ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳೇ ಗತಿಸಿದರೂ ದಲಿತ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ನ್ಯಾಯ ಸಂಪೂರ್ಣವಾಗಿ ಸಿಕ್ಕಿಲ್ಲ ಎಂದು ದಲಿತ ಮುಖಂಡ ಹಾಗೂ ಟಿಎಪಿಸಿಎಂಎಸ್‌ ಉಪಾಧ್ಯಕ್ಷ ದಿಡಗೂರು ಜಿ.ಎಚ್. ತಮ್ಮಣ್ಣ ವಿಷಾದಿಸಿದ್ದಾರೆ.

- ಹೊನ್ನಾಳಿಯಲ್ಲಿ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ

- - -

ಹೊನ್ನಾಳಿ: ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳೇ ಗತಿಸಿದರೂ ದಲಿತ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ನ್ಯಾಯ ಸಂಪೂರ್ಣವಾಗಿ ಸಿಕ್ಕಿಲ್ಲ ಎಂದು ದಲಿತ ಮುಖಂಡ ಹಾಗೂ ಟಿಎಪಿಸಿಎಂಎಸ್‌ ಉಪಾಧ್ಯಕ್ಷ ದಿಡಗೂರು ಜಿ.ಎಚ್. ತಮ್ಮಣ್ಣ ವಿಷಾದಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ದಲಿತ ಮತ್ತು ವಿವಿಧ ಹಿಂದುಳಿದ ಸಮುದಾಯಗಳಿಂದ ನಡೆದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 69ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಗೌರವ ಸಮರ್ಪಿಸಿ ಅವರು ಮಾತನಾಡಿದರು.

ಇಂದು ಇಡೀ ವಿಶ್ವವೇ ಗೌರವಿಸುವಂತಹ ಅತ್ಯದ್ಭುತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್. ಅವರು 1956ರ ಡಿ.6ರಂದು ಇಹಲೋಕ ತ್ಯಜಿಸಿದ್ದರು. ಈ ದಿನವನ್ನು ಮಹಾಪರಿನಿರ್ವಾಣ ದಿನವಾಗಿ ದೇಶವಾಸಿಗಳು, ಅದರಲ್ಲೂ ದಲಿತ ಮತ್ತು ಹಿಂದುಳಿದ ಸಮುದಾಯದವರು ಪವಿತ್ರ ದಿನವಾಗಿ ಭಾವಿಸಿ ಆಚರಿಸುತ್ತಿದ್ದಾರೆ. ಒಳಮೀಸಲಾತಿಯಡಿ ದಲಿತ ಮತ್ತು ಹಿಂದುಳಿದವರು ಅವಕಾಶಗಳನ್ನು ಬಳಸಿ ಹೆಚ್ಚು ಶಿಕ್ಷಿತರಾಗಿ ಸೌಲಭ್ಯಗಳನ್ನು ಪಡೆಯಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಎಂ.ಆರ್.ಮಹೇಶ್ ಮಾತನಾಡಿ, ದೇಶದ ಜನರಿಗೆ ಅಂಬೇಡ್ಕರ್ ಅವರು ವಿದ್ಯಾವಂತರಾಗಿ, ಸಂಘಟಿತರಾಗಿ ಹಾಗೂ ಉತ್ತೇಜಿತರಾಗಿ ಎಂಬ 3 ವಾಕ್ಯಗಳ ಘೋಷಣೆಯನ್ನು ಬಿಟ್ಟುಹೋಗಿದ್ದಾರೆ. ನಾವು ಇವುಗಳನ್ನು ಜೀವನದಲ್ಲಿ ಪರಿಪಾಲಿಸುವ ಮೂಲಕ ಅವರ ಕನಸು, ನಿರೀಕ್ಷೆಗಳನ್ನು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಾಕಾರಗೊಳಿಸಬೇಕಾಗಿದೆ ಎಂದರು.

ಹಾಲುಮತ ಮಹಾಸಭಾ ಅಧ್ಯಕ್ಷ ರಾಜು ಕಡಗಣ್ಣಾರ ಮಾತನಾಡಿದರು. ಒಳಮೀಸಲಾತಿ ಹೋರಾಟದಲ್ಲಿ ಉತ್ತಮ ರೀತಿಯಲ್ಲಿ ತೊಡಗಿಸಿಕೊಂಡವರಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಮಾರಿಕೊಪ್ಪದ ಮಂಜಪ್ಪ, ಕುರುವ ಮಂಜುನಾಥ,ಕ್ಯಾಸಿನಕೆರೆ ಶೇಖರಪ್ಪ ಅವರು ಅಂಬೇಡ್ಕರ್ ಕುರಿತು ಮಾತನಾಡಿದರು. ನ್ಯಾಮತಿ ಚಂದ್ರಪ್ಪ, ಹಾಲೇಶ, ದಲಿತ ಮತ್ತು ಹಿಂದುಳಿದ ಸಮುದಾಯಗಳ ಮುಖಂಡರು ಇದ್ದರು.

- - -

-6ಎಚ್.ಎಲ್.ಐ1: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.