ಸಾರಾಂಶ
ಯಲಬುರ್ಗಾ: ತಾಲೂಕಿನ ಕೋನಸಾಗರ ಗ್ರಾಮದ ಮಣಿಕಂಠಯ್ಯ ಹರಿಜನ ಎನ್ನುವರ ಮನೆಗೆ ಅಪರಿಚಿತರು ಬೆಂಕಿ ಹಚ್ಚಿರುವ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.
ಮಣಿಕಂಠಯ್ಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ರಾತ್ರಿ ವೇಳೆ ಮಲಗಿದ್ದಾಗ ಮನೆಯ ಚಪ್ಪರಕ್ಕೆ ಅಪರಿಚಿತರು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮಣಿಕಂಠಯ್ಯ ಫೋನ್ ಚಾರ್ಜ್ ಇಡುವ ಸಲುವಾಗಿ ಎಚ್ಚರವಾದಾಗ ಬೆಂಕಿ ಹತ್ತಿರುವುದು ಕಂಡು ಗಾಬರಿಗೊಂಡಿದ್ದಾನೆ. ಆ ವೇಳೆ ಮನೆಯ ಹತ್ತಿರದ ತನ್ನ ಸ್ನೇಹಿತ ಮಾಂತೇಶ ಭಜಂತ್ರಿಗೆ ದೂರವಾಣಿ ಕರೆ ಮಾಡಿ ಸುದ್ದಿ ತಿಳಿಸಿದ್ದಾನೆ. ಘಟನೆಯಲ್ಲಿ ಮಣಿಕಂಠಯ್ಯಗೆ ಯಾವುದೇ ಪ್ರಾಣಾಪಾಯವಾಗಿಲ್ಲ.ಬೆಂಕಿ ಹಚ್ಚಿ ಓಡಿ ಹೋದರು
ಮಣಿಕಂಠಯ್ಯನ ಮನೆಗೆ ಅಪರಿಚಿತ ಮೂರ‍್ನಾಲ್ಕು ಜನರು ಬೆಂಕಿ ಹಚ್ಚಿ ಓಡಿ ಹೋಗಿದ್ದಾರೆ. ಅವರು ಯಾರು ಅಂತ ನಾನು ಗುರುತಿಸಿಲ್ಲ. ಸ್ಥಳಕ್ಕೆ ನಮ್ಮ ಮಾವ ಮೌನೇಶ ಹರಿಜನ ಆಗಮಿಸಿ ಬೆಂಕಿ ನಂದಿಸಿದ್ದಾನೆ. ಇದೆ ವೇಳೆ ಪೊಲೀಸ್ ನೆರವಿಗೆ ೧೧೨ಗೆ ಕರೆ ಮಾಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬೆಂಕಿ ಹಚ್ಚಿದವರ ವಿರುದ್ಧ ದೂರು ನೀಡುವಂತೆ ತಿಳಿಸಿದರು.ಯಾರೋ ಯಾವುದೋ ಉದ್ದೇಶದಿಂದ ಬೆಂಕಿ ಹಚ್ಚಿರಬಹುದೆಂದು ಮಣಿಕಂಠಯ್ಯ ಅನುಮಾನ ವ್ಯಕ್ತಪಡಿಸಿದ್ದು, ನನ್ನ ಮಾವ ಮೌನೇಶ ಹರಿಜನ ದಿನಾಲು ಇಲ್ಲೇ ಮಲಗುತ್ತಿದ್ದ. ಆತನ ಮೇಲೆ ಇದೇ ಗ್ರಾಮದ ಭೀಮಪ್ಪ ಜೂಲಕಟ್ಟಿ, ನಿಂಗಪ್ಪ ಜೂಲಕಟ್ಟಿ ಮತ್ತು ಚಿಕ್ಕಬನ್ನಿಗೋಳದ ಪ್ರವೀಣ ಹಟ್ಟಿ, ಹೊನ್ನಕೇರಪ್ಪ ಹಟ್ಟಿ, ಬಾಳಪ್ಪ ಹಟ್ಟಿ ಹಾಗೂ ದೊಡ್ಡಬಸಪ್ಪ ಲಕ್ಕಲಕಟ್ಟಿ, ಮಲ್ಲಪ್ಪ ಭಜಂತ್ರಿ ದ್ವೇಷ ಸಾಧಿಸುತ್ತಿದ್ದು, ಅವರ ಮೇಲೆ ಅನುಮಾನ ಇದೆ ಎಂದು ಮಣಿಕಂಠಯ್ಯ ಹೇಳಿದ್ದಾರೆ. ಈ ಬಗ್ಗೆ ದೂರು ಮತ್ತು ಪ್ರತಿದೂರು ದಾಖಲಾಗಿದೆ.
ಸ್ಥಳಕ್ಕೆ ಎಸ್ಪಿ ಭೇಟಿ:ಕೋನಸಾಗರದಲ್ಲಿ ಮನೆಗೆ ಬೆಂಕಿ ಹತ್ತಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಎಸ್ಪಿ ರಾಮ್ ಎಲ್.ಅರಸಿದ್ಧಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಎಸ್‌ಐ ವಿಜಯ ಪ್ರತಾಪ ಭೇಟಿ ನೀಡಿದ್ದು, ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಳ್ಳದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯ ಮೂರು ಡಿಆರ್ ವಾಹನಗಳು ಠಿಕಾಣಿ ಹೂಡಿವೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ.