ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಇತಿಹಾಸ ಪ್ರಸಿದ್ಧ ಗ್ರಾಮದೇವತೆ ದಂಡಿಮಾರಮ್ಮ ದೇವಿ ತೆಪ್ಪೋತ್ಸವ ಜ.24 ರ ಶುಕ್ರವಾರ ಸಂಜೆ ಚೋಳೇನಹಳ್ಳಿ ಕೆರೆ ಅಂಗಳದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.ಕಸಬಾ ಚೋಳೇನಹಳ್ಳಿ ಕೆರೆಯ ಅಂಗಳದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಗಿರಿಯ ಗ್ರಾಮ ದೇವತೆ ದಂಡಿಮಾರಮ್ಮ ತೆಪ್ಪೋತ್ಸವ ಆಚರಿಸಲು ಕೆರೆಯ ಅಚ್ಚುಕಟ್ಟುದಾರರು, ರೈತರು, ಭಕ್ತರ ಮನವಿಗೆ ಈ ಹಿಂದೆ ಮಾತು ಕೊಟ್ಟಿದ್ದೆ. ಅದರಂತೆ ದೇವಿಯ ತೆಪ್ಪೋತ್ಸವ ಸೇವೆ ಮಾಡುವ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದು ಸಕಲ ಸಿದ್ದತೆ ಮಾಡಲಾಗಿದೆ. ಪ್ರತಿ ವರ್ಷ ಕೆರೆ ತುಂಬಿ ಸಮೃದ್ಧಿಯಾಗಿ ಜನರು ಶಾಂತಿ ,ನೆಮ್ಮದಿ ಜೀವನ ನಡೆಸುವಂತಾಗಲಿ ಎಂದು ದೇವಿಯಲ್ಲಿ ಬೇಡಲಾಗಿದೆ ಎಂದರು.
ಈ ವೇಳೆ ಮಾತನಾಡಿದ ಎಂಎಲ್ ಸಿ ಆರ್.ರಾಜೇಂದ್ರ ಗ್ರಾಮದೇವತೆ ದಂಡಿಮಾರಮ್ಮ ತೆಪ್ಪೋತ್ಸವವು 1972ರಲ್ಲಿ ನಡೆದಿತ್ತು .ಕೆಲವು ಕಾರಣಗಳಿಂದ ಸ್ಥಗಿತಗೊಂಡಿತ್ತು. ಕ್ಷೇತ್ರದ ಜನತೆಗೆ ಒಳಿತುಂಟಾಗಲಿ ಎಂದು ಹಿರಿಯರು ಸಲಹೆ ನೀಡಿದ ಕಾರಣ ಮತ್ತು ಸಹಕಾರ ಸಚಿವರು ಹಾಗೂ ನಮ್ಮ ತಂಡ ಸ್ವಂತ ಖರ್ಚಿನಲ್ಲಿ ದೇವಿಯ ಸೇವೆ ಮಾಡಲು ಇಚ್ಚಿಸಿದ್ದೇವೆ. ಈ ಧಾರ್ಮಿಕ ಕಾರ್ಯಕ್ಕಾಗಿ ಕಳೆದ 40 ದಿನಗಳಿಂದ ತಯಾರಿ ನಡೆಸಿದ್ದು ಕನಿಷ್ಠ 500 ಜನರು ಕೂರುವ ವೇದಿಕೆಯನ್ನು ಕೆರೆ ಕೋಡಿ ಮೇಲೆ ಕೃತಕವಾಗಿ ನಿರ್ಮಾಣ ಮಾಡಲಾಗಿದೆ.ನಿರ್ಭಯವಾಗಿ ತೆಪ್ಪೋತ್ಸವ ಕಾರ್ಯಕ್ರಮ ನೋಡಬಹುದು ಎಂದರು.ಕಾಶಿ ಪುರೋಹಿತರಿಂದ ಗಂಗಾರತಿ ಪೂಜೆ
ತೆಪ್ಪೋತ್ಸವ ನಡೆಯುವ ಮೊದಲು ಬೆಳಿಗ್ಗೆ 11ಕ್ಕೆ ಬೆಳ್ಳಿ ರಥದಲ್ಲಿ ದಂಡಿಮಾರಮ್ಮ ದೇವಿಯನ್ನು ಮೆರವಣಿಗೆ ಮೂಲಕ ಕೆರೆ ಬಳಿ ತರಲಾಗುತ್ತದೆ. ಸಂಜೆ 6 ರಂದು ಪ್ರಾರಂಭವಾಗುವ ಧಾರ್ಮಿಕ ಕಾರ್ಯಗಳಲ್ಲಿ ಕಾಶಿಯಿಂದ ಬರುವ ಪುರೋಹಿತರು 40 ನಿಮಿಷಗಳ ಕಾಲ ಗಂಗಾರತಿ ಮಾಡಲಿದ್ದಾರೆ. ತೆಪ್ಪದಲ್ಲೇ 8 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ತಡ ರಾತ್ರಿವರೆಗೂ ವಿವಿಧ ದೇವತಾ ಕಾರ್ಯಗಳು ನಡೆಯುತ್ತವೆ. ಇದರಲ್ಲಿ ಚಂಡೇವಾದ್ಯ, ಹನುಮಾನ್ ವೇಶಧಾರಿಗಳು ಸೇರಿದಂತೆ 8 ಕಲಾ ತಂಡಗಳು ನೃತ್ಯ ರೂಪಕ ನಡೆಸಲಾಗುತ್ತದೆ. ರಾಜ್ಯದಲ್ಲೇ ಕೆರೆಯಲ್ಲಿ ಬೃಹತ್ ತೆಪ್ಪೋತ್ಸವ ,ಗಂಗಾರತಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲಾಗಿದೆ. ಕಾರ್ಯಕ್ರಮ ಯಶಸ್ವಿಯಾಗಲು ನಮ್ಮ ತಂಡದ ಸ್ನೇಹಿತರು,ಅಧಿಕಾರಿಗಳು ಜೊತೆಗಿದ್ದು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಪೂಜ್ಯರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ಧರಬೆಟ್ಟದ ಶ್ರೀವೀರಭದ್ರಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ವೆಂಕಟರಮಣಪ್ಪ, ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು ,ಮುಖಂಡರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಎಸಿ ಗೋಟೂರು ಶಿವಪ್ಪ, ಮಾಜಿ ಸಚಿವ ವೆಂಕಟರಮಣಪ್ಪ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಮಾಜಿ ಅಧ್ಯಕ್ಷ ನಂಜುಂಡರಾಜು,ತಿಮ್ಮರಾಜು,ಮುಖಂಡರಾದ ತುಂಗೋಟಿ ರಾಮಣ್ಣ, ನಾರಾಯಣಪ್ಪ, ಕಾರಮರಡಿ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಡಿವೈಎಸ್‌ಪಿ ಮಂಜುನಾಥ್, ಪಿಎಸ್ಐ ವಿಜಯ್ ಕುಮಾರ್, ಇಂಜಿನಿಯರ್ ಮಂಜು ಕಿರಣ್ ಹಾಗೂ ವಿವಿಧ ಹತಂದ ಜನಪ್ರತಿನಿಧಿಗಳು ,ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.