ದಲಿತ ಸೂರ್ಯ ಅಂಬೇಡ್ಕರ್ ಎಸ್‌ಸಿ ಕಾಲೋನಿಗೇ ಸೀಮಿತವಾಗದಿರಲಿ: ಹುನಸನಹಳ್ಳಿ ವೆಂಕಟೇಶ್

| Published : Nov 28 2024, 12:35 AM IST

ದಲಿತ ಸೂರ್ಯ ಅಂಬೇಡ್ಕರ್ ಎಸ್‌ಸಿ ಕಾಲೋನಿಗೇ ಸೀಮಿತವಾಗದಿರಲಿ: ಹುನಸನಹಳ್ಳಿ ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನಕ್ಕೂ ಮುಂಚೆ ಪೋಷಕರು ತಮ್ಮ ಮಕ್ಕಳ ಮುಂದಿನ ಜೀವನದ ಬಗ್ಗೆ ಕುಲಕಸುಬಿನ ಮೂಲಕ ಯೋಚನೆ ಮಾಡಿ ಕನಸನ್ನು ಕಾಣುತ್ತಿದ್ದರು. ಆದರೆ ಅಂಬೇಡ್ಕರ್‌ರವರು ಸಂವಿಧಾನವನ್ನೂ ನೀಡಿದ ನಂತರ ಕುಲಕಸುಬಲ್ಲದೇ ಮೀಸಲಾತಿಯಲ್ಲಿಯೂ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಎಲ್ಲರೂ ಉತ್ತಮ ಸ್ಥಾನ ಪಡೆಯಲು ಸಹಕಾರವಾಯಿತು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪ್ರಸ್ತುತ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಕೇವಲ ವೇದಿಕೆಗಳು ಹಾಗೂ ಎಸ್ಸಿ ಕಾಲೋನಿಗಳಿಗೆ ಮಾತ್ರ ಸೀಮಿತರಾಗದೇ ಸಮಾಜದ ಎಲ್ಲಾ ಸಮುದಾಯದವರೂ ಸಹ ಅವರನ್ನು ನೆನೆದು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ದಲಿತ ರೈತ ಸೇನೆಯ ಅಧ್ಯಕ್ಷ ಹುನಸನಹಳ್ಳಿ ಎಸ್.ವೆಂಕಟೇಶ್ ಹೇಳಿದರು.

ತಾಲೂಕಿನ ಕಾರಮಾನಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ರೈತ ಸೇನೆಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂವಿಧಾನ ಬರುವುದಕ್ಕೂ ಮುಂಚೆ ಸತಿ ಸಹಗಮನ ಪದ್ಧತಿ ರೂಢಿಯಲ್ಲಿತ್ತು. ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ನೀಡಿರುವಂಥ ಶಕ್ತಿಯಿಂದ ಮಹಿಳೆಯರೂ ಸಹ ಮೀಸಲಾತಿಯನ್ನು ಪಡೆದು ಎಲ್ಲ್ಲಾ ಕ್ಷೇತ್ರಗಳಲ್ಲಿಯೂ ಸಾಧಕರಾಗಿ ಇತರರಿಗೆ ಮಾದರಿಯಾಗುತ್ತಿದ್ದಾರೆ. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಎಂಬುದು ಹುಲಿ ಹಾಲಿದ್ದಂತೆ. ಅದನ್ನು ಪಡೆದವರು ಘರ್ಜಿಸುವುದು ಗ್ಯಾರಂಟಿ. ಆದ್ದರಿಂದ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಬಲಿಷ್ಢರಾಗಿ ಸಮಾಜದಲ್ಲಿ ಮುಂದೆ ಬರುತ್ತಾರೆ ಎಂದರು.

ಸಮಾಜ ಸೇವಕ ಎ.ಬಾಬು ಮಾತನಾಡಿ, ಸಂವಿಧಾನಕ್ಕೂ ಮುಂಚೆ ಪೋಷಕರು ತಮ್ಮ ಮಕ್ಕಳ ಮುಂದಿನ ಜೀವನದ ಬಗ್ಗೆ ಕುಲಕಸುಬಿನ ಮೂಲಕ ಯೋಚನೆ ಮಾಡಿ ಕನಸನ್ನು ಕಾಣುತ್ತಿದ್ದರು. ಆದರೆ ಅಂಬೇಡ್ಕರ್‌ರವರು ಸಂವಿಧಾನವನ್ನೂ ನೀಡಿದ ನಂತರ ಕುಲಕಸುಬಲ್ಲದೇ ಮೀಸಲಾತಿಯಲ್ಲಿಯೂ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಎಲ್ಲರೂ ಉತ್ತಮ ಸ್ಥಾನ ಪಡೆಯಲು ಸಹಕಾರವಾಯಿತು. ದಲಿತ, ಹಿಂದುಳಿದ ಮತ್ತು ಶೋಷಿತ ವರ್ಗದವರಿಗೆ ಸಂವಿಧಾನ ದೊಡ್ಡ ಆಸರೆಯಾಗಿದ್ದು, ಸಂವಿಧಾನ ಇಲ್ಲದಿದ್ದರೆ ದೇಶ ದುರ್ಬಲ ಸ್ಥಿತಿಗೆ ಹೋಗುತ್ತಿತ್ತು. ಎಲ್ಲವನ್ನೂ ಮನಗಂಡು ಡಾ. ಅಂಬೇಡ್ಕರ್ ಸಂವಿಧಾನವನ್ನು ಅತ್ಯದ್ಬುತವಾಗಿ ರೂಪಿಸಿದ್ದಾರೆ ಎಂದರು.

ಸಮಾಜ ಕಲ್ಯಾಣಾಧಿಕಾರಿ ಅಂಜಲಿದೇವಿ, ಕರ್ನಾಟಕ ದಲಿತ ರೈತ ಸೇನೆಯ ಗೌರವಾಧ್ಯಕ್ಷ ಹುಳದೇನಹಳ್ಳಿ ವೆಂಕಟೇಶ್, ಜಿಲ್ಲಾ ಸಂಚಾಲಕ ಕಾರಮಾನಹಳ್ಳಿ ಅಶೋಕ್, ಕಾರ್ಯದರ್ಶಿ ಸತೀಶ್, ಗ್ರಾಪಂ ಮಾಜಿ ಅಧ್ಯಕ್ಷ ಮುನಿಶ್ಯಾಮಪ್ಪ, ಸದಸ್ಯರಾದ ಕೃಷ್ಣಪ್ಪ, ನಾರಾಯಣಸ್ವಾಮಿ, ಡೇರಿ ಅಧ್ಯಕ್ಷ ಅಂಗಡಿ ಕೃಷ್ಣಪ್ಪ, ಮುಖಂಡರಾದ ಕಲಾವಿದ ಯಲ್ಲಪ್ಪ, ಕುಪೇಂದ್ರ, ಕಣಿವೇಕಲ್ಲು ಶಿವಣ್ಣ ಮುಂತಾದವರು ಹಾಜರಿದ್ದರು.