ಸಾರಾಂಶ
ದಲಿತರು ಈ ದೇಶದ ಮೂಲ ವಾಸಿಗರು. ತಲತಲಾಂತರದಿಂದ ದೇಶವನ್ನು ಆಳಿದವರು ದಲಿತರು, ಆದರೆ ಕೆಲವರು ಅಂಬೇಡ್ಕರ್ ಹೆಸರಿಗೆ ಕಪ್ಪು ಚುಕ್ಕಿ ತರುವಂಥ ಹೇಳಿಕೆಗಳನ್ನು ನೀಡುವ ಮೂಲಕ ದಲಿತರ ಸ್ವಾಭಿಮಾನವನ್ನು ಕೆಣಕುತ್ತಿರುವುದನ್ನು ದಲಿತರು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮೂವತ್ತು ಸಾವಿರ ಪೇಶ್ವೆ ಸೈನಿಕರನ್ನು ಕೇವಲ ಐದುನೂರು ಜನ ಮಹರ್ ಸೈನಿಕರು ಸೋಲಿಸಿದ ಐತಿಹಾಸಿಕ ಕದನವನ್ನು ಮನುವಾದಿಗಳು ಮುಚ್ಚಿ ಹಾಕಲು ಯತ್ನಿಸಿದ್ದರು. ಆದರೆ, ಅಂಬೇಡ್ಕರ್ ಈ ಸತ್ಯ ಘಟನೆಯನ್ನು ಬೆಳಕಿಗೆ ತಂದರು. ಅದುವೇ ಕೋರೆಗಾಂವ್ ಯುದ್ಧದ ವಿಜಯವಾಗಿದ್ದು, ಈ ನೆನಪಿಗಾಗಿ ಜ.೧ರಂದು ಕೋರೆಗಾಂವ್ ವಿಜಯೋತ್ಸವವನ್ನು ದಲಿತರು ಆಚರಿಸುವರು ಎಂದು ದಲಿತ ಸಮಾಜ ಸೇನೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಹೇಳಿದರು.ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂದೆ ವಿವಿಧ ದಲಿತ ಸಂಘಟನೆಗಳಿಂದ ೨೦೭ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಹಿನ್ನೆಲೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಪೇಶ್ವೆಗಳ ಆಡಳಿತದಲ್ಲಿ ಜಾತಿ, ಅಸ್ಪೃಶ್ಯತೆ, ಮೇಲು- ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸಿದ ಮಹರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟ ಅಪ್ರತಿಮವಾದದು. ಈ ಹೋರಾಟ ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ಭೀಮ ಕೋರೆಗಾಂವ್ ಯುದ್ದವೆಂದೇ ಪ್ರಸಿದ್ಧವಾಗಿದೆ.
ದಲಿತರು ಈ ದೇಶದ ಮೂಲ ವಾಸಿಗರು. ತಲತಲಾಂತರದಿಂದ ದೇಶವನ್ನು ಆಳಿದವರು ದಲಿತರು, ಆದರೆ ಕೆಲವರು ಅಂಬೇಡ್ಕರ್ ಹೆಸರಿಗೆ ಕಪ್ಪು ಚುಕ್ಕಿ ತರುವಂಥ ಹೇಳಿಕೆಗಳನ್ನು ನೀಡುವ ಮೂಲಕ ದಲಿತರ ಸ್ವಾಭಿಮಾನವನ್ನು ಕೆಣಕುತ್ತಿರುವುದನ್ನು ದಲಿತರು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.ದಸಂಸ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ದೇಶದಲ್ಲಿ ದಲಿತರು ಸ್ವಾಭಿಮಾನಿಗಳಾಗಿ ಬದುಕುವ ಸಮಯದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ಹಗುರವಾಗಿ ಲೋಕಸಭೆಯಲ್ಲಿ ಮಾತನಾಡಿರುವುದನ್ನು ಖಂಡಿಸಿದರು. ಸಂವಿಧಾನವನ್ನು ಬಿಜೆಪಿ ನಾಯಕರು ದುರ್ಬಲಗೊಳಿಸಲು ಮುಂದಾದರೆ ಎರಡನೇ ಕೋರೆಗಾಂವ್ ಯುದ್ಧ ನಡೆದರೂ ಅಶ್ಚರ್ಯಪಡುವ ಅಗತ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ದಲಿತ ರೈತ ಸೇನೆ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್, ಕಲಾವಿದ ಯಲ್ಲಪ್ಪ, ಪ್ರದೀಪ್, ರವಿಕುಮಾರ್, ಡಿಕ್ಕ ವೆಂಕಟೇಶ್, ನಾಸೀರ್, ಕರ್ಣ, ಮುನಿರಾಜು, ಮಂಜುನಾಥ್ ಮತ್ತಿತರರು ಇದ್ದರು.