ಗುರುದೇವೋತ್ಸವದಲ್ಲಿ ಮೇಳೈಸಿದ ನೃತ್ಯ ಝೇಂಕಾರ

| Published : Sep 06 2025, 01:00 AM IST

ಗುರುದೇವೋತ್ಸವದಲ್ಲಿ ಮೇಳೈಸಿದ ನೃತ್ಯ ಝೇಂಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಗೊರವಾಲೆ ಚಂದ್ರಶೇಖರ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಕ್ಕಳು, ಹಿರಿಯ ಕಲಾವಿದರಿಂದ ಆಕರ್ಷಕ ಭರತನಾಟ್ಯ ಪ್ರದರ್ಶನ । ತಾಂತ್ರಿಕ ಯುಗದಲ್ಲಿ ನಾಟ್ಯಕಲಾಪ್ರಕಾರ ಹಿಡಿದಿಡುವುದು ಸವಾಲು: ಕೆ.ಎಂ.ಗಾಯತ್ರಿ

ಕನ್ನಡಪ್ರಭ ವಾರ್ತೆ ಮಂಡ್ಯ

ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಆಯೋಜಿಸಿದ್ದ ಗುರುದೇವೋತ್ಸವ ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮ ಶುಕ್ರವಾರ ಸಂಜೆ ಅತ್ಯಾಕರ್ಷಕವಾಗಿ ಮೂಡಿಬಂದಿತು. ವರ್ಣರಂಜಿತ ಬೆಳಕಿನ ಚಿತ್ತಾರದ ನಡುವೆ ನೃತ್ಯದ ಝೇಂಕಾರ ಎಲ್ಲರ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ರಾಗ- ತಾಳದ ಸಮ್ಮಿಲನದೊಂದಿಗೆ ಕಲಾವಿದರ ಆಂಗಿಕ ಅಭಿನಯ, ಗೆಜ್ಜೆನಾದ ಪ್ರೇಕ್ಷಕರನ್ನು ನಾಟ್ಯಲೋಕಕ್ಕೆ ಕೊಂಡೊಯ್ಯಿತು.

ನಗರದ ವಿವೇಕಾನಂದ ರಂಗಮಂದಿರದಲ್ಲಿ ನಡೆದ ಗುರುದೇವೋತ್ಸವದ ಸಾರಥ್ಯವನ್ನು ಗುರುದೇವ ಲಲಿತಕಲಾ ಅಕಾಡೆಮಿ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ ವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಅಕಾಡೆಮಿಯ ಕಿರಿಯ ವಿದ್ಯಾರ್ಥಿಗಳು ಸಮೂಹ ಭರತನಾಟ್ಯ ಅಮೋಘವಾಗಿ ಪ್ರದರ್ಶಿಸಿದರು. ಕಲಾವೈಭವ ಫರ್ಫಾರ್ಮಿಂಗ್ ಆರ್ಟ್ಸ್‌ನ ರೆಬಿನಾ ನಿಧಿಕ್, ಪ್ಯಾರಿಸ್‌ನ ಪಂಚಮಿ ನೆರೋಳು ಅವರು ಏಕವ್ಯಕ್ತಿ ಭರತನಾಟ್ಯ ಪ್ರದರ್ಶನದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ ಅವರು, ಇದು ತಾಂತ್ರಿಕ ಯುಗ. ಯುವಜನರೆಲ್ಲರೂ ತಾಂತ್ರಿಕತೆಯಲ್ಲಿ ಮುಳುಗಡೆಯಾಗುತ್ತಿರುವ ಸಮಯದಲ್ಲಿ ಕಲಾಪ್ರಾಕಾರದೊಂದಿಗೆ ಮಕ್ಕಳನ್ನು ಹಿಡಿದಿಡುತ್ತಿರುವುದು ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

ಮಂಡ್ಯ ರೈತ, ಜನಪದ ಸಂಸ್ಕೃತಿಗೆ ಹೆಸರುವಾಸಿ. ಸಾಹಿತ್ಯ- ಸಾಂಸ್ಕೃತಿಕ ಚಟುವಟಿಕೆಯಿಂದಲೂ ಶ್ರೀಮಂತವಾಗಿದೆ. ಇಂತಹ ಜನಪದ ಸಂಸ್ಕೃತಿಯೊಂದಿಗೆ ಸಾಂಪ್ರದಾಯಿಕ ಸಂಸ್ಕೃತಿಯನ್ನು ಬೆರೆಸಿ ಬೆಳೆಸಿಕೊಂಡು ಹೋಗುತ್ತಿರುವ ಚೇತನಾ ರಾಧಾಕೃಷ್ಣ ಅವರ ಕಾರ್ಯ ಪ್ರಶಂಸನೀಯ ಎಂದು ಬಣ್ಣಿಸಿದರು.

ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ವಿದ್ಯಾರ್ಥಿಗಳವರೆಗೆ ಪ್ರಸ್ತುತಪಡಿಸಿದ ಭರತನಾಟ್ಯ ಪ್ರದರ್ಶನ ಅವರ ಕಲಾಪ್ರೌಢಿಮೆಗೆ ಹಿಡಿದ ಕನ್ನಡಿಯಂತಿತ್ತು. ನೃತ್ಯ ಸಂಸ್ಕೃತಿಯನ್ನು ದೇಶದ ಉದ್ದಗಲಕ್ಕೂ ಪಸರಿಸುತ್ತಿರುವುದು ಮಾತ್ರವಲ್ಲದೆ ವಿದೇಶಕ್ಕೂ ಪಸರಿಸುವಂತೆ ಮಾಡಿರುವುದು ನೃತ್ಯ ಪ್ರತಿಭೆಗಳಿಗೆ ಕಲಾಸಂಸ್ಕೃತಿಯ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಚೇತನಾ ರಾಧಾಕೃಷ್ಣ ಅವರ ಬಳಿ ನಾಟ್ಯ ಕಲಿತ ಎಷ್ಟೋ ಶಿಷ್ಯಂದಿರು ಇಂದು ವಿದುಷಿಗಳಾಗಿ ನೃತ್ಯಶಾಲೆಗಳನ್ನು ನಡೆಸುತ್ತಿದ್ದಾರೆ. ಗುರುಗಳ ಎದುರು ಶಿಷ್ಯರು ಎತ್ತರಕ್ಕೆ ಬೆಳೆದು ನಿಂತಾಗ ಗುರುಗಳಿಗೆ ವಿದ್ಯೆ ಕಲಿಸಿದ ಸಾರ್ಥಕತೆ, ನೆಮ್ಮದಿ, ತೃಪ್ತಿ ಸಿಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಆಧುನಿಕ ಯುಗದಲ್ಲಿ ಸಂಸ್ಕೃತಿ, ಕಲಾಪರಂಪರೆಯನ್ನು ಮರೆಯುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭರತನಾಟ್ಯ, ಸಂಗೀತ, ನೃತ್ಯ ಕಲೆ ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಒಬ್ಬ ವ್ಯಕ್ತಿ ಪರಿಪೂರ್ಣನಾಗಲು ಹಾಗೂ ಸಂಸ್ಕಾರವಂತನಾಗಲು ಕಲೆ ಸಹಕಾರಿಯಾಗಿದೆ. ಆ ಕಲೆಗೊಂದು ಶಕ್ತಿ ಇದೆ. ಪೋಷಕರಾದವರು ಮಕ್ಕಳಲ್ಲಿ ಆ ಕಲೆಯ ಅಭಿರುಚಿಯನ್ನು ಬೆಳೆಸಬೇಕು. ಪ್ರೋತ್ಸಾಹ ನೀಡಬೇಕು. ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗದಿದ್ದಾಗ ಅದು ಕಮರಿಹೋಗುತ್ತದೆ. ಅದಕ್ಕೆ ಅವಕಾಶ ನೀಡಬಾರದು ಎಂದು ಕಿವಿಮಾತು ಹೇಳಿದರು.

ಗುರುದೇವ ಲಲಿತಕಲಾ ಅಕಾಡೆಮಿ ನೂರಾರು ಪ್ರತಿಭೆಗಳಿಗೆ ಬೆಳಕಾಗಿ ನಿಂತಿದೆ. ಸಂಗೀತ, ನೃತ್ಯಕಲೆಯನ್ನು ಕಲಾಪ್ರಜ್ಞೆಯೊಂದಿಗೆ ಮೈಗೂಡಿಸಿಕೊಂಡವರು ಉತ್ತಮವಾದ ಬದುಕು ಕಟ್ಟಿಕೊಂಡಿರುವುದಲ್ಲದೆ, ಕೀರ್ತಿ, ಪ್ರಸಿದ್ಧಿಯನ್ನೂ ಗಳಿಸಿದ್ದಾರೆ. ಮನಸ್ಸಿನ ಬೇಸರ, ನೋವಿಗೆ ಸಂಜೀವಿನಿ ನೃತ್ಯ ಮತ್ತು ಸಂಗೀತ. ಅದನ್ನು ಇಂದಿನ ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಕಲಾವಂತಿಕೆ ಬೆಳೆಸಿಕೊಂದು ಹೃದಯವಂತರಾಗಿ ಬೆಳವಣಿಗೆ ಕಾಣುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಗೊರವಾಲೆ ಚಂದ್ರಶೇಖರ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮದ ಬಳಿಕ ಗುರುದೇವ ಲಲಿತಕಲಾ ಅಕಾಡೆಮಿ ನೃತ್ಯಧಾರ-೨ ತಂಡದವರು ಸಮೂಹ ಭರತನಾಟ್ಯ ಪ್ರದರ್ಶಿಸಿದರು. ಪುತ್ತೂರಿನ ವಿದುಷಿ ನಿಶಿತ ಏಕವ್ಯಕ್ತಿ ಭರತನಾಟ್ಯ, ಬೆಂಗಳೂರಿನ ನೃತ್ಯಾಂಕುರ ವಿದ್ಯಾಪೀಠದ ಲೀಲಾ ಬಸವಕಿರಣ್ ಶಿಷ್ಯವೃಂದ ಹಾಗೂ ಶಿವಮೊಗ್ಗ ಚಿತ್ಕಲಾ ನೃತ್ಯ ವಿದ್ಯಾಳಯದ ಮಾಲ್ಹಸ ಶಿಷ್ಯ ವೃಂದ ಸಮೂಹ ನೃತ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಎಸ್.ಎಲ್.ವಿ.ಬುಕ್ ಏಜೆನ್ಸಿ ಮತ್ತು ಬುಕ್‌ಹೌಸ್‌ನ ದಿವಾಕರ ದಾಸ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಗುರುದೇವ ಲಲಿತಕಲಾ ಅಕಾಡೆಮಿ ನಿರ್ದೇಶಕಿ ಡಾ.ಚೇತನಾ, ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಮಾತನಾಡಿದರು.