ದಲಿತ ಸಾಹಿತ್ಯ ಈ ಕಾಲದ ಸಂಕಟಗಳಿಗೆ ಪರಿಹಾರ ಆಲೋಚಿಸುತ್ತಿದೆ: ಡಾ.ರವಿಕುಮಾರ್ ನೀಹ

| Published : Aug 12 2025, 12:30 AM IST

ದಲಿತ ಸಾಹಿತ್ಯ ಈ ಕಾಲದ ಸಂಕಟಗಳಿಗೆ ಪರಿಹಾರ ಆಲೋಚಿಸುತ್ತಿದೆ: ಡಾ.ರವಿಕುಮಾರ್ ನೀಹ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ದಲಿತ ಸಾಹಿತ್ಯ ಮಾನವೀಯಗೊಳ್ಳುತ್ತಲೇ ಈ ಕಾಲದ ಸಂಕಟಗಳಿಗೆ ಪರಿಹಾರ ಆಲೋಚಿಸುತ್ತಿದೆ ಎಂದು ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರು, ವಿಮರ್ಶಕ ಡಾ.ರವಿಕುಮಾರ್ ನೀಹ ಹೇಳಿದ್ದಾರೆ.

- ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ದಲಿತ ಸಾಹಿತ್ಯ ಮಾನವೀಯಗೊಳ್ಳುತ್ತಲೇ ಈ ಕಾಲದ ಸಂಕಟಗಳಿಗೆ ಪರಿಹಾರ ಆಲೋಚಿಸುತ್ತಿದೆ ಎಂದು ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರು, ವಿಮರ್ಶಕ ಡಾ.ರವಿಕುಮಾರ್ ನೀಹ ಹೇಳಿದ್ದಾರೆ.

ಸೋಮವಾರ ತಾಲೂಕು ಕಸಾಪದಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ ದಲ್ಲಿ "ದಲಿತ ಸಾಹಿತ್ಯದಲ್ಲಿ ಸಾಂಸ್ಕೃತಿಕ ಚೆರಿತ್ರೆ " ಎಂಬ ವಿಷಯದ ಉಪನ್ಯಾಸ ನೀಡಿದರು. ದಲಿತ ಆಲೋಚನೆ, ದಲಿತ ಅರಿವು ಈ ಕಾಲದ ಬಹುಮುಖ್ಯ ಅಂಶಗಳು. ದಲಿತ ಸಾಹಿತ್ಯದ ಮೂಲಕ ಮಾನವೀಯ ಜಗತ್ತನ್ನು ಕಟ್ಟುವ ಹಂಬಲ ಈ ಮಾದರಿ ಸಾಹಿತ್ಯದಲ್ಲಿದೆ ಎಂದರು.

ದಮನಿತ ಬದುಕನ್ನು ಒಳಗೊಳ್ಳುತ್ತಲೇ ಬಿಡುಗಡೆ ದಾರಿಯನ್ನು ಸೋಸಿಕೊಳ್ಳುತ್ತಿದೆ. ಸಾವಿತ್ರಿಬಾಯಿ ಪುಲೆ, ಡಾ.ಬಿ.ಆರ್. ಅಂಬೇಡ್ಕರ್ ಯಾದಿಯಾಗಿ ಮುಂತಾದವರು ಅಸ್ಪೃಶ್ಯ, ದಮನಿತ ವರ್ಗಗಳಿಗೆ ಸ್ವಾಭಿಮಾನದ ಬದುಕಿಗಾಗಿ ಶ್ರಮಿಸಿದರು. ಹಸಿವು, ಅವಮಾನ ಮತ್ತು ಕುಲಕಸುಬು, ಹುಟ್ಟು, ವಾಸಿಸುವ ಸ್ಥಳ, ಮುಂತಾದವುಗಳಲ್ಲಿ ಸಂಪೂರ್ಣವಾಗಿ ಈ ಲೋಕ ದಿಂದ ದೂರವಿರುವ ಸಾಂಸ್ಕೃತಿಕವಾಗಿ ವಿಭಿನ್ನವಾದ ಮತ್ತು ತನ್ನದೇ ಆದ ಅಸ್ಮಿತೆ ಬದುಕಿನಲ್ಲಿ, ಆಚರಣೆಯಲ್ಲಿ ಇವತ್ತಿಗೂ ಉಳಿಸಿ ಕೊಂಡ ದಮನಿತ ಸಮುದಾಯಗಳು ಶ್ರಮಿಕ ಲೋಕದೊಂದಿಗೆ ಮಾತಾಡುತ್ತವೆ ಎಂದು ಹೇಳಿದರು.ನಾಲ್ಕೂವರೆ, 5 ದಶಕದ ದಲಿತ ಸಾಹಿತ್ಯ ಕೇವಲ ದಲಿತ ಎನ್ನುವ ಜಾತಿ ಪ್ರಶ್ನೆ ಇಟ್ಟುಕೊಳ್ಳದೆ ಅದು ದಮನಕ್ಕೆ ಒಳಗಾದ ಎಲ್ಲ ಸಮುದಾಯ, ಮಹಿಳೆಯನ್ನು ತನ್ನ ಚಿಂತನೆ ಒಳಗಡೆ ಧಾರಣ ಮಾಡಿಕೊಂಡಿದೆ. ಆ ಮೂಲಕ ಸಾಹಿತ್ಯ ಜಗತ್ತಿಗೆ ಅಪ ರಿಚಿತವೇ ಆಗಿರುವ ಹೊಸ ಅನುಭವಲೋಕ, ಅನುಭಾವಿಕ ಜಗತ್ತನ್ನು ಈ ಕಾಲಕ್ಕೆ ತಂದು ಪೊರೆಯುತ್ತಿವೆ ಎಂದರು.ಅಂಬೇಡ್ಕರ್, ಗಾಂಧಿ, ಲೋಹಿಯಾ, ಮಾರ್ಕ್ಸ್ ವಾದಿಗಳು ಒಟ್ಟಿಗೆ ಬದುಕಿದ್ದ ವಿಶಿಷ್ಟ ಅಭಿವ್ಯಕ್ತಿಯ ರೂಪ ಎಂದರೆ ಅದು ದಲಿತ ಸಾಹಿತ್ಯ, ದಲಿತ ಸಾಹಿತ್ಯವೆಂದರೆ ಮಾನವೀಯ ಲೋಕವೊಂದನ್ನು ಕಟ್ಟುವುದು ಮತ್ತು ಪ್ರೀತಿ ಜಗತ್ತೊಂದನ್ನು ಬುದ್ಧನ ಕಾರುಣ್ಯದ ಮೂಲಕ ಹೆಣೆಯುತ್ತ ಸಾಗುವುದಾಗಿದೆ. ಈ ಕಾರಣದಿಂದಲೇ ದಲಿತ ಸಾಹಿತ್ಯ ದೌರ್ಜನ್ಯ ಎದುರು ಗೊಳ್ಳುತ್ತಲೇ ಪ್ರೀತಿ. ಕರುಣೆಗಳನ್ನು ಈ ಲೋಕದ ಜೊತೆ ಕೂಡಿಸುವ ಕೆಲಸ ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದು ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಕೃತಿಯಲ್ಲಿ ಮರುಹುಟ್ಟು ಸಹಜ, ಸ್ವತಹ ಚೈತನ್ಯ ಪಡೆಯುತ್ತದೆ, ಕನ್ನಡ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ, ಸಾಹಿತ್ಯ ಸಂಘಟನೆ , ಜನಪರ ಮತ್ತು ನೊಂದವರ ಪರ, ಸಮಾಜಮುಖಿಯಾಗಿ ಕಾರ್ಯ ವಿರ್ವಹಿಸುತ್ತಿದೆ. ಸಮಾಜ ತಿದ್ದುವ ಕಾರ್ಯ ಮಾಡುತ್ತಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ದಲಿತ ಸಾಹಿತ್ಯಗಳಿಂದ ಸಮಾಜ ಪರಿವರ್ತನೆ ಆಗಿದೆ ಎಂದು ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಡಾ.ಸಬಿತಾ ಬನ್ನಾಡಿ ಮಾತನಾಡಿ, ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಥಿಕಾರದ ಸದಸ್ಯರು ಮತ್ತು ವಿಮರ್ಶಕರು ಡಾ.ರವಿಕುಮಾರ್ ನೀಹ ಕವಿಗಳು, ಸಂಶೋಧಕರು, ವಿಮರ್ಶಕರು ಆಗಿದ್ದು ಖಚಿತತೆ ಮತ್ತು ಪ್ರಬುದ್ಧತೆ ಹೊಂದಿ, ವಿಮರ್ಶೆ ಮಾಡಿ ಕಾವ್ಯ, ಕೃತಿಗಳನ್ನು ರಚಿಸಿ ತಮ್ಮ ಅನುಭವ ಕಟ್ಟಿಕೊಟ್ಟಿದ್ದಾರೆ. ಡಾ.ರವಿಕುಮಾರ್ ನೀಹ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಅವಕಾಶಗಳು ದೊರೆಯಲಿ ಎಂದರು.

ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಇದು ವಿಶೇಷ ಕಾರ್ಯಕ್ರಮ. ಕಸಾಪ ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಕನ್ನಡ ಭಾಷೆ ಬಗ್ಗೆ ಸಾಹಿತಿಗಳಿಂದ ಉಪನ್ಯಾಸ, ವಿಚಾರ ಸಂಕಿರಣ ಇತ್ಯಾದಿ ಹಲವಾರು ಕಾರ್ಯಕ್ರಮ ಮನೆ ಮನೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಉಪನ್ಯಾಸ ಸಂಗ್ರಹಿಸಿ ಅವುಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಆಶಯ ಹೊಂದಲಾಗಿದೆ ಎಂದ ತಿಳಿಸಿದರು.

ತಾಲೂಕು ಕಸಾಪ ಗೌರವಾಧ್ಯಕ್ಷ ಕನ್ನಡಶ್ರೀ ಬಿ.ಎಸ್.ಭಗವಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವಾಂಗೀಣ ಅಭಿವೃದ್ಧಿಗೆ ಸಾಹಿತ್ಯ, ಚಿಂತನ ಮಂಥನ ಅಗತ್ಯ. ನಮ್ಮ ಮನಸ್ಸೇ ನಮಗೆ ಗುರು, ಶಿಕ್ಷಣ ವಿಧೇಯತೆ, ಸಭ್ಯತೆ ಮತ್ತು ಏಕಾಗ್ರತೆ ಕಲಿಸುತ್ತದೆ. ಸಾಹಿತ್ಯ ಬಾಳನ್ನು ಕಲ್ಪಿಸಿಕೊಡುತ್ತದೆ. ಇತಿಹಾಸಕಾರರನ್ನು ಹಿರಿಯ ಸಾಹಿತಿಗಳನ್ನು ಓದಬೇಕು, ವೈಚಾರಿಕ ನೆಲಗಟ್ಟಿನಲ್ಲಿ ನಮ್ಮ ಪೂರ್ವಜರು ಕಟ್ಟಿಕೊಟ್ಟ ಸಾಹಿತ್ಯ ಕಲೆ ಉಳಿಸಿ ಬೆಳೆಸಬೇಕು ಎಂದು ಹೇಳಿದರು.ದೈಹಿಕ ಶಿಕ್ಷಣ ನಿರ್ದೇಶಕ ವಸಂತಕುಮಾರ್ ಸಂವಿಧಾನ ಪೀಠ ಪ್ರತಿಜ್ಞಾ ವಿಧಿ ಬೋದಿಸಿದರು. ತಾಲೂಕು ಕಸಾಪ ಪರಿಷತ್ತು ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಡಾ.ಟಿ.ಎನ್.ಜಗದೀಶ್, ನಾಗೇನಹಳ್ಳಿ ತಿಮ್ಮಯ್ಯ, ಮಂಜುನಾಥ್, ಉಪನ್ಯಾಸಕ ದತ್ತಾತ್ರೇಯ, ಗೀತಾ ಎಂ.ಎಸ್. ವಿದ್ಯಾರ್ಥಿಗಳು ಭಾಗವಹಿಸಿದ್ದರು.

-

11ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಗೌರವಾಧ್ಯಕ್ಷ ಬಿ.ಎಸ್.ಭಗವಾನ್, ವಿಮರ್ಶಕ ಡಾ.ರವಿಕುಮಾರ್ ನೀಹ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಮಂಜುನಾಥ್, ಪ್ರಾಧ್ಯಾಪಕಿ ಡಾ.ಸಬಿತಾ ಬನ್ನಾಡಿ, ತಾ.ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ಡಾ.ಟಿ.ಎನ್.ಜಗದೀಶ್ ಮತ್ತಿತರರು ಭಾಗವಹಿಸಿದ್ದರು.