ಸಾರಾಂಶ
ಈ ಕೂಡಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಎಂದು ಒತ್ತಾಯಿಸಿ ಚಾಮರಾಜನಗರ ಬಂದ್ ಮಾಡಲು ದಲಿತ, ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ನಿರ್ಧರಿಸಿದರು. ಚಾಮರಾಜನಗರದಲ್ಲಿ ದಲಿತ, ಕನ್ನಡ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಡಾ.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದು, ಇದೊಂದು ರಾಷ್ಟ್ರದ್ರೋಹ ಹಾಗೂ ಕ್ರಿಮಿನಲ್ ಪ್ರಕರಣವಾಗಿದೆ. ಈ ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಎಂದು ಒತ್ತಾಯಿಸಿ ಚಾಮರಾಜನಗರ ಬಂದ್ ಮಾಡಲು ದಲಿತ, ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ನಿರ್ಧರಿಸಿದರು. ನಗರದ ಪ್ರವಾಸಿಮಂದಿರದಲ್ಲಿ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ನೇತೃತ್ವದಲ್ಲಿ ದಲಿತ, ಕನ್ನಡ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು ಚಾಮರಾಜನಗರ ಬಂದ್‌ಗೆ ಬೆಂಬಲ ನೀಡುವ ಜೊತೆಗೆ ಜಿಲ್ಲೆಯ ಎಲ್ಲ ದಲಿತ ಪರ ಸಂಘಟನೆಗಳು, ವರ್ತಕರ ಸಂಘ, ಬಸ್ ಮಾಲೀಕರ ಸಂಘ, ಹೋಟೆಲ್ ಮಾಲೀಕರ ಸಂಘ, ಅಟೋ ಮಾಲೀಕರ ಸಂಘ, ತಮಿಳು ಸಂಘ, ರೈತಪರ ಸಂಘಟನೆಗಳು, ವಕೀಲರ ಸಂಘ, ಕನ್ನಡಪರ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು, ಸೇರಿದಂತೆ ಎಲ್ಲ ಸಂಘಟನೆಗಳ ಬೆಂಬಲವನ್ನು ಪಡೆದುಕೊಂಡು ಜಿಲ್ಲಾ ಕೇಂದ್ರದಲ್ಲಿ ಡಿ.೨೭ರ ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ಡಾ.ಬಿ.ಆರ್.ಅಂಭೇಡ್ಕರ್ ಭವನದಲ್ಲಿ ಸಭೆ ನಡೆಸಿ, ಸೂಕ್ತ ದಿನಾಂಕ ನಿಗದಿ ಹಾಗೂ ಹೋರಾಟ ರೂಪರೇಷೆಗಳ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಪಾಪು ಮಾತನಾಡಿ, ಡಾ.ಅಂಬೇಡ್ಕರ್ ಅವರು ಈ ದೇಶದ ಅಸ್ತಿ, ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ನೀಡಿದ ಮಹಾನ್ ಜ್ಞಾನಿ. ಇಂಥ ಮಹಾಪುರುಷರ ಹೆಸರು ಹೇಳುವ ಯೋಗ್ಯತೆಯೂ ಅಮಿತ್ ಶಾಗೆ ಇಲ್ಲ. ಅಮಿತ್ ಶಾ ಹೇಳಿಕೆ ಕೇವಲ ದಲಿತ ಸಮುದಾಯಕ್ಕೆ ನೋವಾಗಿಲ್ಲ. ಭಾರತದ ಸರ್ವ ಜನಾಂಗಕ್ಕೂ ಅಪಮಾನ ಮಾಡಿದ್ದಾರೆ. ಈ ಕೂಡಲೇ ಅಮಿತ್ ಶಾ ದೇಶದ ಜನರನ್ನು ಕ್ಷಮೆ ಕೋರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಚಾಮರಾಜನಗರ ಜಿಲ್ಲೆಯಲ್ಲಿ ಈ ಹೇಳಿಕೆ ವಿರುದ್ಧ ನಿರಂತರ ಹೋರಾಟ ನಡೆಯಲಿದೆ. ಬಂದ್ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ಜೊತೆಗೆ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಅಮಿತ್ ಶಾರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು. ಸಭೆಯಲ್ಲಿ ದಲಿತ ಮುಖಂಡರಾದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ವೀರಶೈವ ಮುಖಂಡ ಹಂಡ್ರಕಳ್ಳಿ ರಾಮಪ್ಪ, ಅಮಚವಾಡಿ ಶಿವಣ್ಣ, ಎಸ್‌ಟಿಪಿಐ ಜಿಲ್ಲಾ ಉಪಾದ್ಯಕ್ಷ ಸೈಯದ್ ಅರೀಪ್, ಬೆಳ್ಳಿಯಪ್ಪ, ಛಲವಾದಿ ಕ್ಷೇಮಾಭಿವೃದ್ದಿ ಸಂಘದ ಸೋಮಸುಂದರ್, ಬೆಳ್ಳಿಯಪ್ಪ, ಛಲವಾದಿ ಮಹಾಸಭಾದ ಅಧ್ಯಕ್ಷ ಕರಿನಂಜನಪುರ ನಾರಾಯಣ, ವಕೀಲ ದಲಿತ್‌ರಾಜ್, ರಂಗಸ್ವಾಮಿ, ರವಿಕುಮಾರ್ ಮೊದಲಾದವರು ಇದ್ದರು.