ಆರೋಗ್ಯಕರ ಆಹಾರ ಪದ್ಧತಿ ನಮ್ಮ ದೈಹಿಕ ಹಾಗೂ ಮಾನಸಿಕ ಯೋಗ ಕ್ಷೇಮಕ್ಕೆ ಅಡಿಪಾಯ. ಆದರೆ, ಇಂದು ನಮ್ಮ ಆಹಾರ ಶೈಲಿ ಬದಲಾಗಿ ಅನೇಕ ಜೀವನ ಶೈಲಿ ಕಾಯಿಲೆಗೆ ತುತ್ತಾಗುತ್ತಿರುವುದು ದುರ್ದೈವದ ಸಂಗತಿ. ನಮ್ಮ ಊಟದ ತಟ್ಟೆಯಲ್ಲಿರಬೇಕಾದಷ್ಟು ಪ್ರಮಾಣದಲ್ಲಿ ಪೂರ್ಣ ಧಾನ್ಯಗಳು, ತರಕಾರಿ, ಸೊಪ್ಪುಗಳಿಲ್ಲದಿರುವುದು ಮನುಷ್ಯನ ಅನಾರೋಗಕ್ಕೆ ಕಾರಣವಾಗಿದೆ.

ಧಾರವಾಡ:

ಆರೋಗ್ಯಕ್ಕೆ ಆಹಾರವೇ ಮೂಲಾಧಾರ. ಆಧುನಿಕತೆಯ ಭರಾಟೆಯಲ್ಲಿ ಸಕ್ಕರೆ, ಮೈದಾ ಹಾಗೂ ಉಪ್ಪುಗಳಂತಹ ಬಿಳಿ ವಿಷಗಳನ್ನು ನಾವಿಂದು ಹೇರಳವಾಗಿ ಉಪಯೋಗಿಸುವುದರಿಂದ ನಾನಾ ರೀತಿಯ ಕಾಯಿಲೆಗೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ ಎಂದು ಕವಿವ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಹೇಳಿದರು.

ಸಂಘವು ಆಯೋಜಿಸಿದ್ದ ಚನ್ನವೀರಗೌಡ ಅಣ್ಣಾ ಪಾಟೀಲ ದತ್ತಿಯಲ್ಲಿ ‘ಪೋಷಕತ್ವ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಆರೋಗ್ಯಕರ ಆಹಾರ ಪದ್ಧತಿ ನಮ್ಮ ದೈಹಿಕ ಹಾಗೂ ಮಾನಸಿಕ ಯೋಗ ಕ್ಷೇಮಕ್ಕೆ ಅಡಿಪಾಯ. ಆದರೆ, ಇಂದು ನಮ್ಮ ಆಹಾರ ಶೈಲಿ ಬದಲಾಗಿ ಅನೇಕ ಜೀವನ ಶೈಲಿ ಕಾಯಿಲೆಗೆ ತುತ್ತಾಗುತ್ತಿರುವುದು ದುರ್ದೈವದ ಸಂಗತಿ. ನಮ್ಮ ಊಟದ ತಟ್ಟೆಯಲ್ಲಿರಬೇಕಾದಷ್ಟು ಪ್ರಮಾಣದಲ್ಲಿ ಪೂರ್ಣ ಧಾನ್ಯಗಳು, ತರಕಾರಿ, ಸೊಪ್ಪುಗಳಿಲ್ಲದಿರುವುದು ಮನುಷ್ಯನ ಅನಾರೋಗಕ್ಕೆ ಕಾರಣವಾಗಿದೆ. ಫೈಬರ್, ವಿಟಮಿನ್ ಹಾಗೂ ಖನಿಜಗಳಂತಹ ಪೋಷಕಾಂಶಗಳುಳ್ಳ ಆಹಾರವೇ ಸರ್ವಶ್ರೇಷ್ಠವಾದುದು ಎಂದರು.

ಇಂದು ಸಂಸ್ಕರಿಸಿದ ಆಹಾರ ಹಾಗೂ ಬೇಕರಿ ಪದಾರ್ಥಗಳ ಸೇವನೆಯಿಂದ ಬೆಂಗಳೂರು ನಗರದಲ್ಲಿ ಶೇ. 40ರಷ್ಟು ಮಕ್ಕಳು ಸ್ಥೂಲಕಾಯದವರಾಗಿದ್ದಾರೆ. 2030ಕ್ಕೆ ಇಡೀ ಜಗತ್ತಿನಲ್ಲಿ ಭಾರತ ಹೃದಯರೋಗ, ಮಧುಮೇಹಿಗಳ ತವರು ಆಗುವುದರಲ್ಲಿ ಸಂಶಯವಿಲ್ಲ. ಜೋಮೆಟೋ, ಸ್ವಿಗ್ಗಿಯಿಂದ ಮನೆ ಬಾಗಿಲಿಗೆ ತರಿಸಿಕೊಳ್ಳುವ ಆಹಾರ ಸೇವನೆ ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಸರಿ ಎಂದ ಅವರು, ಮಧ್ಯಮ ವರ್ಗದ ಊಟವೇ ಯೋಗ್ಯವೆಂದು ವರದಿ ತಿಳಿಸಿದೆ. ಮುಂದಿನ ಪೀಳಿಗೆಗೆ ಸತ್ವಭರಿತ ಸಾತ್ವಿಕ ಆಹಾರ ಸಿಗಬೇಕೆಂದು ಹೇಳಿದರು.ಲೋಕೋಪಯೋಗಿ ಇಲಾಖೆಯ ವಿಶ್ರಾಂತ ಕಾರ್ಯದರ್ಶಿ ಜಿ.ಸಿ. ತಲ್ಲೂರ, ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ. ಬಿ. ದೇಸಾಯಿ ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿದರು. ಸಿ.ಎಸ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ರಾಜು ಪಾಟೀಲ ವಂದಿಸಿದರು.