ದಲಿತ ಯುವಕ ಜಯಕುಮಾರ್ ಸಾವಿನ ಸಮಗ್ರ ತನಿಖೆಗೆ ದಲಿತ ಸಂಘಟನೆಗಳ ಆಗ್ರಹ

| Published : May 29 2025, 12:07 AM IST

ದಲಿತ ಯುವಕ ಜಯಕುಮಾರ್ ಸಾವಿನ ಸಮಗ್ರ ತನಿಖೆಗೆ ದಲಿತ ಸಂಘಟನೆಗಳ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜಯಕುಮಾರ್ ಅವರನ್ನು ಕೊಲೆ ಮಾಡಿ ಹುಲ್ಲಿನ ಮೆದೆಯ ಬೆಂಕಿಗೆ ಎಸೆಯಲಾಗಿದೆ. ಪೊಲೀಸರು ಜಯಕುಮಾರ್ ಅವರದ್ದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿ ಕರ್ತವ್ಯಲೋಪ ಎಸಗಿದ್ದಾರೆ. ಬಂಧಿತ ಅನಿಲ್ ಕುಮಾರ್ ಅವರನ್ನು ತೀವ್ರ ತನಿಖೆಗೆ ಒಳಪಡಿಸಿ ಸತ್ಯಾಂಶದ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಸಜೀವ ದಹನ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಕೆಲಕಾಲ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು, ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿ ತಾಲೂಕು ಆಡಳಿತಸೌಧಕ್ಕೆ ಆಗಮಿಸಿದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಜಯಕುಮಾರ್ ಸಾವಿನ ಪ್ರಕರಣ ಕುರಿತು ಸಮಗ್ರ ತನಿಖೆ ಮಾಡಬೇಕು. ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ಜೊತೆಗೆ ಆತನ ಪತ್ನಿಗೆ ಒಂದು ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಿದರು.

ದಲಿತ ಯುವಕ ಜಯಕುಮಾರ್ ಅವರದ್ದು ಆತ್ಮಹತ್ಯೆಯಲ್ಲ. ಅದೊಂದು ಕೊಲೆ. ಕತ್ತರಘಟ್ಟದ ಅನಿಲ್ ಕುಮಾರ್ ಜಯಕುಮಾರ್ ಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಅನಿಲ್ ಕುಮಾರ್ ಒಬ್ಬ ರೌಡಿಶೀಟರ್ ಆಗಿದ್ದು ಆತನ ವಿರುದ್ಧ ದೂರು ನೀಡಿದ ಮರುದಿನವೇ ಜಯಕುಮಾರ್ ಅವರ ಶವ ಅರೆಬೆಂದ ಸ್ಥಿತಿಯಲ್ಲಿ ಸಿಕ್ಕಿದೆ ಎಂದು ಆರೋಪಿಸಿದರು.

ಜಯಕುಮಾರ್ ಅವರನ್ನು ಕೊಲೆ ಮಾಡಿ ಹುಲ್ಲಿನ ಮೆದೆಯ ಬೆಂಕಿಗೆ ಎಸೆಯಲಾಗಿದೆ. ಪೊಲೀಸರು ಜಯಕುಮಾರ್ ಅವರದ್ದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿ ಕರ್ತವ್ಯಲೋಪ ಎಸಗಿದ್ದಾರೆ. ಬಂಧಿತ ಅನಿಲ್ ಕುಮಾರ್ ಅವರನ್ನು ತೀವ್ರ ತನಿಖೆಗೆ ಒಳಪಡಿಸಿ ಸತ್ಯಾಂಶದ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಜಯಕುಮಾರ್ ಸಾವನ್ನು ಆತ್ಮಹತ್ಯೆ ಪ್ರಕರಣ ಎಂದು ಕೇಸು ದಾಖಲಿಸಿ ಕರ್ತವ್ಯ ಲೋಪ ಎಸಗಿರುವ ಪೊಲೀಸರನ್ನು ಅಮಾನತು ಮಾಡಬೇಕು. ಆತನ ಕುಟುಂಬಕ್ಕೆ ಸರ್ಕಾರಿ ಭೂಮಿ ಮಂಜೂರು, ಪತ್ನಿಗೆ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರು. ನೀಡುವಂತೆ ಆಗ್ರಹಿಸಿದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಿಕ್ಕತಿಮ್ಮಯ್ಯ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಪ್ರಕರಣದ ನ್ಯಾಯಯುತ ತನಿಖೆಯ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಛಲವಾದಿ ಮಠದ ಬಸವನಾಗದೇವ ಸ್ವಾಮೀಜಿ, ರಾಜ್ಯ ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೂಡು, ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ರೈತ ಮುಖಂಡ ಎಂವಿ.ರಾಜೇಗೌಡ, ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರಹಾಸ, ಅಭಿಗೌಡ, ಜಯರಾಜ್, ವಕೀಲೆ ಚೈತ್ರಾ, ರಮಾನಂದ ಬಸ್ತಿರಂಗಪ್ಪ, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ಬಸ್ತಿ ಪ್ರದೀಪ್, ಬಿ.ರಾಜಯ್ಯ, ಹೊಸಹೊಳಲು ಪುಟ್ಟರಾಜು, ಕಮಲಾಕ್ಷಿ, ಲಕ್ಷ್ಮೀರಾಜು ಸೇರಿದಂತೆ ಹಲವರು ಇದ್ದರು.