ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ದಲಿತರ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ತಹಸೀಲ್ದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿತು.ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣದಾಸ್ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೮ ವರ್ಷಗಳು ಕಳೆದಿವೆ. ಮತ್ತೊಂದು ಕಡೆ ದೀನ, ದಲಿತ- ದುರ್ಬಲರ ಬದುಕು ಅಸಹನೀಯವಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ. ಕಳೆದ ೩೦- ೪೦ ವರ್ಷಗಳಿಂದ ದಲಿತರ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿ ಇನ್ನಿತರೆ ದಲಿತಪರ ಸಂಘಟನೆಗಳು ಹಾಸನದ ಜಿಲ್ಲಾಡಳಿತದ ಗಮನಕ್ಕೆ ತಂದರೂ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ತಾಳಿದೆ. ಹಾಸನ ತಾಲೂಕಿನ ಸುತ್ತಮುತ್ತಲ ಸುಮಾರು ೯ ಹಳ್ಳಿಗಳಲ್ಲಿ ಜೀತಕ್ಕಿದ್ದ ೨೧ ಕುಟುಂಬಗಳಿಗೆ ಜಮೀನು ನೀಡಿ ಪುನರ್ವಸತಿ ಕಲ್ಪಿಸುವಂತೆ ಹೋರಾಟಗಳನ್ನು ಮಾಡಿದ್ದರೂ ಈ ಜೀತ ವಿಮಕ್ತರಿಗೆ ಪುನರ್ವಸತಿ ಕಲ್ಪಿಸಲಾಗಿಲ್ಲ. ಈ ಜೀತ ವಿಮುಕ್ತರಲ್ಲಿ ಸುಮಾರು ೬- ೭ ಜನ ಭೂಮಿ ಪಡೆಯಲಾಗದೆ ಮೃತ ಹೊಂದಿದ್ದಾರೆ. ಉಳಿದಿರುವ ಜೀತವಿಮುಕ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ಎಡತಾಕುತ್ತಿದ್ದರೂ ಇವರ ಭೂಮಿಯ ಕನಸು ಮರೀಚಿಕೆಯಾಗಿಯೇ ಉಳಿದಿದೆ ಎಂದರು. ಹಾಸನ ನಗರಸಭೆಯನ್ನು ಈಗ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಸುಮಾರು ೨೦೦ ಜನ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೌರಕಾರ್ಮಿಕರು ವಸತಿ ಸೌಕರ್ಯ, ಉತ್ತಮ ಆರೋಗ್ಯದಿಂದ ವಂಚಿತರಾಗಿ ದುಡಿಯುತ್ತಿದ್ದಾರೆ. ಇವರ ಬದುಕು ಚಿಂತಾಜನಕವಾಗಿದೆ. ಹಾಸನ ನಗರಸಭೆಯ ಪೌರಕಾರ್ಮಿಕರಿಗಾಗಿ ಕಳೆದ ಆರು ವರ್ಷಗಳ ಹಿಂದೆ ಮೊದಲ ಹಂತದಲ್ಲಿ ಸುಮಾರು ೪೧ ಫಲಾನುಭವಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು ಕಾಮಗಾರಿ ಕೈಗೊಳ್ಳಲಾಯಿತು. ಆದರೆ ಈ ಕಾಮಗಾರಿ ಪೂರ್ಣಗೊಳ್ಳದೆ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಉಳಿದ ಪೌರಕಾರ್ಮಿಕರಿಗೆ ಎರಡನೇ ಹಂತದಲ್ಲಿ ವಸತಿ ಸೌಕರ್ಯ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕರ್ನಾಟಕ ಸರ್ಕಾರ ವಿಶೇಷವಾಗಿ ಕಂದಾಯ ಇಲಾಖೆ ರೈತರ ಜಮೀನನ್ನು ಪೋಡಿ- ದುರಸ್ತು ಕಾರ್ಯ ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾದರೂ ದಲಿತರ ಇನಾಮು ಜಮೀನನ್ನು ಪೋಡಿ- ದುರಸ್ತು ಮಾಡಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ. ಕಾರಣ ಇನಾಮು ಜಮೀನಿನ (ಕುಳುವಾಡಿಕೆ) ಕಂದಾಯ ದಾಖಲಾತಿಗಳು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ರೆಕಾರ್ಡ್ ರೂಮ್ ನಿಂದ ಕಣ್ಮರೆಯಾಗಿವೆ ಎಂದರು.ಅರಸೀಕೆರೆ ತಾಲೂಕು ಹಂಗರಹಳ್ಳಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು ಎಂಟು ಹತ್ತು ಕುಟುಂಬಗಳು ೨೫ ರಿಂದ ೩೦ ವರ್ಷಗಳಿಂದ ಬಗರಹುಕ್ಕುಂ ಸಾಗುವಳಿ ಮಾಡುತ್ತಿದ್ದುದ್ದನ್ನು ಸಕ್ರಮಗೊಳಿಸಿ ಸಾಗುವಳಿಪತ್ರ ನೀಡಲಾಗಿದೆ. ಸಾಗುವಳಿ ಪತ್ರ ನೀಡಿ ಎರಡು ದಶಕಗಳೇ ಕಳೆದರೂ ಖಾತಾ ಮಾಡಿಕೊಟ್ಟಿಲ್ಲ. ಹೀಗೆ ದಲಿತರ ಹಲವಾರು ಸಮಸ್ಯೆಗಳು ನೆನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.
ಸಂಘಟನೆಗಳ ಪ್ರಮುಖ ಹಕ್ಕೊತ್ತಾಯಗಳುದಲಿತರ ಪ್ರಮುಖ ಹಕ್ಕೊತ್ತಾಯಗಳೆಂದರೆ, ನಗರದ ತಣ್ಣೀರುಹಳ್ಳದ ಹಿಂಭಾಗ ಸ.ನಂ. ೨೭೩ರಲ್ಲಿ ೧ ಎಕರೆ ೧೨ ಗುಂಟೆ ನಗರಸಭೆಯ ಜಮೀನಿದೆ. ಈ ಜಮೀನನ್ನು ಪೌರಕಾರ್ಮಿಕರಿಗೆ ವಸತಿ ನಿರ್ಮಾಣ ಮಾಡಲು ಕಾಯ್ದಿರಿಸಲಾಗಿದೆ. ಹಾಸನ ತಾಲೂಕು ತಟ್ಟೆಕೆರೆ ಗ್ರಾಮದ ಸ.ನಂ. ೧೦೩ ರಲ್ಲಿ ಸುಮಾರು ೧೫ ಎಕರೆ ಜಮೀನಿದ್ದು, ಈ ಪೈಕಿ ೪ ಎಕರೆ ಜಮೀನಿನಲ್ಲಿ ಪೌರಕಾರ್ಮಿಕರಿಗೆ ವಸತಿ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ನಗರಪಾಲಿಕೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಎರಡು ಸ.ನಂ. ಜಮೀನಿನಲ್ಲಿ ೨ನೇ ಹಂತದ ವಸತಿ ನಿರ್ಮಾಣವನ್ನು ಕೂಡಲೇ ಕೈಗೊಳ್ಳಬೇಕು.
ನಗರದ ಹೊರ ವಲಯದಲ್ಲಿ ಪೌರಕಾರ್ಮಿಕರಿಗೆ ಮೊದಲನೇ ಹಂತದಲ್ಲಿ ಸುಮಾರು ೪೧ ಫಲಾನುಭವಿಗಳಿಗೆ ವಸತಿ ನಿರ್ಮಾಣ ಮಾಡಲಾಗಿದ್ದು, ೬ ವರ್ಷ ಕಳೆದರೂ ಈವರೆಗೆ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಕೂಡಲೇ ಸೂಕ್ತ ಕ್ರಮ ಕೈಗೊಂಡು ಪೌರಕಾರ್ಮಿಕರಿಗೆ ಸ್ವಾಧೀನ ಪತ್ರ ನೀಡಬೇಕೆಂದು ಒತ್ತಾಯಿಸಿದರು.ತಾಲೂಕಿನ ಕಡದರವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜೀತಕ್ಕಿದ್ದ ಜೀತವಿಮುಕ್ತರಿಗೆ ಜಮೀನು ನೀಡಿ ಪುನರ್ವಸತಿ ಕಲ್ಪಿಸಬೇಕು. ಅರಸೀಕೆರೆ ತಾಲೂಕು ರಂಗಾಪುರ ಗ್ರಾಮದ ಸ.ನಂ. ೧ ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು ೧೨ ಜನರಿಗೆ ಬಗರ್‌ಹುಕ್ಕುಂ ಸಾಗುವಳಿ ಮೂಲಕ ಸಾಗುವಳಿ ಪತ್ರ ನೀಡಿದ್ದು, ಇವರಿಗೆ ಖಾತೆ ವಗೈರೆ ಕಂದಾಯ ದಾಖಲೆಗಳನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ.
ನಗರದ ಹೃದಯ ಭಾಗದಲ್ಲಿರುವ ಎನ್.ಆರ್. ಸರ್ಕಲ್ ನಲ್ಲಿ ಈ ನಾಡಿನ ಅಸ್ಮಿತೆ ಮೈಸೂರಿನ ದೊರೆ ನರಸಿಂಹರಾಜ ಒಡೆಯರ್ ರವರ ಪ್ರತಿಮೆಯನ್ನು ಸ್ಥಾಪಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ನಗರದ ಬಿಟ್ಟಗೌಡನಹಳ್ಳಿ (ಹೂಳುವ ಸ್ಮಶಾನ) ಸ್ಮಶಾನವನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರು ಅಂತ್ಯ ಸಂಸ್ಕಾರ ನೆರವೇರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿ ಹೆತ್ತೂರು ಗ್ರಾಮದ ಪ. ಜಾತಿಗೆ ಸೇರಿದ ಸುಮಾರು ೫೯ ಕುಟುಂಬಗಳು ೧೯೬೦ ರಿಂದ ವಾಸವಾಗಿದ್ದಾರೆ. ಈ ೫೯ ಕುಟುಂಬಗಳಿಗೆ ಸ. ನಂ. ೩೦೨ ಮತ್ತು ೧೯೫ ರಲ್ಲಿ ತಲಾ ೦-೦೨ ಗುಂಟೆಯಂತೆ ಹಂಗಾಮಿ ಸಾಗುವಳಿ ಪತ್ರ ನೀಡಿದ್ದಾರೆ. ಕೂಡಲೇ ಕಾಯಂ ಸಾಗುವಳಿ ಪತ್ರ ನೀಡಬೇಕೆಂದು ಆಗ್ರಹಿಸಿ ಮನವಿ ಮಾಡಿದರು.ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಉಪಾಧ್ಯಕ್ಷ ಎಚ್.ಪಿ. ಶಂಕರರಾಜು,ಅಂಬುಗ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ನಾಗರಾಜು ಹೆತ್ತೂರ್, ಸಹ ಕಾರ್ಯದರ್ಶಿ ರಮೇಶ್, ಪ್ರದೀಪ್ ಭೀಮ್ ಆರ್ಮಿ, ಕುಮಾರಯ್ಯ, ರಮೇಶ್, ಲೋಕೇಶ್, ಪುಟ್ಟರಾಜು ಧರ್ಮಯ್ಯ, ಪೌರಕಾರ್ಮಿಕರಾದ ಪರಶುರಾಮು ಇತರರು ಉಪಸ್ಥಿತರಿದ್ದರು.