ಪುತ್ತೂರು ತಾಲೂಕು ಅಂಬೇಡ್ಕರ್ ಭವನ ಶೀಘ್ರ ನಿರ್ಮಾಣಕ್ಕೆ ದಲಿತ ಮುಖಂಡರ ಆಗ್ರಹ

| Published : Nov 04 2025, 01:02 AM IST

ಪುತ್ತೂರು ತಾಲೂಕು ಅಂಬೇಡ್ಕರ್ ಭವನ ಶೀಘ್ರ ನಿರ್ಮಾಣಕ್ಕೆ ದಲಿತ ಮುಖಂಡರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪ.ಜಾತಿ ಮತ್ತು ಪಂಗಡದ ಕುಂದು ಕೊರತೆಗಳ ಸಭೆ ಬುಧವಾರ ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಭಾರ ತಹಸೀಲ್ದಾರ್ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.

ಪುತ್ತೂರು: ದಲಿತ ಸಂಘಟನೆಗಳು ಕಳೆದ ೨೦೧೩ರಿಂದ ಪುತ್ತೂರಿಗೆ ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಿಸಬೇಕು ಎಂದು ಆಗ್ರಹಿಸುತ್ತಾ ಬಂದಿದೆ. ಅದರೊಂದಿಗೆ ೨೦೧೭ರಿಂದ ಪುತ್ತೂರಿನ ದರ್ಬೆ ಸರ್ಕಲ್‌ಗೆ ಅಂಬೇಡ್ಕರ್ ಹೆಸರು ಇರಿಸುವಂತೆ ಬೇಡಿಕೆ ಸಲ್ಲಿಸುತ್ತಲೇ ಬಂದಿದೆ. ಆದರೆ ಈ ತನಕ ಇವೆರಡೂ ನಡೆಯದಿರುವುದು ಶೋಚನೀಯ ವಿಚಾರ ಇವೆರಡೂ ಅತೀ ಶೀಘ್ರದಲ್ಲಿ ಕಾರ್ಯಗತಗೊಳಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.

ಪ.ಜಾತಿ ಮತ್ತು ಪಂಗಡದ ಕುಂದು ಕೊರತೆಗಳ ಸಭೆ ಬುಧವಾರ ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಭಾರ ತಹಸೀಲ್ದಾರ್ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡರಾದ ಬಿ.ಕೆ. ಅಣ್ಣಪ್ಪ, ಮುಖೇಶ್ ಕೆಮ್ಮಿಂಜೆ, ಸೇಸಪ್ಪ ನೆಕ್ಕಿಲು ಮತ್ತಿತರರು ನಗರದ ಬನ್ನೂರಿನಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಈ ಜಾಗಕ್ಕೆ ಸಂಬಂಧಿಸಿದಂತೆ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ ಅವರಿಗೆ ಬೇರೆ ಕಡೆಯಲ್ಲಿ ೧೦-೧೫ ಸೆಂಟ್ಸ್ ಜಾಗ ನೀಡಿದಲ್ಲಿ ತೆರವು ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ತಾಲೂಕು ದಂಡಾಧಿಕಾರಿ ಮಧ್ಯ ಪ್ರವೇಶಿಸಿ ಇತ್ಯರ್ಥಪಡಿಸಬೇಕು ಮತ್ತು ಅಂಬೇಡ್ಕರ್ ಭವನ ಶೀಘ್ರ ನಿರ್ಮಾಣವಾಗಬೇಕು ಕೆಲವು ವರ್ಷಗಳಿಂದ ನಾವು ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದೇವೆ. ನಗರಸಭೆಯ ಕಡೆಯಿಂದಲೂ ನ್ಯಾಯಾಲಯದಲ್ಲಿ ಪ್ರಯತ್ನ ನಡೆಸುತ್ತಿದ್ದರೂ ಇತ್ಯರ್ಥ ಆಗಿಲ್ಲ. ಶೀಘ್ರ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ ಆಗುವ ನಿಟ್ಟಿನಲ್ಲಿ ತಹಸೀಲ್ದಾರ್ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು. ಪುತ್ತೂರಿನಲ್ಲಿ ಯಾವುದೇ ಸರ್ಕಲ್‌ಗೆ ಅಂಬೇಡ್ಕರ್ ಹೆಸರಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಯಾವ ಸ್ಥಿತಿಯಲ್ಲಿದೆ ಎಂದು ಬಹಿರಂಗಪಡಿಸಿ. ಕೇಸ್ ನಂಬರ್ ಕೂಡ ನಮೂದಿಸಿಲ್ಲ. ೨೦೧೭ ರಿಂದ ಸತತವಾಗಿ ನಗರಸಭೆಗೆ ಮನವಿ ಸಲ್ಲಿಸಿ ಅಂಬೇಡ್ಕರ್ ನಾಮಕಾರಣ ಮಾಡುವಂತೆ ಒತ್ತಾಯಿಸಲಾಗಿದೆ. ಕೋಚಣ್ಣ ರೈ ಅವರ ನಾಮಕರಣ ಬೇರೆ ಸರ್ಕಲ್‌ಗೆ ಮಾಡಿ. ದರ್ಬೆ ಸರ್ಕಲ್‌ಗೆ ಡಾ. ಅಂಬೇಡ್ಕರ್ ನಾಮಕರಣವೇ ಆಗಬೇಕು ಎಂದು ಸೇಸಪ್ಪ ನೆಕ್ಕಿಲು, ಅಣ್ಣಪ್ಪ ಬಿ.ಕೆ, ಮುಖೇಶ್ ಕೆಮ್ಮಿಂಜೆ, ಗಿರಿಧರ್ ನಾಯ್ಕ್, ಕೊರಗಪ್ಪ ಮತ್ತಿತರರು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ನಗರಸಭೆಯ ಅಧಿಕಾರಿಗಳು ವೃತ್ತಕ್ಕೆ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ ಅವರ ಹೆಸರು ಇರಿಸುವಂತೆ ಮನವಿಗಳು ಬಂದಿದ್ದು, ನಿರ್ಣಯದಂತೆ ಹಾಗೂ ಬಂದ ಆಕ್ಷೇಪಿತ ಅರ್ಜಿಗಳೊಂದಿಗೆ ಪ್ರಕರಣವನ್ನು ಜಿಲ್ಲಾಧಿಕಾರಿಗೆ ಪ್ರಸ್ತಾಪಿಸಲಾಗಿತ್ತು. ಚಿಲ್ಮೆತ್ತಾರು ಕೋಚಣ್ಣ ರೈ ಅವರ ಹೆಸರು ಇರಿಸುವಂತೆ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಆದಷ್ಟು ಬೇಗ ಇತ್ಯರ್ಥಪಡಿಸಲು ವಕೀಲರೊಂದಿಗೆ ಚರ್ಚಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು. ಪ್ರಕರಣದ ಸ್ಥಿತಿಯ ಕುರಿತು ತಿಳಿದುಕೊಂಡು ಸಂಜೆಯ ಒಳಗೆ ತಿಳಿಸುವುದಾಗಿ ಭರವಸೆ ನೀಡಿದರು.

ಪುತ್ತೂರು ತಾಲೂಕಿನ ಬಡಗನ್ನೂರು ಎಂಬಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ನಡೆದ ದೌರ್ಜನ್ಯದ ಪೊಕ್ಸೋ ಪ್ರಕರಣಕ್ಕೆ ಸಂಬಂದಿಸಿ ಸಂತ್ರಸ್ತೆಗೆ ಮನೆ ನಿರ್ಮಾಣ ಮಾಡಿಕೊಡಬೇಕು. ಅವರ ಮನೆಯವರು ಸಾಕಷ್ಟು ಕಿರುಕುಳ ಅನುಭವಿಸಿ ಹೈರಾಣಾಗಿದ್ದಾರೆ. ಜತೆಗೆ ಈಗಲೂ ಬೆದರಿಕೆಗೆ ಒಳಗಾಗಿದ್ದಾರೆ. ಆರೋಪಿಯ ಬೆದರಿಕೆಯಿಂದ ಡಿಎನ್‌ಎ ತಪಾಸಣೆಗೆ ಸಂತ್ರಸ್ತೆ ಒಪ್ಪುತ್ತಿಲ್ಲ. ಪೊಲೀಸರಿಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದ ಅಣ್ಣಪ್ಪ ಬಿ.ಕೆ. ಅವರು ತಹಸೀಲ್ದಾರ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ಮನೆ ಸ್ಥಳೀಯಾಡಳಿತದ ಮೂಲಕ ಮಾತ್ರ ನೀಡಲು ಸಾಧ್ಯ ಎಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಕೆಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ ಕುಮಾರಿಇದ್ದರು.