ಮಳೆಯಿಂದಾಗಿ ಈರುಳ್ಳಿ, ಮೆಕ್ಕೆಜೋಳಕ್ಕೆ ಹಾನಿ

| Published : Oct 23 2024, 12:33 AM IST

ಸಾರಾಂಶ

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇದರಿಂದಾಗಿ ರೈತರಿಗೆ ಲಕ್ಷಾಂತರ ಆರ್ಥಿಕ ನಷ್ಟವಾಗಿದ್ದು, ತೀವ್ರ ಕಂಗಾಲಾಗಿದ್ದಾರೆ. ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಮುಂತಾದ ಗ್ರಾಮಗಳಲ್ಲಿ ಲಕ್ಷಾಂತರ ರು. ಮೌಲ್ಯದ ಮೆಕ್ಕೆ ಜೋಳ ಹಾಗೂ ಈರುಳ್ಳಿ ಬೆಳೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಕೊಡ್ಲಿವಾಡ ಗ್ರಾಮದ ರೈತ ರಾಮಪ್ಪ ಹಾರುಗೊಪ್ಪ ಸುಮಾರು 60 ಸಾವಿರ ರು. ವೆಚ್ಚ ಮಾಡಿ 3 ಎಕರೆ ಜಮೀನಿನಲ್ಲಿ ಮೇಕ್ಕೆ ಜೋಳ ಹಾಗೂ ಯರಗಟ್ಟಿ ಗ್ರಾಮದ ರೈತ ವೆಂಕಟೇಶ ಮಿಕಲಿ ಸುಮಾರು ಒಂದು ಲಕ್ಷ ರು ಖರ್ಚು ಮಾಡಿ 3 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಧಾರಾಕಾರ ಮಳೆ ಬಂದು ನೀರು ಜಮೀನಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ಅಕಾಲಿಕ ಮಳೆಯಿಂದಾಗಿ ಸುಮಾರು ₹7 ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ ರೈತರು.ಈ ವರ್ಷ ಸತತ ಎರಡನೇ ಸಲ ಅಕಾಲಿಕ ಮಳೆ ಬೀಳುತ್ತಿರುವುದರಿಂದ ಮುಂಗಾರಿನಂತೆ ಹಿಂಗಾರು ಬೆಳೆಗಳೂ ಕೈಬಿಟ್ಟು ಹೋಗುವಂತಾಗಿದೆ. ಕೊಯ್ಲು ಮಾಡಿದ ಕಡಲೆ ಕಾಳು ಉಬ್ಬಿಕೊಂಡಿವೆ. ರೈತರಿಗೆ ಪ್ರಕೃತಿ ವಿಕೋಪ ಪರಿಹಾರ ನೀಡಲು ಸರ್ಕಾರ ಮುಂದೆ ಬರಬೇಕು.

- ರಾಮಪ್ಪ ಹಾರುಗೊಪ್ಪ, ಕೊಡ್ಲಿವಾಡ ರೈತ.

ಕೆಲವು ಕಡೆಗಳಲ್ಲಿ ರೈತರು ಜಮೀನಿನಿಂದ ತೆಗೆದು ಸಂಗ್ರಹಿಸಿದ ಮೆಕ್ಕಜೋಳ, ಈರುಳ್ಳಿ ಸೇರಿದಂತೆ ವಿವಿಧ ಫಸಲು ನಾಶವಾಗಿವೆ ಎಂದು ರೈತರು ದೂರವಾಣಿ ಮೂಲಕ ತಿಳಿಸಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ರೈತರ ಜಮೀನುಗಳಿಗೆ ಭೇಟಿ ನೀಡಲು ಆಗುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳ ಜತೆಗೆ ಹೋಗಿ ಪರಿಶೀಲನೆ ನಡೆಸುತ್ತೇವೆ.

- ಶಿವಪ್ರಕಾಶ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ, ಸವದತ್ತಿ.