ದಲಿತ ಮುಖಂಡರ ಸಭೆ ಕರೆದು ಅವಮಾನ : ಜಯನ್ ಮಲ್ಪೆ

ಉಡುಪಿ: ನಗರಸಭೆಯ ಎಸ್ಸಿ- ಎಸ್ಟಿ ಆರೋಗ್ಯ ವಿಮಾ ಯೋಜನೆಯ ಅವ್ಯವಸ್ಥೆ ಬಗ್ಗೆ ದಲಿತ ಮುಖಂಡರ ಸಭೆ ಕರೆದ ಪೌರಾಯುಕ್ತರು, ಸುಮಾರು ಎರಡು ಗಂಟೆಗಳ ಕಾಲ ಛೇಂಬರ್‌ಗೆ ಬಾರದೆ ದಲಿತ ಮುಖಂಡರಿಗೆ ಅವಮಾನ ಮಾಡಿದ್ದಾರೆ ಎಂದು ದಲಿತ ಚಿಂತಕ ಜಯನ್ ಮಲ್ಪೆ ಆರೋಪಿದ್ದಾರೆ.ಕಳೆದ ತಿಂಗಳು ಜಿಲ್ಲಾಧಿಕಾರಿಗಳ ಕುಂದು ಕೊರತೆಗಳ ಸಭೆಯಲ್ಲಿ ದಲಿತ ಮುಖಂಡರು ನಗರಸಭೆಯ ದಲಿತರ ಆರೋಗ್ಯ ವಿಮಾಯೋಜನೆಯಲ್ಲಿ ಆಗುತ್ತಿರುವ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆದಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ನಗರಸಭೆಯ ಪೌರಾಯುಕ್ತರಿಗೆ ದಲಿತ ಮುಖಂಡರ ಸಭೆ ಕರೆದು ಸಮಸ್ಯೆಯನ್ನು ಪರಿಹರಿಸುವಂತೆ ಆದೇಶಿಸಿದ್ದರು.

ಅದರಂತೆ ಪೌರಾಯುಕ್ತರು ಬೆಳಿಗ್ಗೆ 11 ಗಂಟೆಗೆ ದಲಿತ ಮುಖಂಡರನ್ನು ನಗರಸಭೆಗೆ ಕರೆದಿದ್ದರು. ಆದರೆ ಪೌರಾಯುಕ್ತರು ದಲಿತ ಮುಖಂಡರನ್ನು ತಮ್ಮ ಛೇಂಬರ್‌ನಲ್ಲಿ ಕೂರಿಸಿ 2 ಗಂಟೆಗಳ ಕಾಲ ಕಾಯಿಸಿದ್ದಾರೆ. ಶಾಸಕರ ಮತ್ತು ಮಾಜಿ ನಗರಸಭೆಯ ಸದಸ್ಯರನ್ನು ಕರೆದು ದಲಿತ ಮುಖಂಡರು ಜಿಲ್ಲಾಧಿಕಾರಿಗಳ ಕುಂದುಕೊರೆತ ಸಭೆಯಲ್ಲಿ ಹೇಳಿರುವುದರ ವಿರುದ್ಧ ಸಭೆ ನಡೆಸಿ, ಹಿಂದೆ ಆರೋಗ್ಯ ಕಾರ್ಡ್‌ ನೀಡಿದ್ದ ಕಂಪೆನಿಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಜಯನ್ ಮಲ್ಪೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿ ನಗರಸಭೆಯಲ್ಲಿ ದಲಿತರಿಗೆ ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿ ಈ ವಿಮಾ ಕಂಪೆನಿಯ ಯಾವುದೇ ಕಚೇರಿ ಇರುವದಿಲ್ಲ. ರೋಗಿಗಳು ತಮ್ಮ ಚಿಕಿತ್ಸೆಯ ಬಿಲ್ ಕ್ಲೈಮ್ ಮಾಡಲು ಬಂದರೆ ಕಂಪೆನಿಯ ಸಿಬ್ಬಂದಿಗಳು ಉಡಾಫೆ ಮಾತನಾಡುತ್ತಾರೆ ಎಂದವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.ಪೌರಾಯುಕ್ತರು ಕರೆದ ಸಭೆಯಲ್ಲಿ ದಲಿತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಗಣೇಶ್ ನೆರ್ಗಿ, ಮಾಜಿ ನಗರಸಭೆ ಅಧ್ಯಕ್ಷ ಯುವರಾಜ್ ಪುತ್ತೂರು, ಮಾಜಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್, ದಲಿತ ಕಲಾಮಂಡಳಿಯ ಶಂಕರ್‌ದಾಸ್, ದಲಿತ ನಾಯಕರಾದ ಹರೀಶ್ ಸಲ್ಯಾನ್, ಶಿವಾನಂದ ಮೂಡುಬೆಟ್ಟು, ಸುಂದರಿ ಪುತ್ತೂರು, ದಿನೇಶ್ ಜವನೆರಕಟ್ಟೆ ಮುಂತಾದವರು ಭಾಗವಹಿಸಿ, ಎರಡು ಗಂಟೆಗಳ ಕಾಲ ಕಾದು ಸಭೆಯನ್ನು ಬಹಿಷ್ಕರಿಸಿದರು.