ಇಟ್ಟಿಗೆ ಭಟ್ಟಿಯಲ್ಲಿ ಜೀತಕ್ಕಿದ್ದ ದಲಿತರ ರಕ್ಷಣೆ

| Published : May 20 2025, 11:45 PM IST

ಇಟ್ಟಿಗೆ ಭಟ್ಟಿಯಲ್ಲಿ ಜೀತಕ್ಕಿದ್ದ ದಲಿತರ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹುಲಿಯೂರುದುರ್ಗ ಹೋಬಳಿ ಬೀರುಗೋನಹಳ್ಳಿ ಗ್ರಾಮದ ಬಿಆರ್ ವಿ ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳಾಗಿದ್ದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿಲೂರು ಗ್ರಾಮದ ರಾಜೇಂದ್ರ ಮತ್ತು ಲಲಿತ ದಂಪತಿಗಳನ್ನು ರಕ್ಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಬೀರುಗೋನಹಳ್ಳಿ ಗ್ರಾಮದ ಬಿಆರ್ ವಿ ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳಾಗಿದ್ದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿಲೂರು ಗ್ರಾಮದ ರಾಜೇಂದ್ರ ಮತ್ತು ಲಲಿತ ದಂಪತಿಗಳನ್ನು ರಕ್ಷಿಸಲಾಗಿದೆ.

ವೇಣುಗೋಪಾಲ್ ಮಾಲೀಕತ್ವದ ಈ ಇಟ್ಟಿಗೆ ಭಟ್ಟಿಯಲ್ಲಿ ದಲಿತ ಕುಟುಂಬವನ್ನು ಅಕ್ರಮವಾಗಿ ಜೀತಕ್ಕೆ ಇರಿಸಲಾಗಿತ್ತು ಎಂಬ ಮಾಹಿತಿ ಮೇರೆಗೆ ಮುಕ್ತ ಒಕ್ಕೂಟ ಸ್ವಯಂ ಸೇವಾ ಸಂಸ್ಥೆಯ ಅಧಿಕಾರಿಗಳು, ತಹಸೀಲ್ದಾರ್ ರಶ್ಮಿ ನೇತೃತ್ವದ ತಂಡ ದಾಳಿ ಮಾಡಿ ಮಾಲೀಕನಿಂದ ಒತ್ತೆಯಾಳುಗಳನ್ನು ರಕ್ಷಣೆ ಮಾಡಿದ್ದಾರೆ.

ರಾಜೇಂದ್ರ ಮತ್ತು ಲಲಿತ ಕುಟುಂಬ ಮಾಗಡಿ ತಾಲೂಕಿನಲ್ಲಿ ಮೂರು ವರ್ಷದ ಹಿಂದೆ ಭಟ್ಟಿಯಲ್ಲಿ ಆರು ಸಾವಿರ ಸಾಲ ಪಡೆದು ಕೆಲಸ ಮಾಡುತ್ತಿದ್ದರು. ನಂತರ ಎರಡು ವರ್ಷದ ಬಳಿಕ ವೇಣುಗೋಪಾಲ್ ಹಳೆಯ ಭಟ್ಟಿ ಮಾಲೀಕರಿಗೆ 6000 ಹಣ ಕೊಟ್ಟು ಸಾವಿರ ಇಟ್ಟಿಗೆ ಮಾಡಲು 1000 ರೂಪಾಯಿ ಕೂಲಿ ಕೊಡುವುದಾಗಿ ನಂಬಿಸಿ ಕರೆದುಕೊಂಡು ಬಂದು ಕೂಲಿ ಕೊಡದೆ ದುಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಹದಿಮೂರು ವರ್ಷದ ಮಗ ಶಾಲೆಗೆ ಹೋಗದೆ ದನ ಕರುಗಳನ್ನು ನೋಡಿಕೊಳ್ಳುತ್ತಿದ್ದ. ಊರಿಗೆ ಹೋಗಲೂ ಬಿಡುತ್ತಿರಲಿಲ್ಲ. ಊರಿಗೆ ಹೋಗಬೇಕೆಂದರೆ ಮಗನನ್ನು ಇಟ್ಟಿಗೆ ಭಟ್ಟಿಯಲ್ಲಿ ಬಿಟ್ಟು ಹೋಗಬೇಕಾಗಿತ್ತು. ಅಲ್ಲಿ ಮಗು ಚೇಳು ಹಾಗೂ ಚಿರತೆ ಕಾಟದ ನಡುವೆ ಇರಬೇಕಾದ ಪರಿಸ್ಥಿತಿ ಉಂಟಾಗುತ್ತಿತ್ತು ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಜೀತದಾಳು ಹೇಳಿಕೆ ಪಡೆದ ತಹಸೀಲ್ದಾರ್ ರಶ್ಮಿ ಮಂಗಳವಾರ ಸಂಜೆ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆ ಕೈಗೊಳ್ಳಲಾಗಿದೆ.