ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ದಲಿತ ಮತ್ತು ಇತರೆ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗಲು ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳ ಸ್ಥಾಪನೆ, ನಗರದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘಟನೆಗಳು ಶಾಸಕ ಜಿ.ಡಿ. ಹರೀಶ್ ಗೌಡರಿಗೆ ಮನವಿ ಸಲ್ಲಿಸಿದರು.ಗುರುವಾರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, 20 ವರ್ಷಗಳಿಂದಲೂ ಹುಣಸೂರು ನಗರದ ಪ್ರಮುಖ ಸ್ಥಳದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡುವಂತೆ ಮನವಿ ಮಾಡುತ್ತಾ ಬರುತ್ತಿದ್ದು, ನಮ್ಮ ಮನವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯತೆ ವಹಿಸಿದೆ. ಅಂಬೇಡ್ಕರ್ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ನಾಯಕರಲ್ಲ. ಬದಲಾಗಿ ಅವರು ಎಲ್ಲಾ ವರ್ಗದ ತಳ ಸಮುದಾಯಗಳಿಗೆ ಸಮಾನತೆಯ ಹಕ್ಕು ಮತ್ತು ಬಾದ್ಯತೆ, ಬದುಕುವ ಅವಕಾಶ ಕಲ್ಪಿಸಿಕೊಟ್ಟ ಮಹಾನ್ ನಾಯಕ. ಹುಣಸೂರು ನಗರದ ಸಂವಿಧಾನ ವೃತ್ತದ ಪಕ್ಕದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು ಎಂದರು.
ದಲಿತರು ಹಾಗೂ ಇತರೆ ಎಲ್ಲಾ ಜಾತಿಯ ವಿದ್ಯಾವಂತ ಯುವಕ ಯುವತಿಯರಿಗೆ ಹುಣಸೂರಿನಲ್ಲಿ ಐ.ಎ.ಎಸ್/ ಕೆಎಎಸ್ ಇತರೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಪ್ರಾರಂಭಿಸಬೇಕು ಎಂದು ಅವರು ಹೇಳಿದರು.ಅಸ್ಪೃಶ್ಯತೆ, ಜಾತೀಯತೆ, ಅಸಮಾನತೆ ಇಂದಿಗೂ ಕೆಲವು ಗ್ರಾಮಗಳಲ್ಲಿ ಜೀವಂತವಾಗಿದ್ದು, ಇದರಿಂದ ದಲಿತ ಸಮಾಜವು ಬಹಳ ನೋವಿನಲ್ಲಿ ಬದುಕುವ ಸ್ಥಿತಿ ಇದೆ. ಈ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡಲು ತಾಲೂಕು ಆಡಳಿತ ಕ್ರಮ ವಹಿಸಬೇಕು. ಸರ್ಕಾರದ ವತಿಯಿಂದ ತಾಲೂಕಿನ ವಿದ್ಯಾವಂತ ಯುವಕ ಯುವತಿಯರಿಗೆ ನಸಿರ್ಸಿಂಗ್ ಕಾಲೇಜನ್ನು ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಹುಣಸೂರು ನಗರದ ಸಂವಿಧಾನ ವೃತ್ತದ ಪಕ್ಕದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲು ಈಗಾಗಲೇ ಹುಣಸೂರು ನಗರಸಭೆಯ ನಡಾವಳಿ ಮಾಡಲಾಗಿದ್ದು, ಸದರಿ ನಡಾವಳಿಯಂತೆ ಸರ್ಕಾರದ ಮಟ್ಟದಲ್ಲಿ ಪ್ರತಿಮೆ ಎಷ್ಟು ಜಾಗ ಬೇಕು ಎನ್ನುವುದನ್ನು ಖಾತರಿಪಡಿಸಿಕೊಂಡು ಮಂಜೂರು ಮಾಡಿಸಿ ಪ್ರತಿಮೆ ಸ್ಥಾಪನೆ ಮಾಡಲು ತುರ್ತು ಕ್ರಮ ಕೈಗೊಳ್ಳುತ್ತೇನೆ ಮತ್ತು ಇತರೆ ಐ.ಎ.ಎಸ್ / ಕೆ.ಎ.ಎಸ್ ತರಬೇತಿ ಕೇಂದ್ರ ಮತ್ತು ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಿ ಇದು ಅಗತ್ಯವಾಗಿ ಬೇಕಾಗಿರುವುದರಿಂದ ಎಲ್ಲರಿಗೂ ಅನುಕೂಲವಾಗುವಂತೆ ಕ್ರಮ ವಹಿಸುವುದಾಗಿ ಹೇಳಿದರು.ಉಪ ವಿಭಾಗಾಧಿಕಾರಿ ಎಚ್.ಬಿ. ವಿಜಯ್ ಕುಮಾರ್, ತಹಸೀಲ್ದಾರ್ ಜೆ. ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿ ಅಶೋಕ್ ಕುಮಾರ್, ತಾಪಂ ಇಒ ಕೆ. ಹೊಂಗಯ್ಯ, ದಲಿತ ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಕಿರಂಗೂರು ಸ್ವಾಮಿ, ಆದಿಜಾಂಬವ ಸಂಘದ ಡಿ. ಕುಮಾರ್, ಹಿರಿಯ ದಲಿತ ಮುಖಂಡ ಬಸವಲಿಂಗಯ್ಯ ಮೊದಲಾದವರು ಇದ್ದರು.