ಮಹನೀಯರ ಚಿಂತನೆಗಳನ್ನು ಪಾಲಿಸದಿದ್ದರೆ ಅಪಾಯ ಖಂಡಿತ: ಗೊಲ್ಲಹಳ್ಳಿ ಶಿವಪ್ರಸಾದ್ ಎಚ್ಚರಿಕೆ

| Published : May 01 2025, 12:46 AM IST

ಮಹನೀಯರ ಚಿಂತನೆಗಳನ್ನು ಪಾಲಿಸದಿದ್ದರೆ ಅಪಾಯ ಖಂಡಿತ: ಗೊಲ್ಲಹಳ್ಳಿ ಶಿವಪ್ರಸಾದ್ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಆತಂಕದ ಪರಿಸ್ಥಿತಿಯಲ್ಲಿದೆ. ಅಂಬೇಡ್ಕರ್ ಅವರ ಸಂವಿಧಾನವನ್ನು ಬದಿಗೊತ್ತುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಸೇರಿದಂತೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಅಂಬೇಡ್ಕರ್ ಕುರಿತ ವಿಚಾರ ಸಂಕಿರಣ ಆಯೋಜಿಸಿರುವುದು ಅಭಿನಂದನೀಯ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬುದ್ಧ, ಬಸವ, ಕನಕದಾಸರು, ಅಂಬೇಡ್ಕರ್, ಕುವೆಂಪು ಅವರಂತಹ ಮಹನೀಯರು ಈ ದೇಶದ ಶಕ್ತಿ ಮತ್ತು ಸಂಪತ್ತು. ಇವರ ಚಿಂತನೆಗಳನ್ನು ಪಾಲಿಸದಿದ್ದರೆ ಅಪಾಯ ಖಂಡಿತ ಎಂದು ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಎಚ್ಚರಿಸಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ, ತಾಲೂಕಿನ ಸಮಾನ ಮನಸ್ಕರರ ವೇದಿಕೆ, ರಾಜ್ಯ ರೈತಸಂಘ, ವಿವಿಧ ದಲಿತ ಸಂಘಟನೆಗಳು, ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆ, ಉದಯರವಿ ಟ್ರಸ್ಟ್, ಪದವಿ ಪೂರ್ವ ಉಪನ್ಯಾಸಕರ ಸಂಘ, ಸಮಾಗಮ ವೆಲ್ ಫೇರ್ ಫೌಂಡೇಷನ್, ಸ್ವಾಭಿಮಾನಿ ನೌಕರರ ಬಳಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಕೇಂದ್ರಗಳ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು- ಬರಹ ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ದೇಶ ಆತಂಕದ ಪರಿಸ್ಥಿತಿಯಲ್ಲಿದೆ. ಅಂಬೇಡ್ಕರ್ ಅವರ ಸಂವಿಧಾನವನ್ನು ಬದಿಗೊತ್ತುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಸೇರಿದಂತೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಅಂಬೇಡ್ಕರ್ ಕುರಿತ ವಿಚಾರ ಸಂಕಿರಣ ಆಯೋಜಿಸಿರುವುದು ಅಭಿನಂದನೀಯ ಎಂದರು.

ಅಮ್ಮನಿಲ್ಲದ ಮನೆ ಅನಾಥವಾಗುವಂತೆ ಅಂಬೇಡ್ಕರ್ ಚಿಂತನೆಗಳಿಲ್ಲದ ದೇಶ ಅನಾಥವಾಗುತ್ತದೆ. ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಸೇರಿದಂತೆ ಎಲ್ಲಾ ಮೇರು ವ್ಯಕ್ತಿಗಳನ್ನು ಜಾತಿ ಚೌಕಟ್ಟಿನಲ್ಲಿ ಬಂಧಿಸಲಾಗುತ್ತಿದೆ. ಪ್ರತಿಯೊಬ್ಬರೂ ಮಹನೀಯರ ಚಿಂತನೆಗಳನ್ನು ಅಳವಡಿಸಿಕೊಂಡು ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತ ಶಕ್ತಿಯಲ್ಲ. ಅವರು ಸಮಗ್ರ ಭಾರತದ ಬದಲಾವಣೆಯ ಶಕ್ತಿ. ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿಯ ಜನ ಈಗಲೂ ಇದ್ದಾರೆ. ಆದರೆ, ಅವರಿಗೆ ಅಂಬೇಡ್ಕರ್ ಅವರನ್ನು ತಿರಸ್ಕರಿಸುವ ತಾಕತ್ತಿಲ್ಲ. ಇದಕ್ಕೆ ಅಂಬೇಡ್ಕರ್ ಅವರ ಚಿಂತನೆಗಳ ಶಕ್ತಿಯೇ ಕಾರಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂವಿ.ರಾಜೇಗೌಡ, ಜಾಗೃತ ಕರ್ನಾಟಕ ವೇದಿಕೆ ಸಂಚಾಲಕ ಬಿ.ಸಿ.ಬಸವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ರಾಜ್ಯ ಆರ್.ಟಿ.ಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ಎಸ್‌ಸಿ/ ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಯೋಗೇಶ್, ದಲಿತ ಮುಖಂಡ ಸೋಮಸುಂದರ್, ಬಸ್ತಿ ರಂಗಪ್ಪ, ರೈತ ಮುಖಂಡ ಕೆ.ಆರ್.ಜಯರಾಂ ಇದ್ದರು.