ಕಳೆದ 50 ವರ್ಷಗಳಿಂದ ದಲಿತರ ಭೂಮಿ, ಸಾಂಸ್ಕೃತಿಕ ಸಮಸ್ಯೆ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲೂಕಿನ ಸಿಂಗಾಟ ಕದಿರೇನಹಳ್ಳಿ ಗ್ರಾಮದಲ್ಲಿ ದಲಿತರ ಜಮೀನನ್ನು ಅರಣ್ಯ ಇಲಾಖೆಗೆ ಸೇರಿಸಿ ಅನ್ಯಾಯ ಮಾಡಲಾಗಿದೆ.
ಚಿಂತಾಮಣಿ ಕಂಬಾಲಹಳ್ಳಿ ನೆನೆಪಿಸಿ ದಲಿತ ಸವರ್ಣೀಯರ ನಡುವೆ ಒಡಕು ಆರೋಪ
ಕನ್ನಡಪ್ರಭ ವಾರ್ತೆ ಚಿಂತಾಮಣಿಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ಶಾಸಕರ ನಡುವಿನ ರಾಜಕೀಯ ಬಿಕ್ಕಟ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಕೆದಕದೆ, ತಮ್ಮದೇ ಪಕ್ಷದ ವೇದಿಕೆಯಲ್ಲಿ ಕುಳಿತು ಬಗೆಹರಿಸಿಕೊಂಡು ತಾಲೂಕಿನಲ್ಲಿ ಶಾಂತಿ ಸೌಹಾರ್ದ ಕಾಪಾಡಬೇಕು ದಲಿತ ಸಂಘರ್ಷ ಸಮಿತಿಯ ರಾಜ್ಯ ಹಿರಿಯ ಸಂಚಾಲಕ ಗಡ್ಡಂ ವೆಂಕಟೇಶ್ ಆಗ್ರಹಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 50 ವರ್ಷಗಳಿಂದ ದಲಿತರ ಭೂಮಿ, ಸಾಂಸ್ಕೃತಿಕ ಸಮಸ್ಯೆ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲೂಕಿನ ಸಿಂಗಾಟ ಕದಿರೇನಹಳ್ಳಿ ಗ್ರಾಮದಲ್ಲಿ ದಲಿತರ ಜಮೀನನ್ನು ಅರಣ್ಯ ಇಲಾಖೆಗೆ ಸೇರಿಸಿ ಅನ್ಯಾಯ ಮಾಡಲಾಗಿದೆ. ಇದರ ವಿರುದ್ಧ ದಲಿತ ಸಂಘರ್ಷ ಸಮಿತಿ ಹೋರಾಟ ಮಾಡಿದೆ. ಆದರೆ ಅಲ್ಲಿನ ದಲಿತರಿಗೆ ಆಗಿರುವ ಅನ್ಯಾಯದ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿಲ್ಲ. ಬದಲಾಗಿ ಸಂಬಂಧವಿಲ್ಲದ ಚಿಂತಾಮಣಿ ತಾಲೂಕಿನ ಕಂಬಾಲಹಳ್ಳಿ ಘಟನೆ ಮತ್ತು ಊಲವಾಡಿ ದೇವಸ್ಥಾನದ ವಿಚಾರವನ್ನು ಪ್ರಸ್ತಾಪಿಸುತ್ತಿರುವುದು ಸರಿಯಲ್ಲವೆಂದು ಆಕ್ಷೇಪಿಸಿದರು.ಆದಿಮ ಸಂಸ್ಥೆಯ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ, ಕಂಬಾಲಹಳ್ಳಿ ಘಟನೆ ನಡೆದು 26 ವರ್ಷಗಳಾಗಿವೆ. ಡಾ.ಎಂ.ಸಿ.ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕು. ಬೇಡಿಕೆ ಈಡೇರಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ಚಿಕ್ಕಬಳ್ಳಾಪುರದಲ್ಲಿ ದಲಿತರಿಗೆ ಅನೇಕ ಸಮಸ್ಯೆಗಳಿವೆ. ಸಿಂಗಾಟ ಕದಿರೇನಹಳ್ಳಿಯಲ್ಲಿ ದಲಿತರನ್ನು ಒಕ್ಕಲೆಬ್ಬಿಸಿದ ವಿಚಾರದಲ್ಲಿ ಧರಣಿ ಮಾಡಿದರೂ ಶಾಸಕರು ಕೈಗೆ ಸಿಗುತ್ತಿಲ್ಲ. ದಲಿತರ ಒಳಿತಿಗಾಗಿ ಕಂಬಾಲಹಳ್ಳಿ ಮತ್ತು ಊಲವಾಡಿ ವಿಚಾರವನ್ನು ಎತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ದಲಿತರು ದೇವಸ್ಥಾನದ ಒಳಗೆ ಹೋಗುತ್ತಿದ್ದಾರೆಯೇ ಎಂಬುದನ್ನು ಮೊದಲು ನೋಡಬೇಕು ಎಂದರು.
ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಬಿಟ್ಟು ಸಂಬಂಧವಿಲ್ಲದ ಇತರೆ ತಾಲ್ಲೂಕಿನ ವಿಚಾರ ಮಾತನಾಡುವುದು ಶಾಸಕರಿಗೆ ಶೋಭೆ ತರುವುದಿಲ್ಲ. ಇದು ಜನಪ್ರತಿನಿಧಿಯಾಗಿ ಶಾಸಕರು ಮಾಡುವ ಕೆಲಸವಲ್ಲ, ಇದು ಕ್ರಿಮಿನಲ್ ಆಕ್ಟಿವಿಟಿಗೆ ಸಂಬಂಧಿಸಿದ್ದು, ಅವರ ಹೇಳಿಕೆಗಳು ಚಿಂತಾಮಣಿಯಲ್ಲಿ ಮತ್ತೊಂದು ದುರ್ಘಟನೆಗೆ ಕಾರಣವಾಗಬಹುದೆಂದು ಎಚ್ಚರಿಸಿದರು.ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಜಾತಿಗಳ ನಡುವೆ ಬೆಂಕಿ ಹಚ್ಚುವಂತಹ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ಕಷ್ಟ ಬಂದಾಗ ಮಾತ್ರ ಅಂಬೇಡ್ಕರ್ ನೆನಪು ಮಾಡಿಕೊಳ್ಳುವುದೂ ಸರಿಯಲ್ಲ. ಇನ್ನಾದರೂ ಸಮಾಜದಲ್ಲಿ ಜನರನ್ನು ಉದ್ರೇಕಿಸುವಂತಹ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಮುಖಂಡ ಜಂಗಮಪ್ಪ ಮಾತನಾಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶ್ರೀರಂಗಪ್ಪ, ಸೀಕಲ್ ಎಸ್.ಸಿ. ನಾರಾಯಣಸ್ವಾಮಿ, ನಾರಾಯಣನಾಯಕ್ ಮತ್ತಿತರರು ಉಪಸ್ಥಿತರಿದ್ದರು.ಚಿತ್ರಶೀರ್ಷಿಕೆ: ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿದಲಿತ ಸಂಘರ್ಷ ಸಮಿತಿಯ ರಾಜ್ಯ ಹಿರಿಯ ಸಂಚಾಲಕ ಗಡ್ಡಂ ವೆಂಕಟೇಶ್ ಮಾತನಾಡಿದರು.