ಸಾರಾಂಶ
ಪ್ರತಿಯೊಬ್ಬರು ಪರಿಸರ ರಕ್ಷಣೆ ಜವಾಬ್ದಾರಿ ಹೊತ್ತು ತಪ್ಪದೆ ಗಿಡ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಕೆಲಸ ಮಾಡಬೇಕಿದೆ. ಅಂದಾಗ ಮಾತ್ರ ಏರುತ್ತಿರುವ ತಾಪಮಾನದಿಂದ ಈ ಜಗತ್ತು, ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸಲು ಸಾಧ್ಯ ಎಂದು ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.
ಹುಬ್ಬಳ್ಳಿ : ಮಾನವನ ಸ್ವಾರ್ಥದಿಂದ ಪ್ರಕೃತಿ ಹಾಳಾಗುತ್ತಿದೆ. ಇಷ್ಟೊಂದು ಉಷ್ಣಾಂಶ ಹಿಂದೆ ಎಂದಾದರೂ ಇತ್ತೇ. ಇದಕ್ಕೆಲ್ಲ ಮನುಷ್ಯನ ಸ್ವಾರ್ಥವೇ ಕಾರಣ. ಇದೇ ಪರಿಸ್ಥಿತಿ ಮುಂದುವರಿದರೆ ಜಗತ್ತೇ ಇಲ್ಲವಾಗುತ್ತದೆ ಎಂದು ಸಿದ್ದಗಿರಿಯ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.
ಇಲ್ಲಿನ ಉಣಕಲ್ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವದಂಗವಾಗಿ ಶ್ರೀ ಮಠಕ್ಕೆ ಭೇಟಿ ನೀಡಿದ ಅವರು, ಮಠದ ಹೊಸ ಕಟ್ಟಡವನ್ನು ವೀಕ್ಷಿಸಿದರು. ಮಠದ ಕಾರ್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಭಕ್ತರ ಸಭೆಯಲ್ಲಿ ಮಾತನಾಡಿದರು.
ದೊಡ್ಡ ದೊಡ್ಡ ಹಿಮಾಲಯ ಪರ್ವತಗಳೇ ಉಷ್ಣಾಂಶಕ್ಕೆ ಕರಗಿ ನೀರಾಗುತ್ತಿದೆ. ಈಗಲೇ ಹುಬ್ಬಳ್ಳಿ-ಧಾರವಾಡದಂತಹ ನಗರಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ 50 ಡಿಗ್ರಿ ಕೂಡ ದಾಟುತ್ತದೆ. ಇಷ್ಟೊಂದು ಪ್ರಕೃತಿ ಹಾಳಾಗುತ್ತಿರುವುದಕ್ಕೆ ನಾವೇ ಕಾರಣ. ಗಿಡ ಮರಗಳನ್ನು ಕಡಿಯುತ್ತೇವೆ. ಯಾರೊಬ್ಬರು ಮರಳಿ ಸಸಿ ಬೆಳೆಸುವ ಪರಿಸರ ರಕ್ಷಿಸುವ ಕೆಲಸಕ್ಕೆ ಮುಂದಾಗುವುದಿಲ್ಲ. ಇದರಿಂದ ಪರಿಸರ ಸಂಪೂರ್ಣ ಹಾಳಾಗುತ್ತಿದೆ. ಹೀಗೆ ನಾವು ನಿರ್ಲಕ್ಷ್ಯ ಮಾಡುತ್ತ ಸಾಗಿದರೆ ಮುಂದೊಂದು ದಿನ ಜಗತ್ತೇ ಇನ್ನಿಲ್ಲದಂತಾದರೂ ಅಚ್ಚರಿ ಪಡಬೇಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಅದಕ್ಕಾಗಿ ಪರಿಸರ ರಕ್ಷಣೆ ಎಲ್ಲರ ಹೊಣೆ. ಇದನ್ನು ಎಲ್ಲರೂ ಅರಿತುಕೊಂಡು ಪರಿಸರ ರಕ್ಷಣೆ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆ ಜವಾಬ್ದಾರಿ ಹೊತ್ತು ತಪ್ಪದೆ ಗಿಡ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಕೆಲಸ ಮಾಡಬೇಕಿದೆ. ಅಂದಾಗ ಮಾತ್ರ ಏರುತ್ತಿರುವ ತಾಪಮಾನದಿಂದ ಈ ಜಗತ್ತು, ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸಲು ಸಾಧ್ಯ. ಇಲ್ಲದಿದ್ದಲ್ಲಿ ಪರಿಸ್ಥಿತಿ ಗಂಭೀರವಾಗುತ್ತದೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದರು.
ಧಾರ್ಮಿಕ ಕಾರ್ಯಗಳು ಹೆಚ್ಚೆಚ್ಚು ನಡೆಯಬೇಕು. ಧಾರ್ಮಿಕ ಕಾರ್ಯಕ್ರಮಗಳಿಂದ ಮನುಷ್ಯನಲ್ಲಿ ಧಾರ್ಮಿಕ ಸಂಸ್ಕಾರ ಲಭಿಸುತ್ತದೆ. ಪರಸ್ಪರರಲ್ಲಿ ಆತ್ಮೀಯತೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಉಣಕಲ್ ಸಿದ್ದಪ್ಪಜ್ಜನ ಜಾತ್ರೆಯ ಹೆಸರಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳೆಲ್ಲ ಶ್ಲಾಘನೀಯ ಎಂದರು.
ಈ ವೇಳೆ ಮಠದ ಅಧ್ಯಕ್ಷರೂ ಆಗಿರುವ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸೇರಿದಂತೆ ಹಲವರಿದ್ದರು.