ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದಿರುವ ಸಚಿವ ಜಮೀರ್ ಅಹಮದ್ ಹೇಳಿಕೆ ವಿರುದ್ಧ ದಳಪತಿಗಳು ಗುಡುಗಿದ್ದಾರೆ. ಬಸ್ ಡ್ರೈವರ್ ಆಗಿದ್ದವರಿಗೆ ಹೇಗೆ ಮಾತನಾಡಬೇಕೆಂಬ ಬಗ್ಗೆ ನಾಗರಿಕತೆಯೇ ಗೊತ್ತಿಲ್ಲ. ಕೂಡಲೇ ಸಿಎಂ ಅವರು ಸಚಿವರಿಂದ ರಾಜೀನಾಮೆ ಪಡೆದು ಕ್ಷಮೆಯಾಚಿಸಬೇಕು ಎಂದು ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ ಮತ್ತು ಡಾ.ಕೆ.ಅನ್ನದಾನಿ ಗುಡುಗಿದ್ದಾರೆ.ನನ್ನ ರಾಜಕೀಯ ಜೀವನದಲ್ಲಿ ಜಮೀರ್ ಅಹಮದ್ ಅವರನ್ನು ಕುಮಾರಸ್ವಾಮಿ ಎಂದೂ ಸಹ ಸಾರ್ವಜನಿಕವಾಗಿ ಕುಳ್ಳ ಎಂದು ಕರೆದಿದ್ದನ್ನು ನಾನು ನೋಡಿಲ್ಲ. ಇದು ಜನಾಂಗೀಯ ಘರ್ಷಣೆಯಾಗುವಂತಹ ಹೇಳಿಕೆ. ಸರ್ಕಾರ ಕೂಡಲೇ ಸುಮೋಟೋ ಕೇಸ್ ದಾಖಲಿಸಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಕೆ.ಸುರೇಶ್‌ಗೌಡ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಬಸ್ ಡ್ರೈವರ್ ಆಗಿದ್ದವರನ್ನು ರಾಜಕೀಯವಾಗಿ ಬೆಳೆಸಿದ್ದು ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ. ಸಿಎಂ ಸಿದ್ದರಾಮಯ್ಯ ಅವರು ಸಚಿವರನ್ನು ಹಿಡಿತದಲ್ಲಿಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಜಮೀರ್ ತಮ್ಮ ತೆವಲಿಗೆ ರಾಜಕಾರಣ ಮಾಡುತ್ತಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕರಿಯ ಅಂತ ಅವರ ಬಣ್ಣದ ಬಗ್ಗೆ ಹೇಳಿಕೆ ಕೊಡೋದು ಎಷ್ಟರಮಟ್ಟಿಗೆ ಸರಿ? ಇದು ಜನರ ಸ್ವಾಭಿಮಾನಕ್ಕೆ ಧಕ್ಕೆ ತರಲಿದೆ. ಯಾರನ್ನೋ ಮೆಚ್ಚಿಸಲು ಈ ರೀತಿ ಮಾತನಾಡುವುದು ಸಂವಿಧಾನ ಮತ್ತು ಕಾನೂನು ನಿಷಿದ್ಧವಿದೆ. ಇದಕ್ಕೆಲ್ಲಾ ಸಾರ್ವಜನಿಕರು ತಕ್ಕ ಉತ್ತರ ಕೊಡುತ್ತಾರೆ. ದೇವೇಗೌಡರ ಕುಟುಂಬ ಖರೀದಿ ಮಾಡುತ್ತೇನೆ ಎನ್ನುತ್ತಾರೆ. ಇಂತಹ ತುಷ್ಟೀಕರಣ ಮಾತನಾಡಬಾರದು ಎಂದು ಹೇಳಿದರು.ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಒಂದು ದಿನ ಕೂಡ ಕುಮಾರಣ್ಣ ಜಮೀರ್‌ನನ್ನು ಕುಳ್ಳ ಎಂದು ಕರೆದಿಲ್ಲ. ಅದಕ್ಕೆ ನಾನೇ ಸಾಕ್ಷಿ. ಇದಕ್ಕೆಲ್ಲಾ ಚನ್ನಪಟ್ಟಣದಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಸಚಿವ ಜಮೀರ್ ಕೇಂದ್ರ ಸಚಿವರನ್ನು ಅಪಮಾನ ಮಾಡಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಜಮೀರ್‌ಗೆ ಮಾತನಾಡುವ ಸಂಸ್ಕೃತಿಯೇ ಗೊತ್ತಿಲ್ಲ. ದೇವೇಗೌಡ ಸಾಹೇಬರು ಜಮೀರ್ ಗೆ ರಾಜಕೀಯ ಬದುಕು ಕಟ್ಟಿಕೊಟ್ಟರು.ಚಾಮರಾಜಪೇಟೆಯಲ್ಲಿ ಅಧಿಕಾರಕ್ಕೆ ತಂದರು. ಕುಮಾರಸ್ವಾಮಿ ಸಚಿವ ಪಟ್ಟಕ್ಕೇರಿಸಿದರು. ಇವೆಲ್ಲದರ ಬಗ್ಗೆ ಜಮೀರ್‌ಗೆ ಕಿಂಚಿತ್ತೂ ಕೃತಜ್ಞತೆಯೇ ಇಲ್ಲ. ಎಂದು ಛೇಡಿಸಿದರು.
ನಾವೆಲ್ಲರೂ ಕುಮಾರಸ್ವಾಮಿ ಗರಡಿಯಲ್ಲಿ ಬೆಳೆದವರು. ಕುಮಾರಸ್ವಾಮಿ ಅವರು ಹೊರಗೆ, ಒಳಗೆ ಯಾರನ್ನೂ ಸಹ ಏಕವಚನದಲ್ಲಿ ಮಾತನಾಡಿಸಿಲ್ಲ, ಚಲುವರಾಯಸ್ವಾಮಿ, ಜಮೀರಣ್ಣ ಎಂದೇ ಕರೆಯುತ್ತಿದ್ದರು. ಯಾರನ್ನು ನೋಯಿಸದ ಮನಸ್ಸು ಕುಮಾರಸ್ವಾಮಿ ಅವರಲ್ಲಿದೆ ಎಂದು ಹೇಳಿದರು.ವೈಯಕ್ತಿಕ ವಿಚಾರವನ್ನು ರಾಜಕಾರಣದಲ್ಲಿ ತರಬಾರದು. ಕುಮಾರಸ್ವಾಮಿ, ಜಮೀರ್ ಒಂದು ಕಾಲದಲ್ಲಿ ಬಹಳ ಆತ್ಮೀಯರು. ಆತ್ಮಸಾಕ್ಷಿ ಇದೆ, ಭಗವಂತ ಇದ್ದಾನೆ. ನಮ್ಮೆಲ್ಲರಿಗೂ ನೋವಾಗುವ ರೀತಿ ಜಮೀರ್ ಮಾತನಾಡಿದ್ದಾರೆ. ಇದನ್ನ ಸಹಿಸಿಕೊಳ್ಳಲಾಗುತ್ತಿಲ್ಲ. ಜಮೀರ್‌ಗೆ ಶ್ರೀಮಂತಿಕೆ ಇದೆ. ಅದರ ಜೊತೆಗೆ ನಡತೆ, ಸಂಸ್ಕೃತಿ, ಗುಣವನ್ನೂ ಜೊತೆಗೆ ತೆಗೆದುಕೊಂಡು ಹೋಗಬೇಕು. ಮಾನವ- ಮನುಷ್ಯತ್ವ ಗುಣ ಬೆಳೆಸಿಕೊಳ್ಳಬೇಕು. ಎರಡೂ ಮೂರು ಬಾರಿ ಸಚಿವರಾಗಿರುವ ಜಮೀರ್ ದೇವೇಗೌಡರಂತಹ ಮಹಾನ್ ನಾಯಕರು ಹಾಗೂ ಅವರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಇಂತಹ ಪದ ಬಳಕೆ ಮಾಡೋದನ್ನು ಬಿಡಲಿ. ಅಲ್ಲಾ ನಿಮಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಾರ್ಥಿಸಿದರು.
ದೇವೇಗೌಡರ ಕುಟುಂಬವನ್ನ ಜರಿಯುವುದು ಶೋಭೆತರುವಂತದಲ್ಲ. ಕನ್ನಡ ಮಾತನಾಡುವವರನ್ನು ಸಲಹೆಗಾರರನ್ನಾಗಿ ಇಟ್ಟುಕೊಳ್ಳಿ. ಜಮೀರ್ ನನಗೂ ಕೂಡ ನನ್ನ ಸ್ನೇಹಿತರು. ರಾಜಕೀಯವಾಗಿ ಬೇರೆ ಬೇರೆ ಇದ್ದಿವಿ ಅಷ್ಟೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾತನಾಡಬಹುದಾ? ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಜನರ ವಿರುದ್ದವಾಗಿರುವ ಪಕ್ಷ. ನಿಖಿಲ್ ಗೆಲ್ಲಿಸಲು ಜನರ ಬೆಂಬಲ ಇದೆ. ೩೦ ಸಾವಿರ ಮತಗಳ ಅಂತರದಿಂದ ನಿಖಿಲ್ ಗೆಲ್ಲುತ್ತಾರೆ. ನಾಳೆ ಸರಿಯಾದ ಉತ್ತರವನ್ನು ಜಮೀರ್‌ಗೆ ಚನ್ನಪಟ್ಟಣದ ಜನರು ಕೊಡುತ್ತಾರೆ. ೨೩ಕ್ಕೆ ಫಲಿತಾಂಶ ಬರುತ್ತೆ. ಅಂದು ಕಾಂಗ್ರೆಸ್‌ನವರಿಗೆ ಉತ್ತರ ಸಿಗಲಿದೆ ಎಂದು ಹೇಳಿದರು.--ಸಚಿವರಿಗೇ ರಕ್ಷಣೆಯಿಲ್ಲ, ಜನಸಾಮಾನ್ಯರ ಗತಿಯೇನು?:
ಚಲುವರಾಯಸ್ವಾಮಿ ಗಲಾಟೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಾನು ಒಂದು ಮುತ್ತು ಕೊಟ್ಟೆ ಅದಕ್ಕೆ ಅವರೂ ನಾಲ್ಕು ಮುತ್ತು ಕೊಟ್ಟರು ಅಂತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಕುರಿತು ವ್ಯಂಗ್ಯವಾಡಿದರು. ಸಚಿವರಿಗೆ ರಕ್ಷಣೆ ಇಲ್ಲ, ಸರ್ಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ. ನನಗೂ ನೋವಾಗುತ್ತೆ, ನಮ್ಮ ಕ್ಷೇತ್ರದ ಪ್ರಜೆ. ಅವರಿಗೆ ಕಪಾಳ ಮೋಕ್ಷವಾದರೆ ನನಗೂ ಆದ ಹಾಗೇನೆ. ಹಲವಾರು ಘಟನೆಗಳು ನಡೆದಿವೆ, ಯಾವುದೂ ಹೊರಗೆ ಬಂದಿಲ್ಲ. ಒಬ್ಬ ಸಚಿವರಿಗೆ ರಕ್ಷಣೆ ಇಲ್ಲವೆಂದಾದರೆ ಜನಸಾಮಾನ್ಯರಿಗೆ ಹೇಗೆ ರಕ್ಷಣೆ ಕೊಡ್ತಾರೆ ಎಂದು ಪ್ರಶ್ನಿಸಿದರು. ಸಚಿವರು ನನ್ನ ವಿರೋಧಿ ಇರಬಹುದು. ಅದರೆ, ಅವರು ಜಿಲ್ಲೆಯ ಉಸ್ತುವಾರಿ ಸಚಿವರು, ನಮ್ಮ ಕ್ಷೇತ್ರದ ಶಾಸಕರು. ಆವರ ಮೇಲೆ ಹಲ್ಲೆ ನಡೆದಿದ್ದರೂ ಸರ್ಕಾರ ಮೌನ ವಹಿಸಿರುವುದು ದುರಂತದ ಸಂಗತಿ ಎಂದರು.