ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಐಮಂಗಲ ಹೋಬಳಿಯ ಬುರುಜಿನರೊಪ್ಪ ಗ್ರಾಮ ಪಂಚಾಯ್ತಿಯ ಪಿಡಿಓ ಲತಾರವರು ಆಮಿಷಕ್ಕೊಳಗಾಗಿ ಅಕ್ರಮ ಇ-ಸ್ವತ್ತು ಮಾಡಿಕೊಟ್ಟಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕರ್ತವ್ಯದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಮಹಾನಾಯಕ ದಲಿತಸೇನೆ ವತಿಯಿಂದ ತಾಲೂಕು ಪಂಚಾಯ್ತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ. ಶ್ರೀನಿವಾಸ್ ಮೂರ್ತಿ ಮಾತನಾಡಿ, ಹೊಸನಾಯಕರಹಟ್ಟಿಯ ಚಂದ್ರಶೇಖರ್ ಎನ್ನುವವರ ಹೆಸರಿಗೆ ನಿವೇಶನದ ಖಾತೆಯಿದ್ದು 2010 ರಿಂದಲೂ ಸದರಿ ಜಾಗಕ್ಕೆ ಕಂದಾಯ ಕಟ್ಟಿಕೊಂಡು ಬಂದಿದ್ದಾರೆ. 2016 ರಲ್ಲಿ ಪಕ್ಕದ ನಿವೇಶನದವರು ಸದರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅಂದಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಈ ನಿವೇಶನ ದ ಜಾಗ ಚಂದ್ರಶೇಖರ್ ಎನ್ನುವವರಿಗೆ ಸೇರಿದೆ ಎಂದು ಹೇಳಿ ಒತ್ತುವರಿ ತಡೆದಿದ್ದರು. ಆದರೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಓ ಲತಾರವರು ಚಂದ್ರಶೇಖರ್ ರವರ ನಿವೇಶನದ ಜಾಗವನ್ನು ಸೇರಿಸಿ ರತ್ನಮ್ಮ ಎಂಬುವವರಿಗೆ ಇ-ಸ್ವತ್ತು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಪಿಡಿಓ ರವರ ಗಮನಕ್ಕೆ ತಂದಾಗ ತಪ್ಪಾಗಿ ನಿಮ್ಮ ನಿವೇಶನವನ್ನು ಅವರಿಗೆ ಇ-ಸ್ವತ್ತು ಮಾಡಿಕೊಡಲಾಗಿದೆ. ಆ ಇ-ಸ್ವತ್ತನ್ನು ರದ್ದುಪಡಿ ಸುತ್ತೇವೆ ಎಂದು ಹೇಳಿ ಆರು ತಿಂಗಳಾದರೂ ಸಹ ಆ ಬಗ್ಗೆ ಗಮನ ಹರಿಸಿಲ್ಲ. ಇದೀಗ ಅಕ್ರಮ ಇ-ಸ್ವತ್ತಿನ ಜಾಗವನ್ನು ಸೇರಿಸಿ ರತ್ನಮ್ಮ ಎಂಬುವವರು ಮನೆ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ತಾಲೂಕು ಪಂಚಾಯ್ತಿಗೆ ದೂರು ನೀಡಿದರೆ ನಮ್ಮ ದೂರು 8 ದಿನವಾದರೂ ಟಪಾಲಿನಲ್ಲಿಯೇ ಬಿದ್ದಿದೆ. ಇವರ ಕಾರ್ಯವೈಖರಿಯ ವೇಗದ ಮೇಲೆ ನಮಗೆ ನಂಬಿಕೆ ಬರದಿದ್ದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಕ್ರಮ ಎಸಗಿರುವ ಪಿಡಿಓ ರನ್ನು ವಜಾ ಮಾಡುವವರೆಗೆ ಮಹಾನಾಯಕ ದಲಿತ ಸೇನೆಯ ಹೋರಾಟ ಮುಂದುವರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಮಹಾ ನಾಯಕ ದಲಿತ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ್ ತಾಳಿಕೆರೆ,ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ,ರಾಜ್ಯ ಕಾರ್ಯದರ್ಶಿ ಮಟ್ಟಿ ಒಂಕಾರ್, ಚಂದ್ರಶೇಖರ್, ಕುಮಾರಸ್ವಾಮಿ, ಮೂಡಲಗಿರಿ, ರಾಮದಾಸ್, ವಿಷ್ಣು, ರಾಘವೇಂದ್ರ, ದಾದಾಪೀರ್, ದೇವರಾಜ್, ನಗ್ಮಾ, ವೀಣಾ, ಕಾವ್ಯ, ನೌಷಾದ್, ಲಿಂಗಪ್ಪ, ಏಕಾಂತಪ್ಪ ಮುಂತಾದವರು ಹಾಜರಿದ್ದರು.ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಘಟನಾ ಕಾರ್ಯದರ್ಶಿ ಹೆಚ್.ಸಿ.ಚಂದ್ರಶೇಖರ್ ಮಾತನಾಡಿ, ಪಿಡಿಓ ಲತಾರವರ ಅವಧಿಯಲ್ಲಿ ಪಾಲವ್ವನಹಳ್ಳಿ ಕೋಳಿ ಲಕ್ಕಮ್ಮ ದೇವಸ್ಥಾನದ ಹತ್ತಿರ ಹಾಕಿರುವ ಸೋಲಾರ್ ಹೈಮಾಸ್ಕ್ ಲೈಟ್ ಅಳವಡಿಕೆಯಲ್ಲೂ ಅವ್ಯವಹಾರ ನಡೆದಿದೆ. ಅಲ್ಲಿ ಒಂದು ಹೈ ಮಾಸ್ಕ್ ಲೈಟ್ ಅಳವಡಿಸಿ 7 ಸೋಲಾರ್ ಲೈಟ್ ಆಳವಡಿಸಿರುವ ಬಗ್ಗೆ 4,78,356 ರು. ಬಿಲ್ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದೂರಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಅಕ್ರಮ ಇ-ಸ್ವತ್ತಿನ ವಿಚಾರವಾಗಿ ಖುದ್ದು ಬುಧವಾರ ಹೊಸನಾಯಕರಹಟ್ಟಿ ಚಂದ್ರಶೇಖರ್ ರವರ ನಿವೇಶನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಸಂಬಂಧಪಟ್ಟ ಪಿಡಿಓ ವಿರುದ್ಧ 15 ದಿನಗಳಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.