಿಕೊಂಡರು.

ನಿವೃತ್ತ ಪ್ರಾಂಶುಪಾಲರು ಹಾಗೂ ಸಮಾಜದ ದುರೀಣಿ ಡಾ. ನಂಗಾರು ನಿಂಗರಾಜು ಮಾತನಾಡಿ, ಅರೆಭಾಷೆ ಅಕಾಡೆಮಿಯವರು ಪೂಜಾರಿ ಮೊಣ್ಣಪ್ಪನವರನ್ನು ಸ್ಮರಿಸಿಕೊಳ್ಳುವ ಕಾರ್ಯವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಅಕಾಡೆಮಿ ಸದಸ್ಯ ಸಂಚಾಲಕ ಸೂದನ ಈರಪ್ಪ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಅರೆಭಾಷಿಕ ತೆರೆಮರೆ ವ್ಯಕ್ತಿಗಳನ್ನು ಅಕಾಡೆಮಿ ಗುರುತಿಸುವ ಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಕೊಡಗು ಗೌಡ ಸಮಾಜದ ಅಧ್ಯಕ್ಷ ಪಾಣತಲೆ ಪಳಂಗಪ್ಪ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು, ಇನ್ನು ಮುಂದಕ್ಕೂ ನಾವು ಅರೆಭಾಷಿಕ ಜನಾಂಗದವರಲ್ಲಿ ಸಾಹಿತ್ಯ - ಸಂಸ್ಕೃತಿ ಮುಂತಾದ ನೆಲೆಗಟ್ಟಿನಲ್ಲಿ ದುಡಿದವರನ್ನು ನೆನೆಸಿ ಸನ್ಮಾನಿಸಿ ಪುರಸ್ಕರಿಸುತ್ತೇವೆ ಎಂದರು.

ಅಕಾಡೆಮಿ ಸದಸ್ಯರಾದ ಕೆ.ಎಸ್.ಕಾರ್ಯಪ್ಪ ಗೌಡ, ಚಂದ್ರಾವತಿ ಬಡ್ಡಡ್ಕ, ಕುದುಪಜೆ ಪ್ರಕಾಶ್, ಮೊಣ್ಣಪ್ಪನವರ ಪುತ್ರ ಪೂಜಾರಿರ ಗಣೇಶ್ ಇದ್ದರು.

ಕುಂಭಗೌಡನ ಲೀಲಾವತಿ ಸೋಮಣ್ಣ ನಿರೂಪಿಸಿದರು. ಸದಸ್ಯ ಸಂಚಾಲಕ ಸೂದನ ಈರಪ್ಪ ಸ್ವಾಗತಿಸಿದರು. ಸದಸ್ಯರಾದ ಪೊನ್ನಚನ ಮೋಹನ್ ವಂದಿಸಿದರು. ಅಕಾಡೆಮಿ ಹಾಲಿ ಹಾಗೂ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು.

ಅರೆಭಾಷಿಕರ ಅಭಿವೃದ್ಧಿಗಾಗಿ ದುಡಿದ ಸಮಾಜದ ವಿವಿಧ ಗಣ್ಯರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.