ಸಾರಾಂಶ
ಗದಗ: ದಲಿತರ ಭೂಮಿ, ವಸತಿ ಹಕ್ಕಿಗಾಗಿ ಮತ್ತು ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ನಗರದ ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಡಿಎಸ್‌ಎಸ್ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಬಾಲರಾಜ ಅರಬರ ಮಾತನಾಡಿ, ಸಂವಿಧಾನ ಜಾರಿಗೆ ಬಂದಾಗಿನಿಂದ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ ಶೇ. 11ರಷ್ಟು ಭೂಮಿ ಮಾತ್ರ ಹೊಂದಿರುತ್ತಾರೆ. ದಲಿತರಿಗೆ ಭೂಮಿ ವಸತಿಗಾಗಿ ಕಾಯ್ದೆಗಳು ಜಾರಿಗೆ ಬಂದಿದ್ದರೂ ಈ ಕಾಯ್ದೆಗಳು ಪರಿಣಾಮಕಾರಿಯಾಗಿ ಜಾರಿಯಾಗದೆ ದಲಿತರು ಇಂದಿಗೂ ಕೂಲಿ ಕಾರ್ಮಿಕರಾಗಿಯೇ ಉಳಿದಿದ್ದಾರೆ ಎಂದರು.ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ದಲಿತರಿಗೆ ಭೂಮಿ ವಸತಿ ಹಕ್ಕು ಮತ್ತು ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ನಮ್ಮ ಹಕ್ಕೋತ್ತಾಯಗಳಾದ ಪರಿಶಿಷ್ಟ ಜಾತಿ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ ಹುಕುಂ ಸಾಗುವಳಿ ಕಾಲಮಿತಿಯೊಳಗಾಗಿ ಇತ್ಯರ್ಥಗೊಳಿಸಬೇಕು. ವಿನಾಕಾರಣ ವಜಾಗೊಳಿಸಿರುವ ಬಗರ್ ಹುಕುಂ ಸಾಗುವಳಿಯ ಅರ್ಜಿಗಳನ್ನು ಮರುಪರಿಶೀಲಿಸಬೇಕು. ಪರಿಶಿಷ್ಟರ ಪಿ.ಟಿ.ಸಿ.ಎಲ್ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೈಕೋರ್ಟ್‌ಗಳಲ್ಲಿ ಪಿ.ಟಿ.ಸಿ.ಎಲ್ ಪ್ರಕರಣಗಳು ವಜಾಗೊಳ್ಳುತ್ತಿದ್ದು, ನುರಿತ ಹಿರಿಯ ವಕೀಲರನ್ನು ನೇಮಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬೇಕು.
ಬೆಂಗಳೂರು ನಗರ ಜಿಲ್ಲೆ, ಪೂರ್ವ ತಾಲೂಕಿನ ಕಾಡುಗೋಡಿ ಪ್ಲಾಂಟೇಷನ್‌ನಲ್ಲಿ ಪರಿಶಿಷ್ಟ ಜಾತಿಯವರಿಗೆ ಮಂಜೂರಾಗಿರುವ ಭೂಮಿಯಲ್ಲಿ ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುವುದನ್ನು ಕೂಡಲೇ ತಡೆಗಟ್ಟಬೇಕು. ಅಧಿಕಾರಿಗಳ ವಿರುದ್ಧ ಎಸ್.ಸಿ, ಎಸ್.ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಕೈಗಾರಿಕೆ ಸ್ಥಾಪನೆ ನೆಪದಲ್ಲಿ ಕೆಐಎಡಿಬಿ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಗುರುತಿಸಿರುವ 1777 ಎಕರೆ ಫಲವತ್ತಾದ ಕೃಷಿ ಭೂಮಿ ಭೂಸ್ವಾಧೀನ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ರಾಜ್ಯ ಸರ್ಕಾರ ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.ಈ ವೇಳೆ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಆನಂದ ಸಿಂಗಾಡಿ, ನಾಗರಾಜ ಗೋಕಾವಿ, ಶರೀಫ ಬಿಳೆಯಲಿ, ಗಣೇಶ ಹುಬ್ಬಳ್ಳಿ, ಮುತ್ತು ಬಿಳೆಯಲಿ, ಪರಮೇಶ ಕಾಳೆ, ಅನಿಲ ಕಾಳೆ, ಡಿ.ಎಲ್. ಬಣಕಾರ, ಸುರೇಶ ಚಲವಾದಿ, ಮರಿಯಪ್ಪ ನಡಗೇರಿ, ಪೂಜಾ ಬೇವೂರ, ಮಹಾಂತೇಶ ನಡಗೇರಿ, ಮುತ್ತು ಚವಡಣ್ಣವರ, ಪ್ರಕಾಶ ನಡಗೇರಿ, ಸಂತೋಷ ಜಾಲಣ್ಣವರ, ಕೆಂಚಪ್ಪ ಮ್ಯಾಗೇರಿ, ಮುತ್ತಪ್ಪ ಭಜಂತ್ರಿ, ಸಂಜು ಪೋತದಾರ, ಮರಿಯಪ್ಪ ಕಂಟೆಣ್ಣವರ, ಚನ್ನವೀರ ನಡಗೇರಿ, ಲಕ್ಷ್ಮಣ ವಡ್ಡರಕಲ್ಲ, ಹನಮಂತ ಕಿರಟಗೇರಿ, ಸಂತೋಷ ಮ್ಯಾಗೇರಿ, ಚೇತನಾ ಸೀತಾರಹಳ್ಳಿ, ಕೌಸರಬಾನು ಲಕ್ಕುಂಡಿ, ಪ್ರೀತಿ ಡಂಬಳ, ಶೋಭಾ ಡೋಣಿ, ಭೀಮವ್ವ ಸೊರಟೂರ, ಫಕ್ಕೀರಮ್ಮ ಬೇಲೇರಿ, ಲಕ್ಷ್ಮೀ ಬೆಟಗೇರಿ, ಬಸವರಾಜ ಲೋಹಾರ, ರಾಮಣ್ಣ ಮೊಡಕೇರ, ಶ್ರೀಕಾಂತ, ಅಭಿಷೇಕ ಯಡ್ಯಾಪೂರ, ಬಸವರಾಜ ಮುಳ್ಳಾಳ ಸೇರಿದಂತೆ ಡಿ.ಎಸ್.ಎಸ್ ಕಾರ್ಯಕರ್ತರು ಇದ್ದರು.