ಸಾರಾಂಶ
ಕಡೂರಿನಲ್ಲಿ ಸಾಮಾಜಿಕ ಅರಿವು, ಜಾಗೃತಿ ಶಿಬಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಮನುಷ್ಯ ಇಂದು ಹೆಚ್ಚು ಸ್ವಾರ್ಥ ಪರನಾಗಿ ಎಲ್ಲೆಡೆ ಸ್ವಾರ್ಥವೇ ವಿಜೃಂಭಿಸುತ್ತಿರುವುದು ಅಪಾಯಕಾರಿ ಎಂದು ಕುವೆಂಪು ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗದ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ಆತಂಕ ವ್ಯಕ್ತಪಡಿಸಿದರು.ಕಡೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಘಟಕ, ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಸಹಯೋಗದಲ್ಲಿ ನಡೆದ ಸಾಮಾಜಿಕ ಅರಿವು ಹಾಗೂ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದು ಜಗತ್ತಿನಲ್ಲಿ ಮನುಷ್ಯತ್ವ ಕಡಿಮೆಯಾಗುತ್ತಿರುವುದು ಸಮಾಜಕ್ಕೆ ಬಹು ದೊಡ್ಡ ಅಪಾಯ. ನಾವು ಸಮಾಜವನ್ನು ಹೇಗೆ ಅರ್ಥೈಸಿಕೊಳ್ಳುತ್ತಿದ್ದೇವೆ. ನನಗೆ ಹೇಗೆ ಜಗತ್ತು ಕಾಣುತ್ತದೆ ಹಾಗೆ ನಡೆಯಲು ಮನುಷ್ಯ ಮುಂದಾಗುತ್ತಿರುವುದು ಸ್ವಾರ್ಥದ ಪರಮಾವಧಿಯ ಕ್ರೌರ್ಯ ಆಗಿದೆ. ಮನುಷ್ಯನ ಒಳಗಿರುವ ಸ್ವಾರ್ಥ ಭಾವನೆಗಳನ್ನು ಯಾರು ಶುದ್ಧೀಕರಿಸಬೇಕು ಎಂಬ ಪ್ರಶ್ನೆ ಮೂಡುತ್ತಿದೆ. ಮನುಷ್ಯನ ದೇಹ ಶುಚಿಗೊಳಿಸಲು ಬೇಕಾದಷ್ಟು ಸಾಬೂನು, ಪರ್ಫ್ಯೂಮ್, ಸೌಂದರ್ಯ ವರ್ಧಕಗಳು ಇವೆ. ಆದರೆ ಮನುಷ್ಯನ ಮನಸ್ಸಿನ ಸ್ವಾರ್ಥವನ್ನು ಹೇಗೆ ತೊಳೆಯಬೇಕು ಎಂಬ ಪ್ರಶ್ನೆ ಮೂಡುತ್ತಿದೆ ಎಂದರು. ಮನುಷ್ಯತ್ವದ ವಿವೇಕ ಮತ್ತು ಸಂಸ್ಕೃತಿ ಯುವ ಸಮೂಹ ಹಾಗು ವಿದ್ಯಾರ್ಥಿಗಳನ್ನು ತಲುಪುತ್ತಿಲ್ಲ ಎಂಬ ದೂರು ಇದೆ. ಹಾಗಾಗಿ ಮನುಷ್ಯತ್ವದ ಕುರಿತು ತಮ್ಮನ್ನು ತಾವು ಮೊದಲು ತಿದ್ದಿಕೊಂಡು ಸ್ವಾರ್ಥ ತುಂಬಿರುವ ಮಾನವ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಅದನ್ನು ಆತ್ಮ ನಿರೀಕ್ಷಣೆಯಿಂದ ಪಡೆಯಲು ಸಾಧ್ಯ ಎಂದರು. ವಚನಕಾರರು, ದಾಸರು, ಸಾಹಿತಿಗಳು ತಮ್ಮನ್ನು ಓರೆಗೆ ಹಚ್ಚಿಕೊಂಡು ನಂತರ ಸಮಾಜವನ್ನು ತಿದ್ದುತ್ತಿದ್ದರು. ಭಾವ ನಾತ್ಮಕ ಬುದ್ಧಿವಂತಿಕೆ ವಿದ್ಯಾರ್ಥಿಗಳಿಗೆ ಬೇಕು. ಹಾಗಾಗಿ ಭವಿಷ್ಯದ ಜಗತ್ತಿನ ಬೆಳಕಾಗಬೇಕಾಗಿರುವ ನೀವುಗಳು ಮುಂದೆ ಸ್ವಾಸ್ಥ್ಯಸಮಾಜದ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ರಾಜಣ್ಣ ಕೆ.ಎ. ಮಾತನಾಡಿ, ನಾವು ನಮ್ಮನ್ನು ಅರಿತುಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂಬುದು ಈ ಶಿಬಿರದ ಪ್ರಮುಖ ಉದ್ದೇಶ. ಇಂದಿನ ಆಧುನಿಕ ಯುಗದ ಒತ್ತಡದ ಬದುಕಿನ ನಡುವೆ ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಸಮಾಜದ ವಾಸ್ತವ ಅರ್ಥ ಮಾಡಿಕೊಂಡು ಸುಸ್ತಿರ ಸಮಾಜ ನಿರ್ಮಾಣದ ಜಾಗೃತಿ ಮೂಡಿಸಬೇಕು. ಆ ಮೂಲಕ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಆಶಯದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣದ ಪಾಲುದಾರರಾಗಲು ಶಿಬಿರದ ಸದುಪಯೋಗ ಪಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಶಾಸ್ತ್ರದ ಮುಖ್ಯಸ್ಥ ಎಸ್ .ಪಿ .ಮಂಜುನಾಥ್ ,ಒಎಸಿ ಸಂಚಾಲಕ ರಾಘವೇಂದ್ರ ಕುಮಾರ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಟಿ.ಕೆ. ತಿಮ್ಮೇಗೌಡ, ರೋವರ್ ಸ್ಕೌಟ್ ಲೀಡರ್ ತಿಮ್ಮರಾಜು, ರೇಂಜರ್ಸ್ ಲೀಡರ್ ಎಚ್.ಆರ್. ಜ್ಯೋತಿ, ಸವಿತಾ, ಉಪನ್ಯಾಸಕರು, ಸಿಬ್ಬಂದಿ ಹಾಗು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
19ಕೆಕೆಡಿಯು1.ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಮಾಜಿಕ ಅರಿವು ಹಾಗು ಜಾಗೃತಿ ಶಿಬಿರವನ್ನು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ ಉದ್ಘಾಟಿಸಿದರು.