ಸಾರಾಂಶ
ಕೊಳಗೇರಿ ಅಭಿವೃದ್ಧಿ ನಿಮಗದ ಉಪವಿಭಾಗದ ಎಇಇ ತಿಮ್ಮಣ್ಣ ಅವರನ್ನು ಅಧಿಕಾರ ದುರ್ಬಳಕೆ ಕಾಯ್ದೆ ಅಡಿಯಲ್ಲಿ ಅಮಾನತು ಮಾಡಿ ಫಲಾನುಭವಿಗಳಿಗೆ ನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು
ಹೊಸಪೇಟೆ: ನಗರದ ಬಡ, ದಲಿತ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಸ್ಲಂ ಬೋರ್ಡ್ ವಿತರಿಸಿರುವ ನಿವೇಶನಗಳ ಹಕ್ಕುಪತ್ರಗಳ ಆಧಾರದಲ್ಲಿ ಫಾರಂ ನಂ.3 ವಿತರಿಸಿ, ನೋಂದಣಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಗಮನಕ್ಕೆ ತಂದು ಮನವಿ ಮಾಡಿಕೊಂಡಾಗ ಆದೇಶ ಮಾಡಿ ವರ್ಷಗಳೇ ಕಳೆದಿವೆ. ಮತ್ತೆ ಆದೇಶ ಏಕೆ ಬೇಕು ಎಂದು ಸಂಬಂಧಪಟ್ಟ ಕೊಳಗೇರಿ ಉಪ ವಿಭಾಗದ ಎಇಇ ತಿಮ್ಮಣ್ಣ ದೂರವಾಣಿಯಲ್ಲೇ ಸೂಚಿಸಿದ್ದಾರೆ. ಹೀಗಿದ್ದರೂ ಇದುವರೆಗೆ ಹಕ್ಕುಪತ್ರದ ಫಲಾನುಭವಿಗಳಿಗೆ ನೋಂದಣಿ ಇಲಾಖೆ ಹಾಗು ನಗರಸಭೆ ಫಾರಂ ನಂ.3 ಮಾಡಿಕೊಡುತ್ತಿಲ್ಲ. ಇದಕ್ಕೆ ಪೂರಕ ದಾಖಲೆಗಳನ್ನು ಸ್ಲಂ ಬೋರ್ಡ್ ಕೂಡ ಒದಗಿಸುತ್ತಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.ಕೂಡಲೇ ಕೊಳಗೇರಿ ಅಭಿವೃದ್ಧಿ ನಿಮಗದ ಉಪವಿಭಾಗದ ಎಇಇ ತಿಮ್ಮಣ್ಣ ಅವರನ್ನು ಅಧಿಕಾರ ದುರ್ಬಳಕೆ ಕಾಯ್ದೆ ಅಡಿಯಲ್ಲಿ ಅಮಾನತು ಮಾಡಿ ಫಲಾನುಭವಿಗಳಿಗೆ ನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ನಗರಸಭೆಯಲ್ಲಿ ಫಾರಂ ನಂ.3 ಮಾಡಿಸಲಿಕ್ಕೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಶಿಸ್ತಿನ ಆದೇಶ ಮಾಡಿಸಬೇಕು. ಬಡ, ನಿರ್ಗತಿಕ ಫಲಾನುಭವಿಗಳಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಚ್.ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ನಂದಿಹಳ್ಳಿ, ತಾಲೂಕು ಅಧ್ಯಕ್ಷ ಸಿ.ರಮೇಶ್, ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ನಾಗರಾಜ್ ಒತ್ತಾಯಿಸಿದ್ದಾರೆ.