ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಇತಿಹಾಸ ಪ್ರಸಿದ್ಧ ಮಧುಗಿರಿ ದಂಡಿಮಾರಮ್ಮ ದೇವಿಗೆ ಭಕ್ತಾಧಿಗಳು ಸೇರಿ ಜ. 21ರಂದು ಐತಿಹಾಸಿಕ ತೆಪ್ಪೋತ್ಸವ ಆಚರಣೆ ಮಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ರಾಜಣ್ಣ ತಿಳಿಸಿದರು.ಇಲ್ಲಿನ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತೆಪ್ಪೋತ್ಸವ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಚೋಳೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸಲು ತೆರಳಿದ್ದ ವೇಳೆ ಪಣ್ಣೆ ರೈತರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ದಂಡಿಮಾರಮ್ಮ ದೇವಿಯ ತೆಪ್ಪೋತ್ಸವ ಆಚರಿಸುವಂತೆ ಸಚಿವರ ಗಮನಕ್ಕೆ ತಂದ ಹಿನ್ನಲೆಯಲ್ಲಿ ಸಚಿವರ ಸಲಹೆ ಮೇರೆಗೆ ತೆಪ್ಪೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿರುವ ಕಾರಣ ದೇಗುಲದ ಆಡಳಿತಾಧಿಕಾರಿ, ಎಸಿ ಗೋಟೂರು ಶಿವಪ್ಪ ಅವರ ಮುಂದಾಳತ್ವದಲ್ಲಿ ತೆಪ್ಪೋತ್ಸವ ಆಚರಣೆ ಮಾಡಲಾಗುತ್ತಿದೆ. ಇದರ ಖರ್ಚು ವೆಚ್ಚ ಇರುವುದಿಲ್ಲ, ಭಕ್ತಾಧಿಗಳು ಮತ್ತು ಸಂಘ ಸಂಸ್ಥೆಗಳ ಸಹಕಾರದ ಜೊತೆಗೆ ಎಷ್ಟೇ ವೆಚ್ಚವಾದರೂ ಸರಿ ದೇವರ ಕೆಲಸ ಮಾಡೋಣ ಎಂದು ಸಚಿವರು ಸೂಚಿಸಿದ್ದು, ತೆಪ್ಪೋತ್ಸವಕ್ಕೆ ಏನೇಲ್ಲಾ ಸಿದ್ದತೆ ಮಾಡಿಕೊಳ್ಳಬೇಕು ಎಂಬುದನ್ನು ಕಮಿಟಿಯಲ್ಲಿ ಚರ್ಚಿಸಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಸುತ್ತೇವೆ. ಈ ಧಾರ್ಮಿಕ ಆಚರಣೆಗೆ ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಭಕ್ತಾಧಿಗಳು ತೆಪ್ಪೋತ್ಸವ ವೀಕ್ಷಿಸಲು ಕೆರೆ ಏರಿ ಅಗಲೀಕರಣ ಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಕಾಶಿಯಿಂದ ಬರುವ ಸಾಧು ಸಂತರಿಂದ ಗಂಗಾ ಪೂಜೆ ನೆರವೇರಿಸುವ ಮೂಲಕ ದಂಡಿಮಾರಮ್ಮ ತಾಯಿಯ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಗುವುದು. ಅಂದು ಪಟ್ಟಣದಾದ್ಯಂತ ಹಬ್ಬದ ರೀತಿ ಜಗ ಮಗಿಸುವ ದೀಪಾಲಂಕಾರ ಮಾಡಲಾಗುವುದು. ಸಮೀಪದಲ್ಲೇ ವೇದಿಕೆ ನಿರ್ಮಿಸಿ ಕಾರ್ಯಕ್ರಮ ಮಾಡಲಾಗುವುದು. ದೇಗುಲದ ಆವರಣದಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ಭಕ್ತರಿಗೆ ತೆಪ್ಪೋತ್ಸವದ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸುವ ಜೊತೆಗೆ ಮಧ್ಯಾಹ್ನ , ರಾತ್ರಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಚಿನಕವಜ್ರ, ಕೆರೆಗಳ ಪಾಳ್ಯಹಾಗೂ ಸುಮುತ್ತಲ ಗ್ರಾಮಗಳ ಎಲ್ಲ ಹೆಣ್ಣುಮಕ್ಕಳು ಭಾಗವಹಿಸುವಂತೆ ಮತ್ತು ಇದು ಪಕ್ಷಾತೀತ ಧಾರ್ಮಿಕ ಕಾರ್ಯಕ್ರಮವಾಗಿದೆ. ದೇವರ ಉತ್ಸವವಾದ ಕಾರಣ ಎಲ್ಲ ಅಧಿಕಾರಿಗಳು ಸಹಕರಿಸುವ ಕಾರ್ಯಕ್ರಮ ಯಶಸ್ವಿಗೊಳಿಸುವತೆ ಮನವಿ ಮಾಡಿದರು.ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಎಸಿ ಗೋಟೂರು ಶಿವ್ಪಪ , ತಹಸೀಲ್ದಾರ್ ಶಿರಿನ್‌ತಾಜ್, ಡಿವೈಎಸ್‌ಪಿ ರಾಮಚಂದ್ರಪ್ಪ, ತಾಪಂ ಇಒ ಲಕ್ಷ್ಮಣ್, ಉಪಾಧ್ಯಕ್ಷೆ ಸುಜಾತ, ಮುಖ್ಯಾಧಿಕಾರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿ ನಾರಾಯಣರೆಡ್ಡಿ , ದೇಗುಲದ ಅರ್ಚಕ ಲಕ್ಷ್ಮೀಕಾಂತ ಆಚಾರ್, ಮುರುಳಿ, ಅರುಣ್ ಕುಮಾರ್, ಪುರಸಭೆ ಸದಸ್ಯರಾದ ಮುಂಜುನಾಥ್ ಆಚಾರ್, ತಿಮ್ಮರಾಜು, ಆಲೀಮ್, ನಟರಾಜು, ಎಂ.ವಿ.ಗೋವಿಂದರಾಜು, ಎಂ.ಶ್ರೀಧರ್, ಸುಧಾಕರ್‌ರಾವ್, ಗುಂಡಣ್ಣ, ವಕೀಲರ ಸಂಘದ ಅಧ್ಯಕ್ಷ ಪಿಸಿಕೆರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್‌ಬಾಬು, ಜಿ.ಎನ್.ಮೂರ್ತಿ, ಮೈದನಹಳ್ಳಿ ಕಾಂತರಾಜು, ಕಸಾಪ ಅಧ್ಯಕ್ಷೆ ಸಹನಾನಾಗೇಶ್, ಮಾಜಿ ಅಧ್ಯಕ್ಷ ಕೆ.ಪ್ರಕಾಶ್ , ಗಂಗಣ್ಣ , ನೌಕರರ ಸಂಘದ ಅಧ್ಯಕ್ಷ ರಂಗಪ್ಪ ವಕೀಲ ಪಿ.ದತ್ತಾತ್ರೇಯ, ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಖಂಡರು ಭಾಗವಹಿಸಿದ್ದರು.40 ಕೋಟಿ ಅನುದಾನ ಬಿಡುಗಡೆ ಮಧುಗಿರಿ ಪಟ್ಠಣ್ಕಕೆ ಅಮೃತ-2 ಯೋಜನೆಯಡಿ ಮನೆ ಮನೆಗೆ ಪೈಪ್ ಲೈನ್ ಅಳವಡಿಸಲು 40 ಕೋಟಿ ಅನುದಾನ ಬಿಡುಗಡೆಯಾಗಿದೆ. ಸಿದ್ದಾಪುರ ಕೆರೆ ಏರಿ ಅಗಲೀಕರಣಗೊಳಿಸಿ ಏರಿ ಮೇಲೆ ವಾಕಿಂಗ್ ಪಾರ್ಕ್ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಾಗುವುದು. 900 ಕೋಟಿ ರು.ವೆಚ್ಚದಲ್ಲಿ ಶಿರಾ-ಗೌರಿಬಿದನೂರು ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಚಾಲನೆ ಸಿಗಲಿದ್ದು, ಮಧುಗಿರಿ ವ್ಯಾಪ್ತಿಯ ಡಿ.ವಿ.ಹಳ್ಳಿ ಬಳಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ಕೆಶಿಪ್ ರಸ್ತೆಗೆ ಸೇರಲಿದೆ. ಮುಂದಿನ ದಿನಗಳಲ್ಲಿ 25 ಲಕ್ಷ ರು.ವೆಚ್ಚದಲ್ಲಿ ಪಟ್ಟಣದ ಐತಿಹಾಸಿಕ ಕಲ್ಯಾಣಿಗಳ ಸಮಗ್ರ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿದ ಅವರು, ಜ. 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಎಂಎಲ್‌ಸಿ ರಾಜೇಂದ್ರ ಭರವಸೆ ನೀಡಿದರು.