ಸಾರಾಂಶ
ಬಿ.ಆರ್.ವಿಜೇಂದ್ರ ಪ್ರಭು
ಕನ್ನಡಪ್ರಭ ವಾರ್ತೆ ಬನ್ನೂರುಇಂದಿಗೂ ಸಮಾಜದಲ್ಲಿ ದಲಿತರ ಸ್ಥಿತಿ ಬಹಳಷ್ಟು ಹದಗೆಟ್ಟಿದ್ದು, ಅವರಿಗೆ ಸೂಕ್ತವಾದ ಸ್ಥಾನ ದೊರೆಯುತ್ತಿಲ್ಲ ಎನ್ನುವುದಕ್ಕೆ ಬನ್ನೂರು ಸಮೀಪದ ಬೀಡನಹಳ್ಳಿ ಗ್ರಾಮದ ದಲಿತರ ಸ್ಥಿತಿ ಎದ್ದು ಕಾಣುತ್ತಿದೆ.
ಮನುಷ್ಯ ಸತ್ತ ನಂತರ ಶವವನ್ನು ಹೂಳಲು, ಇಲ್ಲವೇ ಸುಡಲು ಭೂಮಿಯು ಇಲ್ಲದೇ ರಸ್ತೆ ಬದಿಯಲ್ಲಿಯೇ ಶವಸಂಸ್ಕಾರ ಮಾಡಿ, ಪುಣ್ಯ ಕಾರ್ಯವನ್ನು ಅಲ್ಲಿಯೇ ಮಾಡುವ ಪರಿಸ್ಥಿತಿ ಇದ್ದು, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪನವರ ತವರು ಕ್ಷೇತ್ರದಲ್ಲಿಯೇ ದಲಿತರಿಗೆ ಸೂಕ್ತವಾದ ಸ್ಥಾನ ದೊರೆತಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ.ಬೀಡನಹಳ್ಳಿ ಗ್ರಾಮ ಎರಡನೇ ಧರ್ಮಸ್ಥಳ ಎಂದು ಬಹಳಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಕ್ಷೇತ್ರವಾಗಿದೆ. ಆದರೂ ಇಲ್ಲಿನ ದಲಿತರ ಮನೆಗಳಲ್ಲಿ ಯಾರಾದರೂ ಸತ್ತರೆ ಅವರ ಅಂತ್ಯ ಸಂಸ್ಕಾರವನ್ನು ಮಾಡಲು ಸೂಕ್ತವಾದ ಜಾಗದ ವ್ಯವಸ್ಥೆ ಇಲ್ಲದಿರುವುದು ಸತ್ತ ಮನೆಗಳಲ್ಲಿ ಶೋಕದಲ್ಲಿಯೇ ಮತ್ತಷ್ಟು ಶೋಕವನ್ನು ಅನುಭವಿಸುವಂತಾಗಿದೆ.
ಈಚೆಗೆ ಮೃತಪಟ್ಟ ಸಿದ್ದಯ್ಯ ಅವರ ಶವಸಂಸ್ಖಾರ ಮಾಡಲು ಅನೇಕ ಮಂದಿಯ ಜಮೀನಿನ ಮಾಲೀಕರನ್ನು ಕೇಳಿಕೊಂಡಿದ್ದಾರೆ. ಯಾರೂ ಒಪ್ಪದಿದ್ದಾಗ ಮುಖ್ಯ ರಸ್ತೆಯ ಬದಿಯಲ್ಲಿಯೇ ಅಂತ್ಯ ಸಂಸ್ಕಾರ ಮಾಡಿ, ಹನ್ನೊಂದನೆ ದಿನದ ಪುಣ್ಯ ಕಾರ್ಯವನ್ನು ಅಲ್ಲಿಯೇ ಮಾಡಿದ್ದಾರೆ.ಮೃತ ಸಿದ್ದಯ್ಯನ ಸಂಬಂಧಿ ಮಹದೇವಮ್ಮ ಮಾತನಾಡಿ, ಈಚೆಗೆ ಮೃತಪಟ್ಟ ಸಿದ್ದಯ್ಯ ತನ್ನ ಚಿಕ್ಕಪ್ಪನಾಗಿದ್ದು, ಇವರಿಗೆ ಭೂಮಿ ಇಲ್ಲದೇ ಇರುವುದರಿಂದ ಅನೇಕ ಮಂದಿ ಜಮೀನನ್ನು ಹೊಂದಿರುವ ಜನರನ್ನು ಕೇಳಿಕೊಳ್ಳಲಾಯಿತು. ಯಾರೂ ಒಪ್ಪದ ಹಿನ್ನೆಲೆ ಕಾಲುವೆಯ ಪಕ್ಕ ಅಂತ್ಯಸಂಸ್ಕಾರವನ್ನು ಮಾಡಿ ಅಲ್ಲಿಯೇ 11ನೇ ದಿನದ ಪುಣ್ಯಕಾರ್ಯವನ್ನು ಮಾಡಲಾಯಿತು ಎಂದರು.
ಊರಿನಲ್ಲಿ ಎಲ್ಲ ದಲಿತರ ಪರಿಸ್ಥಿತಿಯು ಸಿಕ್ಕ ಜಾಗದಲ್ಲಿಯೇ ಅಂತ್ಯ ಸಂಸ್ಕಾರ ಮಾಡಿಸುವ ಪರಿಸ್ಥಿತಿಯಾಗಿದ್ದು, ತಮ್ಮ ಜನಾಂಗಕ್ಕೆ ಸೂಕ್ತವಾದ ನ್ಯಾಯ ಒದಗಿಸಬೇಕಿದೆ. ಮುಂದಿನ ದಿನಗಳಲ್ಲಿ ಸೂಕ್ತವಾದ ಜಾಗವನ್ನು ಅಧಿಕಾರಿಗಳು ಮಂಜೂರು ಮಾಡುವಲ್ಲಿ ವಿಫಲವಾದರೆ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡಬೆಕಾಗುತ್ತದೆ ಎನ್ನುತ್ತಾರೆ.ಇನ್ನಾದರೂ ಇಲ್ಲಿನ ದಲಿತರಿಗೆ ಸ್ಮಶಾನದ ಭೂಮಿ ಮಂಜೂರು ಮಾಡುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವರೇ ಎಂದು ಕಾದು ನೋಡಬೇಕಿದೆ.ಇಡೀ ತಾಲೂಕಿನಲ್ಲಿ ಗ್ರಾಮಗಳಲ್ಲಿ ಇಂದಿಗೂ ದಲಿತರಿಗೆ ಸ್ಮಶಾನದ ಭೂಮಿ ದೊರೆಯುತ್ತಿಲ್ಲ. ಅಧಿಕಾರಿಗಳು ಸ್ಮಶಾನದ ಭೂಮಿಯನ್ನು ಮಂಜೂರು ಮಾಡುವಲ್ಲಿ ವಿಫಲವಾಗಿರುವ ಪರಿಣಾಮ ರಸ್ತೆ ಬದಿಗಳು, ಕಾಲುವೆ ಪಕ್ಕ ಹೀಗೆ ಎಲ್ಲೆಂದರಲ್ಲಿ ಶವವನ್ನು ಸುಡುವ ಪರಿಸ್ಥಿತಿ ತಲೆ ದೊರಿದೆ. ಸತ್ತವರ ದೇಹಕ್ಕೂ ಸೂಕ್ತ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗದ ಪರಿಸ್ಥಿತಿ ದಲಿತರಿಗೆ ಬಂದೊದಗಿದೆ.
- ಉಮಾಮಹದೇವ, ಜಿಲ್ಲಾ ಸಂಚಾಲಕ, ದಸಂಸ