ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಹೇಮಾವತಿ ಲಿಂಕ್ ಕೆನಾಲ್‌ನಿಂದ ಜಿಲ್ಲೆಯ ಹೇಮಾವತಿ ನೀರಿಗೆ ಕುತ್ತು ಬರಲಿದ್ದು, ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ವಿಧಾನಸಭೆಯಲ್ಲಿ ಲಿಂಕ್ ಕೆನಾಲ್ ವಿರುದ್ದ ಧ್ವನಿ ಎತ್ತುವಂತೆ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಅವರು, ಜಾತಿ, ಪಕ್ಷದ ಒತ್ತಡಕ್ಕೆ ಮಣಿದು ಇಂತಹ ಘನ ಘೋರ ಅನ್ಯಾಯವನ್ನು ತಡೆಯಲು ಮುಂದಾಗದಿದ್ದರೆ ಮುಂದಿನ ಪೀಳಿಗೆಗೆ ನೀವು ವಿಷ ಕೊಟ್ಟಂತೆ ಆಗುತ್ತದೆ. ಹಾಗಾಗಿ ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಜಿಲ್ಲೆಯ ಎಲ್ಲಾ ಶಾಸಕರು ಸದನದ ಒಳಗೆ ಮತ್ತು ಹೊರಗೆ ಧ್ವನಿ ಎತ್ತಬೇಕೆಂಬ ಆಗ್ರಹ ರೈತ ಸಂಘದ್ದಾಗಿದೆ ಎಂದರು.ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ,ರೈತರಿಗೆ ಮಾರಕ ವಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಸೇರಿದಂತೆ ಕೊಟ್ಟ ಮಾತಿಗೆ ತಪ್ಪಿದೆ. ಅಲ್ಲದೆ ಸರಕಾರದ ನೀತಿಗಳಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರನ್ನು ಎದುರು ಹಾಕಿಕೊಂಡು ಸರಕಾರ ಉಳಿದ ಉದಾಹರಣೆಯಿಲ್ಲ. ಹಾಗಾಗಿ ಕೂಡಲೇ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಎ.ಗೋವಿಂದರಾಜು ಎಚ್ಚರಿಸಿದರು.ತುಮಕೂರು ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಅರಣ್ಯ ಇಲಾಖೆ ಮತ್ತು ಬಗರ್ ಹುಕ್ಕಂ ಸಾಗುವಳಿದಾರರ ನಡುವಿನ ಸಂಘರ್ಷ ಹೆಚ್ಚಾಗಿದೆ. ಹತ್ತಾರು ವರ್ಷಗಳಿಂದಲೂ ಭೂಮಿ ಉಳುಮೆ ಮಾಡುತ್ತಾ ಬಂದಿದ್ದರೂ ಒಂದಿಲ್ಲೊಂದು ಕಾರಣ ನೀಡಿ, ಸಾಗುವಳಿ ಚೀಟಿ ನೀಡುತ್ತಿಲ್ಲ. ಅಲ್ಲದೆ ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಕಳೆದ ಏಪ್ರಿಲ್‌ನಿಂದ ಇಲ್ಲಿಯವರಗೂ 1182 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದಿರುವುದು ರೈತರ ಆತ್ಮಹತ್ಯೆಯ ಹಿಂದಿನ ಪ್ರಮುಖ ಕಾರಣವಾಗಿದೆ. ಇದನ್ನು ತಡೆಯಲು ಸರಕಾರ ಕೃಷಿ ಬೆಲೆ ನಿಗದಿ ಆಯೋಗದ ಶಿಫಾರಸ್ಸುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಬರಗಾಲದ ನಡುವೆಯೂ ಬ್ಯಾಂಕುಗಳು ಸಾಲ ವಸೂಲಿಗೆ ರೈತರ ಜಮೀನುಗಳನ್ನು ಹರಾಜು ಹಾಕುತ್ತಿರುವುದು ಮುಂದುವರೆದಿದೆ. ತುರುವೇಕೆರೆಯ ರೈತರೊಬ್ಬರ ಸಾಲಕ್ಕಾಗಿ ಈ ಹರಾಜು ಮೂಲಕ ಜಮೀನನ್ನು ಹರಾಜು ಮಾಡಿದ್ದು, ಕೂಡಲೇ ಹರಾಜು ರದ್ದು ಮಾಡಿ, ಭೂಮಿಯನ್ನು ವಾಪಸ್ಸು ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಬ್ಯಾಂಕುಗಳಿಗೆ ಸೂಕ್ತ ಸಲಹೆ ನೀಡಬೇಕೆಂದು ಗೋವಿಂದರಾಜು ಆಗ್ರಹಿಸಿದರು.ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ ಮಾತನಾಡಿ, ಪಹಣಿ, ದುರಸ್ತಿ, ಪಕ್ಕಾಪೋಡು, ಹದ್ದುಬಸ್ತು, ನೊಂದಣಿ ಶುಲ್ಕ ಎಲ್ಲವೂ ದುಬಾರಿ ಮಾಡಿದ್ದು ಕೂಡಲೇ ವಾಪಸ್ ಪಡೆಯಬೇಕು. ಕಳೆದ ೯ ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಜನರಿಗೆ ಹಾಲಿನ ಪ್ರೋತ್ಸಾಹ ಅತಿ ಅವಶ್ಯಕವಾಗಿ ಬೇಕಾಗಿದೆ. ಹಾಗೆಯೇ ನ್ಯಾಪೇಡ್ ಮೂಲಕ ಖರೀದಿಸಿರುವ ರಾಗಿ, ಕೊಬ್ಬರಿಯ ಪ್ರೋತ್ಸಾಹ ದನ ಬಿಡುಗಡೆ ಮಾಡಬೇಕು.ಎತ್ತಿನಹೊಳೆ ಮತ್ತು ಭದ್ರ ಮೇಲ್ದಡೆ ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂಬುದು ರೈತ ಸಂಘದ ಆಗ್ರಹವಾಗಿದೆ ಎಂದರು.ಈ ಸಂಬಂಧ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೊಡ್ಡಮಾಳಯ್ಯ,ತಾಲೂಕು ಅಧ್ಯಕ್ಷರಾದ ಚಿಕ್ಕಬೋರೇಗೌಡ, ವೆಂಕಟೇಗೌಡ, ಲಕ್ಷ್ಮಣಗೌಡ,ಡಿ.ಆರ್.ರಾಜಶೇಖರ್, ಕೆಂಚಪ್ಪ,ಸಿ.ಜಿ.ಲೋಕೇಶ್,ರಂಗಹನುಮಯ್ಯ, ಶಬ್ಬೀರ್‌ಪಾಷ, ತಿಮ್ಮೇಗೌಡ, ರವೀಶ್ ಹಾಗೂ ಎಲ್ಲಾ ತಾಲೂಕು ಪ್ರತಿನಿಧಿಗಳು ಭಾಗವಹಿಸಿದ್ದರು.
ರೈತರ ಬೇಡಿಕೆಗಳು
ಹೇಮಾವತಿ ಲಿಂಕ್ ಕ್ಯಾನೆಲ್ ಬೇಡಭೂ ಸುಧಾರಣೆ, ಎಪಿಎಂಸಿ, ಗೋ ಹತ್ಯೆ ಕಾನುನೂ ವಾಪಸ್
ರೈತರ ಆತ್ಮಹತ್ಯೆ ತಡೆಗೆ ಕ್ರಮಬಗರ್ ಹುಕುಂ ಸಾಗುವಳಿಗೆ ಚೀಟಿ ವಿತರಣೆ
ಸಾಲಕ್ಕಾಗಿ ಜಮೀನು ಹರಾಜು ನಿಲ್ಲಿಸಬೇಕು9 ತಿಂಗಳಿನಿಂದ ಬಾಕಿ ಹಾಲಿನ ಹಣ ಬಿಡುಗಡೆ