ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂದು ಎಸ್‌ಸಿ ಎಸ್‌ಟಿ ಸಭೆಯಲ್ಲಿ ಧರಣಿಗೆ ಮುಂದಾದ ದಲಿತ ಮುಖಂಡರು

| Published : Dec 23 2024, 01:01 AM IST

ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂದು ಎಸ್‌ಸಿ ಎಸ್‌ಟಿ ಸಭೆಯಲ್ಲಿ ಧರಣಿಗೆ ಮುಂದಾದ ದಲಿತ ಮುಖಂಡರು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂದು ಆರೋಪಿಸಿ ದಲಿತ ಮುಖಂಡರು ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲೇ ಧರಣಿಗೆ ಯತ್ನಿಸಿದ ವಿದ್ಯಮಾನ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂದು ಆರೋಪಿಸಿ ದಲಿತ ಮುಖಂಡರು ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲೇ ಧರಣಿಗೆ ಯತ್ನಿಸಿದ ವಿದ್ಯಮಾನ ನಡೆಯಿತು.

ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ಡಿಸಿಪಿ ಸಿದ್ಧಾರ್ಥ ಗೋಯಲ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ ಸಂಚಾಲಕ ಎಸ್‌.ಪಿ. ಆನಂದ್‌ ವಿಷಯ ಪ್ರಸ್ತಾಪಿಸಿದರು.

ನಗರದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರೋಹಿತ್‌ ಕುಮಾರ್‌ ಎಂಬವರ ಶಾಲಾ ಕಾಲೇಜು ದಾಖಲಾತಿ ಮೂಲ ಪ್ರತಿ ತೆಗೆದಿರಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪ್ರಾಂಶುಪಾಲರನ್ನು ಕರೆಸಿ ವಿಚಾರಣೆ ಮಾಡಿ ಕ್ರಮ ವಹಿಸುವ ಬದಲು ಉಪ ಪ್ರಾಂಶುಪಾಲರನ್ನು ಕರೆಸಿ ತನಿಖೆ ನಡೆಸಲಾಗಿದೆ. ಇದು ಸರಿಯಲ್ಲ ಎಂದು ಆನಂದ್‌ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಎಸಿಪಿಯವರಲ್ಲಿ ವಿಚಾರಿಸಿ ಕೈಗೊಂಡ ಕ್ರಮದ ಬಗ್ಗೆ ತಿಳಿಸುವುದಾಗಿ ಡಿಸಿಪಿ ಸಿದ್ಧಾರ್ಥ ಗೋಯಲ್‌ ತಿಳಿಸಿದರು. ಇದರಿಂದ ತೃಪ್ತರಾಗದ ಆನಂದ್‌, ಈ ರೀತಿ ಮತ್ತೆ ಉತ್ತರಕ್ಕಾಗಿ ಒಂದು ತಿಂಗಳು ಕಾಯುವ ಪರಿಸ್ಥಿತಿ ಸರಿಯಲ್ಲ. ಇಂತಹ ದೌರ್ಜನ್ಯದ ವಿಚಾರದಲ್ಲಿ ಸೂಕ್ತ ಕಾನೂನು ಕ್ರಮದ ಬಗ್ಗೆ ಗಮನ ಹರಿಸಲಾಗುತ್ತಿಲ್ಲ ಎಂದು ಹೇಳಿ ವೇದಿಕೆ ಎದುರು ಧರಣಿಗೆ ಮುಂದಾದರು.ಇದರಿಂದ ಬೇಸರಗೊಂಡ ಡಿಸಿಪಿ ಸಿದ್ಧಾರ್ಥ ಗೋಯಲ್‌, ನಾನು ಈಗಾಗಲೇ ಈ ಬಗ್ಗೆ ಎಸಿಪಿ ಬಳಿ ವಿಚಾರಿಸುವುದಾಗಿ ತಿಳಿಸಿದರೂ ಈ ರೀತಿ ಪ್ರತಿಭಟಿಸುವುದು ಸರಿಯಲ್ಲ. ಪ್ರಾಂಶುಪಾಲರ ಅನಾರೋಗ್ಯದ ಕಾರಣ ಉಪಪ್ರಾಂಶುಪಾಲರನ್ನು ವಿಚಾರಿಸಲಾಗಿದೆ ಎಂದರು.

ಮಹಿಳಾ ಪೊಲೀಸರನ್ನೇ ನೇಮಿಸಿ:

ಮಹಿಳಾ ಪೊಲೀಸ್‌ ಠಾಣೆಯಲ್ಲಿ ಎಸ್‌ಐ, ಇನ್ಸ್‌ಪೆಕ್ಟರ್‌ ದರ್ಜೆಯಲ್ಲಿ ಮಹಿಳಾ ಪೊಲೀಸರನ್ನೇ ನೇಮಕ ಮಾಡಬೇಕು. ಇಲ್ಲವಾದಲ್ಲಿ ದೌರ್ಜನ್ಯದ ಕುರಿತಂತೆ ದೂರು ನೀಡಲು ಬರುವ ಮಹಿಳೆಯರು ಮುಜಗರ ಅನುಭವಿಸಬೇಕಾಗುತ್ತದೆ. ಮುಕ್ತವಾಗಿ ತಮ್ಮ ದೂರನ್ನು ನೀಡಲು ಕಷ್ಟವಾಗುತ್ತದೆ ಎಂದು ಎಸ್‌.ಪಿ. ಆನಂದ್‌ ಹೇಳಿದರು.ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್‌ ಸೇವನೆ ಹೆಚ್ಚಾಗುತ್ತಿರುವ ಬಗ್ಗೆ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ ಹೆಚ್ಚಾಗಬೇಕು ಎಂದು ದಲಿತ ಮುಖಂಡ ಅನಿಲ್‌ ಕಂಕನಾಡಿ ಆಗ್ರಹಿಸಿದರು. ಈ ಕಾರ್ಯ ನಿರಂತರವಾಗಿ ಇಲಾಖೆಯಿಂದ ಮಾಡಲಾಗುತ್ತಿದೆ. ಈ ವರ್ಷ ಈ ಹಿಂದಿಗಿಂತಲೂ ಹೆಚ್ಚಿನ ಪ್ರಕರಣಗಳು ಡ್ರಗ್ಸ್‌ ವಿಚಾರವಾಗಿ ದಾಖಲಾಗಿದ್ದು, 1,000 ದಷ್ಟು ಸೇವನೆಗೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಡಿಸಿಪಿ ಸಿದ್ಧಾರ್ಥ ಗೋಯಲ್‌ ಹೇಳಿದರು. ಇನ್ನೋರ್ವ ಮುಖಂಡ ಗಿರೀಶ್‌ ಕುಮಾರ್‌ ಅವರು ಕೂಡಾ ಡ್ರಗ್ಸ್‌ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಸಭೆಯ ಗಮನ ಸೆಳೆದರು.-----------------ಗೃಹ ಸಚಿವ ಅಮಿತ್‌ ಶಾರವರು ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದಕ್ಕೆ ಖಂಡನಾ ನಿರ್ಣಯ ಕೈಗೊಳ್ಳುವಂತೆ ಎಸ್‌ಸಿ ಎಸ್‌ಟಿ ಸಭೆಯಲ್ಲಿ ದಲಿತ ಮುಖಂಡರು ಒತ್ತಾಯಿಸಿದ ವಿದ್ಯಮಾನವೂ ನಡೆಯಿತು.

ಅಮಿತ್‌ ಶಾ ವಿರುದ್ಧ ಈ ಬಗ್ಗೆ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ದ.ಕ. ಜಿಲ್ಲಾ ದಲಿತ ಸಂಘಟನೆಗಳು ಕೂಡಾ ಅವರ ಹೇಳಿಕೆಯನ್ನು ಖಂಡಿಸಿರುವ ಬಗ್ಗೆ ಖಂಡನಾ ನಿರ್ಣಯ ಕೈಗೊಂಡು ಅದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕಳುಹಿಸಿ ಕಾನೂನು ಕ್ರಮಕ್ಕೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಎಸ್‌.ಪಿ. ಆನಂದ್‌ ಒತ್ತಾಯಿಸಿದರು.

ಕದ್ರಿ ಪಾರ್ಕ್‌ನಲ್ಲಿ ವೈನ್‌ ಮೇಳ ಬೇಡಸಾರ್ವಜನಿಕರ ವಿಹಾರದ ಕದ್ರಿ ಪಾರ್ಕ್‌ನಲ್ಲಿ ವೈನ್‌ ಮೇಳ ಮಾಡಬಾರದು. ಇಂತಹ ಮೇಳಗಳ ವೇಳೆ ಅಧಿಕಾರಿಗಳು ಕೂಡಾ ರಾಜಾರೋಷವಾಗಿ ತಮ್ಮ ವಾಹನಗಳನ್ನು ಪಾರ್ಕ್ ಒಳಗೆ ಕೊಂಡೊಯ್ಯುತ್ತಾರೆ. ಇಂತಹ ಮೇಳಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲಿ ಇಂತಹ ಮೇಳಕ್ಕೆ ಅವಕಾಶ ನೀಡಬಾರದು ಎಂದು ಅಮಲ ಜ್ಯೋತಿ ಎಂಬವರು ಒತ್ತಾಯಿಸಿದರು.

-----------------