ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಮುಖ್ಯಮಂತ್ರಿ ರಾಜೀನಾಮೆ ಕೂಗು ಜೋರಾಗುತ್ತಿರುವ ಬೆನ್ನಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಅವರು ತುಮಕೂರಿನಲ್ಲಿ ಭೇಟಿಯಾಗಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.ಪರಮೇಶ್ವರ್ ಒಡೆತನದ ಸಿದ್ಧಾರ್ಥ ಇಂಜಿನಿಯರ್ ಕಾಲೇಜಿನಲ್ಲಿ ಇವರಿಬ್ಬರು ಸಚಿವರು ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿ, ಬಳಿಕ ಒಂದೇ ಕಾರಿನಲ್ಲಿ ದಸರಾ ಕಾರ್ಯಕ್ರಮಕ್ಕೆ ತೆರಳಿದರು.
ಮೊನ್ನೆಯಷ್ಟೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಸತೀಶ್ ಜಾರಕಿಹೊಳಿ ಭೇಟಿಯಾದ ಬೆನ್ನಲ್ಲೇ ಮತ್ತೆ ಇವರಿಬ್ಬರು ಪುನಃ ಭೇಟಿಯಾಗಿರುವುದು ಕೂತೂಹಲಕ್ಕೆ ಕಾರಣವಾಗಿದೆ.ಮುಂದಿನ ಸಿಎಂ ಜಾರಕಿಹೊಳಿ: ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಕಾರ್ಯಕ್ರಮಕ್ಕೆ ಸತೀಶ್ ಜಾರಕಿಹೊಳಿ ಆಗಮಿಸಿದಾಗ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ದಲಿತ ನಾಯಕರು ಘೋಷಣೆ ಕೂಗಿ ಜೈಕಾರ ಹಾಕಿದರು.
ಪರಮೇಶ್ವರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಭೇಟಿಯಾಗಿ ಒಟ್ಟಿಗೆ ಊಟ ಮಾಡಿದೆವು ಎಂದರು.ನನ್ನದು ಬೇರೆ ಕಾರ್ಯಕ್ರಮ ಇತ್ತು. ಹೀಗಾಗಿ ತುಮಕೂರಿಗೆ ಬಂದಿದ್ದೆ. ಹಾಗೆ ಸಾಹೇಬರನ್ನು ನೋಡಿಕೊಂಡು ಹೋಗಲಿಕ್ಕೆ ಬಂದಿದ್ದಾಗಿ ತಿಳಿಸಿದರು.
ಮುಖ್ಯಮಂತ್ರಿಗಳಿಗೆ ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದೇವೆ. ಹೀಗಾಗಿ ಬೇರೆ ಏನು ಚರ್ಚೆ ಆಗುತ್ತೆ ಎಂದು ಪ್ರಶ್ನಿಸಿದರು.ದೆಹಲಿಯಲ್ಲಿ ಖರ್ಗೆ ಭೇಟಿಗೂ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಅವರು. ದೆಹಲಿಗೆ ಹೋಗಿದ್ದೆ. ಹಾಗೆ ಭೇಟಿ ಮಾಡಿದೆಯಷ್ಟೆ ಎಂದರು.
ಪದೇಪದೇ ಸಚಿವರ ಭೇಟಿ ವಿಚಾರದ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ ಅವರು, ಒಂದೇ ಸಚಿವರು, ಶಾಸಕರು ಅಂದ ಮೇಲೆ ಭೇಟಿಯಾಗುತ್ತಲೇ ಇರುತ್ತೇವೆ. ನೀವೆಲ್ಲಾ ಹೇಗೆ ಸೇರ್ತಾ ಇರ್ತೀರೋ ಹಾಗೆ ನಾವು ಕೂಡ ಸೇರ್ತಾ ಇದ್ದೀವಿ ಎಂದರು.ದಲಿತ ಸಿಎಂ ಪ್ರಸ್ತಾವನೆ ಸದ್ಯಕ್ಕಿಲ್ಲ. ಇದ್ದಾಗ ನಾವೇ ಕರೆದು ಹೇಳುತ್ತೇವೆ ಎಂದ ಜಾರಕಿಹೊಳಿ ಅವರು, ಸದ್ಯಕ್ಕಂತೂ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಇರುವುದು ಒಂದೇ ಸ್ಥಾನ ಯಾರಿಗೆ ಮಾಡ್ತೀರಿ ನೀವು ಎಂದರು.