ಸಾರಾಂಶ
ಮೀಸಲಾತಿ ಜಾರಿ ಸಂಬಂಧ ಮುಖ್ಯಮಂತ್ರಿಗಳು ಇದುವರೆಗೆ ಯಾವುದೇ ತೀರ್ಮಾನ ಕೈಗೊಳ್ಳದ ಕಾರಣ ದಲಿತ ಸಂಘಟನೆ ಮುಖಂಡರು ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ಮುಗಿಸಿದ ನಂತರ ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಸಿದ್ದರಾಮಯ್ಯ ಅವರನ್ನು ಘೇರಾವು ಮಾಡಿ ಕಪ್ಪುಬಟ್ಟೆ ಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಯತ್ನಿಸಿದ ದಲಿತ ಸಂಘಟನೆ ಮುಖಂಡರನ್ನು ವಶಕ್ಕೆ ತೆಗೆದುಕೊಂಡ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆ ತಾಲೂಕಿನ ಗೆಜ್ಜಲಗೆರೆ ಸಮೀಪದ ಕೈಗಾರಿಕಾ ಪ್ರದೇಶದ ಬಳಿ ಬುಧವಾರ ಜರುಗಿತು.ದಲಿತ ಸಂಘಟನೆ ಮುಖಂಡರಾದ ಮರಳಿಗ ಶಿವರಾಜು, ಶಂಕರ್, ಹಳ್ಳಿಕೆರೆ ಮನೋಹರ ಹಾಗೂ ಪಶುಪತಿ ಅವರುಗಳನ್ನು ಬಲವಂತವಾಗಿ ವಶಕ್ಕೆ ಪಡೆದ ಪೊಲೀಸರು, ಕೆಲ ಕಾಲ ಠಾಣೆ ಬಂಧನದಲ್ಲಿರಿಸಿ ನಂತರ ಬಿಡುಗಡೆ ಮಾಡಿದರು.
ಒಳ ಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಸಂಬಂಧ ಆಯೋಗ ರಚನೆ ಮಾಡಲು ವಿಳಂಬ ಮಾಡುತ್ತಿದೆ. ಈ ಬಗ್ಗೆ ದಲಿತ ಸಂಘಟನೆಗಳ ಮುಖಂಡರು ಗಗನಚುಕ್ಕಿ ಜಲಪಾತೋತ್ಸವಕ್ಕೆ ಆಗಮಿಸಿದ್ದ ಸಿಎಂಗೆ ಮನವಿ ಸಲ್ಲಿಸಲಾಗಿತ್ತು.ಮೀಸಲಾತಿ ಜಾರಿ ಸಂಬಂಧ ಮುಖ್ಯಮಂತ್ರಿಗಳು ಇದುವರೆಗೆ ಯಾವುದೇ ತೀರ್ಮಾನ ಕೈಗೊಳ್ಳದ ಕಾರಣ ದಲಿತ ಸಂಘಟನೆ ಮುಖಂಡರು ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ಮುಗಿಸಿದ ನಂತರ ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಸಿದ್ದರಾಮಯ್ಯ ಅವರನ್ನು ಘೇರಾವು ಮಾಡಿ ಕಪ್ಪುಬಟ್ಟೆ ಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದರು.
ಈ ಬಗ್ಗೆ ಮಾಹಿತಿ ಅರಿತ ಪೊಲೀಸರು, ಗೆಜ್ಜಲಗೆರೆ ಕೈಗಾರಿಕಾ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯ ನಿರ್ಗಮನ ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಆಗಮಿಸಿದ್ದ ದಲಿತ ಮುಖಂಡರ ಪೈಕಿ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ನಂತರ ಸಂಜೆಯ ವೇಳೆಗೆ ಬಿಡುಗಡೆ ಮಾಡಿದ್ದಾರೆ.