ಕಾಂಗ್ರೆಸ್ಸಿನಿಂದ ದಲಿತರಿಗೆ ಮೋಸ: ನಾರಾಯಣಸ್ವಾಮಿ

| Published : May 03 2024, 01:00 AM IST / Updated: May 03 2024, 01:01 AM IST

ಕಾಂಗ್ರೆಸ್ಸಿನಿಂದ ದಲಿತರಿಗೆ ಮೋಸ: ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರನ್ನು ಬಡವರನ್ನಾಗಿಯೇ ಉಳಿಸುವ, ಬರೀ ಮತಗಳಿಗಾಗಿ ಮಾತ್ರ ಬಳಕೆ ಮಾಡಿ, ಗುಲಾಮರನ್ನಾಗಿಸುವುದು ಕಾಂಗ್ರೆಸ್‌ ಕುತಂತ್ರವಾಗಿದೆ. ಇದು ಲೋಕಸಭೆ ಚುನಾವಣೆ. ಇಲ್ಲಿ ದೇಶ ಮತ್ತು ಅಂತಾರಾಷ್ಟ್ರೀಯ ವಿಚಾರಗಳು ಚರ್ಚೆಗೆ ಬರಬೇಕು.

ಹುಬ್ಬಳ್ಳಿ:

ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ₹25,386 ಕೋಟಿಯನ್ನು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದಲಿತರಿಗೆ ದ್ರೋಹ ಮಾಡಿದೆ ಎಂದು ವಿಪ‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬರೀ ಸುಳ್ಳು ಹೇಳುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಅವರು ಹೇಳಿದ್ದು ಒಂದು, ಮಾಡಿದ್ದು ಮತ್ತೊಂದು. ಗ್ಯಾರಂಟಿ ಯೋಜನೆಗಳನ್ನು ಕೊಟ್ಟರು. ಆದರೆ, ಅವುಗಳು ಜನರಿಗೆ ತಲುಪಿಸುವ ಕುರಿತು ಗ್ಯಾರಂಟಿಯನ್ನೇ ನೀಡಲಿಲ್ಲ ಎಂದು ಕಿಡಿಕಾರಿದರು.

ದಲಿತರನ್ನು ಬಡವರನ್ನಾಗಿಯೇ ಉಳಿಸುವ, ಬರೀ ಮತಗಳಿಗಾಗಿ ಮಾತ್ರ ಬಳಕೆ ಮಾಡಿ, ಗುಲಾಮರನ್ನಾಗಿಸುವುದು ಕಾಂಗ್ರೆಸ್‌ ಕುತಂತ್ರವಾಗಿದೆ. ದೇಶದ ಬಗ್ಗೆ ಚಕಾರವೆತ್ತದೇ, ಬರೀ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿಗಳ ಬಗ್ಗೆ ಅಪಪ್ರಚಾರ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಆರೋಪಿಸುತ್ತಾರೆ. ಆದರೆ, ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಧಾನಿಗಳೇ ಸ್ಪಷ್ಟನೆ ನೀಡಿದ್ದಾರೆ ಎಂದರು.

ಕಾಂಗ್ರೆಸ್ಸಿನವರಿಗೆ ಸೋಲಿನ ಭಯ:

ಮಾಜಿ ಶಾಸಕ ಎನ್‌. ಮಹೇಶ ಮಾತನಾಡಿ, ಈಗಾಗಲೇ ಕಾಂಗ್ರೆಸ್‌ ನಾಯಕರಿಗೆ ಸೋಲಿನ ಭಯ ಆರಂಭವಾಗಿದೆ. ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಕರೆದಿರುವುದು, ಇನ್ನೋರ್ವ ಕಾಂಗ್ರೆಸ್ ಧುರೀಣ ರಾಜು ಕಾಗೆ ಮೋದಿ ಅವರ ಬಗ್ಗೆ ಅವಳಹೇಳನಕಾರಿ ಮಾತು ಹೇಳಿರುವುದು ಇದಕ್ಕೆ ಸಾಕ್ಷಿ ಎಂದರು. ಯುವಜನರು ಪ್ರೀತಿಯಿಂದ ಮೋದಿ- ಮೋದಿ ಎನ್ನುತ್ತಾರೆ. ಇದು ಹತ್ತು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿ ವಿಶ್ವಾಸ ಗಳಿಸಿರುವುದರ ಫಲ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣ ಅಕ್ಷಮ್ಯ ಅಪರಾಧವಾಗಿದ್ದು, ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಕಾನೂನು ರೀತಿಯ ಶಿಕ್ಷೆಯಾಗಲಿ. ಹಾಗೆಯೇ ಈ ಅಶ್ಲೀಲ ವಿಡಿಯೋ ತುಣುಕು ಹರಡಿದವರ ಮೇಲೆಯೂ ಕ್ರಮವಾಗಲಿ. ಇಂತಹ ವಿಡಿಯೋ ಅಂತರ್ಜಾಲದಲ್ಲಿ ಪ್ರಸಾರವಾಗದಂತೆ ನಿರ್ಬಂಧ ವಿಧಿಸುವಂತೆ ಒತ್ತಾಯಿಸಿದರು.

ಈ ವೇಳೆ ಬಿಜೆಪಿ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಬಸವರಾಜ ಅಮ್ಮಿನಭಾವಿ, ಗುರು ಪಾಟೀಲ, ಪರಶುರಾಮ ಪೂಜಾರ ಸೇರಿದಂತೆ ಹಲವರಿದ್ದರು.