ಸಾರಾಂಶ
ಕನಕಪುರ: ಅನ್ಯಾಯ, ಅಕ್ರಮಗಳ ಬಗ್ಗೆ ಧನಿಯೆತ್ತಿದ ದಲಿತಪರ ಸಂಘಟನೆಯ ನಾಯಕ ಕೊತ್ತಿಪುರ ಗೋವಿಂದರಾಜು ಮೇಲೆ ರಾಮನಗರ ಶಾಸಕ ಇಕ್ಫಾಲ್ ಹುಸೇನ್ ಬೆಂಬಲಿಗರಿಂದ ಹಲ್ಲೆ ಮಾಡಿಸಿ ಕೊಲೆಗೆ ಯತ್ನಿಸಿರುವುದು ಹೇಯಕೃತ್ಯ ಎಂದು ತಾಲೂಕು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
ದಲಿತ ಮುಖಂಡನ ಮೇಲಿನ ಹಲ್ಲೆ ಖಂಡಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುನಾಥ್‌ಗೆ ಮನವಿ ಸಲ್ಲಿಸಿ ಮಾತನಾಡಿ, ರಾಮನಗರದಲ್ಲಿ ರಾಕ್ಷಸರ, ರೌಡಿಗಳ ಹಾವಳಿ ದಿನೇದಿನೇ ಹೆಚ್ಚಾಗುತ್ತಿದ್ದು ಶಾಸಕರು ಹಾಗೂ ಅವರ ಪಟಾಲಂ ಅನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು,ರಾಮನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿಗೆ ನಿಯಮಾನುಸಾರ ದಲಿತಪರ ನಾಯಕರನ್ನ ಆಹ್ವಾನಿಸದ ಶಾಸಕರು ಹಾಗೂ ಜಿಲ್ಲಾಡಳಿತ ಕಾಂಗ್ರೆಸ್ ಪರ ಒಲವುಳ್ಳ ಕೆಲವೇ ಸಂಘಟನೆಗಳ ಮುಖಂಡರನ್ನು ಕರೆಸಿ ಕಾರ್ಯಕ್ರಮ ಮಾಡಿದ್ದನ್ನು ವಿರೋಧಿಸಿ ಸ್ವಾಭಿಮಾನಿ ದಲಿತಪರ ಸಂಘಟನೆಗಳು ಪ್ರತ್ಯೇಕವಾಗಿ ಅಂಬೇಡ್ಕರ್ ಜಯಂತಿ ಆಚರಿಸಿದ್ದರು. ಅಲ್ಲದೆ ಇತ್ತೀಚೆಗೆ ರಾಮನಗರದಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ದಲಿತ ಮಹಿಳೆಯೋರ್ವರು ಕಾಲ್ತುಳಿತದಿಂದ ಕೈ ಮುರಿದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಕೊತ್ತಿಪುರ ಗೋವಿಂದರಾಜು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದರಿಂದ ಶಾಸಕರು ಬೆಂಬಲಿಗರಿಂದ ಹಲ್ಲೆ ಮಾಡಿಸಿದ್ದಾರೆಂದು ಆರೋಪಿಸಿದರು.
ವೈಯಕ್ತಿಕ ಕೆಲಸದ ಮೇಲೆ ಹೋಗಿದ್ದ ಗೋವಿಂದರಾಜು ಮೇಲೆ ರಾಮನಗರ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಮದರ್ ಸಾಬರ ದೊಡ್ಡಿ ಜಯಕರ್ನಾಟಕ ರವಿ, ಜೋಗಿಂದರ್ ಹಾಗೂ ಸಹಚರರು ರಾಮನಗರದ ರಾಮಕೃಷ್ಣ ನರ್ಸಿಂಗ್ ಹೋಂ ಮುಂದೆ ಮಾರಾಣಾಂತಿಕ ಹಲ್ಲೆ ನಡೆಸಿರುವುದು ಶಾಸಕ ರೌಡಿ ಹಿನ್ನೆಲೆ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದಲಿತ ನಾಯಕ ಪ್ರಶಾಂತ್ ಹೊಸದುರ್ಗ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ, ಪ್ರಶ್ನಿಸುವ ಸಾಂವಿಧಾನಿಕ ಪ್ರಜ್ಞೆಯುಳ್ಳ ನಾಯಕರನ್ನು ಹಲ್ಲೆ ಮಾಡಿ ಕೊಲ್ಲಲು ಯತ್ನಿಸಿ ಭಯದ ವಾತಾವರಣ ನಿರ್ಮಿಸುವ ಶಾಸಕರ ಬೆಂಬಲಿಗರ ಕೃತ್ಯಕ್ಕೂ ಕಾಶ್ಮೀರದಲ್ಲಿ ಅಮಾಯಕರ ಮೇಲಿನ ದಾಳಿಗೂ ವ್ಯತ್ಯಾಸವೇ ಇಲ್ಲ. ರೈತಪರ, ಜನಪರ ಹೋರಾಟಗಾರರ ಮೇಲೆ ರೌಡೀಸಂ ಮಾಡುವವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರದ ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ರಾಮನಗರ ಜಿಲ್ಲಾದ್ಯಂತ ದಲಿತರ ಸ್ಥಿತಿ ಶೋಚನೀಯ. ಘಟನೆ ನಡೆದು 24 ಗಂಟೆಗಳಾದರೂ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸದೆ ಮೀನಮೇಷ ಎಣಿಸುತ್ತಿರುವುದು ನೋಡಿದರೆ ಪೋಲೀಸ್ ಇಲಾಖೆ ನಿರ್ಲಕ್ಷ್ಯ ಹಾಗೂ ಆಲಸ್ಯ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಚೀಲೂರು ಮುನಿರಾಜು, ಬಿಎಸ್‌ಪಿ ಜಿಲ್ಕಾಧ್ಯಕ್ಷ ರಾಜ್ ಮೌರ್ಯ, ಜಿಲ್ಲಾ ಶ್ರೀರಾಮಸೇನೆ ಅಧ್ಯಕ್ಷ ನಾಗಾರ್ಜುನ್, ಹಾರೋಶಿವನಹಳ್ಳಿ ಕಹಳೆ ರುದ್ರೇಶ್, ಕೆಆರ್‌ಎಸ್ ಶಿವಮ್ಮ, ದುರ್ಗೇಶ್, ದಲಿತ ಮುಖಂಡ ಪ್ರವೀಣ್, ಬೊಮ್ಮನಹಳ್ಳಿ ಕುಮಾರ್ ಚೀರಣಕುಪ್ಪೆ ರಾಜೇಶ್, ರೈತ ಸಂಘದ ತಿಮ್ಮೇಗೌಡ, ಮುನಿಸಿದ್ದೇಗೌಡ, ನಾಗರಾಜು, ಕಲ್ಲಹಳ್ಳಿ ಬಾಬು ಹಾಗೂ ಸಾಸಲಾಪುರ ಜಗದೀಶ್ ಇತರರು ಪಾಳ್ಗೊಂಡಿದ್ದರು.
ಕೆ ಕೆ, ಪಿ ಸುದ್ದಿ 01:ಲಿತಪರ ಸಂಘಟನೆಯ ನಾಯಕ ಕೊತ್ತಿಪುರ ಗೋವಿಂದರಾಜು ಮೇಲೆ ರಾಮನಗರ ಶಾಸಕ ಇಕ್ಫಾಲ್ ಹುಸೇನ್ ಬೆಂಬಲಿಗರಿಂದ ಹಲ್ಲೆ ಖಂಡಿಸಿ ಕನಕಪುರ ತಾಲೂಕು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುನಾಥ್ ಗೆ ಮನವಿ ಸಲ್ಲಿಸಿದರು.